ಸಂಸದ ಅನಂತಕುಮಾರ್ ಹೆಗ್ಡೆ ಅವರಿಂದ ನಮೋ ಭಾರತ ಸಂಘಟನೆಗೆ ಚಾಲನೆ, ದಾವಣಗೆರೆಯಲ್ಲಿ ಭಾರಿ ಜನಸ್ಪಂದನೆ – ಕಹಳೆ ನ್ಯೂಸ್
ದಾವಣಗೆರೆ : ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಭಾರತದ ಪ್ರಧಾನಿಯನ್ನಾಗಿಸಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಂಡು ಆರಂಭವಾಗಿರುವ ‘ನಮೋ ಭಾರತ’ ಸಂಘಟನೆಗೆ ಸಂಸದ ಶ್ರೀ ಅನಂತಕುಮಾರ ಹೆಗ್ಡೆ ಅವರು ದಾವಣಗೆರೆಯಲ್ಲಿ ಚಾಲನೆ ನೀಡಿದರು. ಈ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಆರ್ಥಿಕ ತಜ್ಞ ಶ್ರೀ ವಿಶ್ವನಾಥ ಭಟ್ ಹಾಗೂ ದಾವಣಗೆರೆ ಸಂಸದ GM ಸಿದ್ದೇಶ್ವರ ಅವರು ಉಪಸ್ಥಿತರಿದ್ದರು.
ಕರ್ಣ ನೃತ್ಯ ತಂಡದ ದೇಶಭಕ್ತಿಗೀತೆಯ ನ್ರತ್ಯ ರೂಪಕದೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಎಲ್ಲರ ಗಮನಸೆಳೆಯಿತು. ನಂತರ ದಾವಣಗೆರೆಯ ನಮೋ ಭಾರತ ಸಂಘಟನೆಯ ಕಾರ್ಯಕರ್ತರು ಗಣ್ಯ ಅತಿಥಿಗಳನ್ನ ಹಾಗೂ ಉದ್ಘಾಟಕರಾದ ಸಂಸದ ಅನಂತ ಕುಮಾರ್ ಹೆಗ್ಡೆ ಅವರನ್ನು ವೇದಿಕೆಗೆ ಆಹ್ವಾನಿಸಿದರು.
ದೀಪ ಬೆಳಗಿಸಿ ಭಾರತಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿಸಲಾಯಿತು. ಮುಖ್ಯ ಅತಿಥಿಗಳೊಂದಿಗೆ ಸಂಘಟನೆಯ ಅಧ್ಯಕ್ಷರಾದ ಚೇತನ್ ಆಜಾದ್, ಕಾರ್ಯದರ್ಶಿಗಳಾದ ರಾಘವೇಂದ್ರ ರಾವ್ ಮತ್ತು ನೀರಜ್ ಕಾಮತ್ ಹಾಗೂ ದಾವಣಗೆರೆ ವಿಭಾಗದ ಸಂಚಾಲಕರಾದ ಶ್ರೀಕಾಂತ್ ಹುದ್ದಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಮ್ಮ ಸಂಘಟನೆಯ ಕಾರ್ಯಕರ್ತರಾದ ಆಶ್ವೀಜ್ ಹಿರೇಮಠ್ ಅವರ ದೇವರ ಸ್ತುತಿಯ ಪ್ರಾರ್ಥನಾ ಗೀತೆಯೊಂದಿಗೆ ಪರದೆಯನ್ನು ಸರಿಸುವುದರ ಮೂಲಕ ಸಂಘಟನೆಯ ಅಧಿಕೃತ ಲಾಂಛನವನ್ನು ಅನಾವರಣ ಮಾಡಲಾಯಿತು.
ಚೇತನ್ ಆಜಾದ್ ಹಾಗೂ ನೀರಜ್ ಕಾಮತ್ ಅವರು ನಮೋ ಭಾರತ ಸಂಘಟನೆಯ ಉದ್ದೇಶ ಗುರಿ ಹಾಗೂ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಮಾತನಾಡಿ ಜನರಿಗೆ ಸಂಘಟನೆಯ ಬಗ್ಗೆ ಅರಿವು ಮೂಡಿಸಿದರು. ಚೇತನ್ ಆಜಾದ್ ಮಾತನಾಡಿ, ” ನಮೋ ಭಾರತ ಎಂದರೆ, ಭಾರತ ಮಾತೆಗೆ ನಮಿಸುತ್ತಿದ್ದೇವೆ ಎಂದರ್ಥ. ಕರ್ನಾಟಕದಿಂದ ಎಲ್ಲಾ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಿಸಿ, ಮೋದಿಯವರಿಗೆ 28 ಕಮಲದ ಹೂವುಗಳನ್ನು ಉಡುಗೊರೆಯಾಗಿ ನೀಡಬೇಕೆಂದು ಕರೆ ನೀಡಿದರು. ನಾವು ಬಿಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ನಮ್ಮದು ವಿವಿಧ ಕ್ಷೇತ್ರಗಳಲ್ಲಿನ ವೃತ್ತಿಪರರು ತಮ್ಮ ಸಮಯವನ್ನು ಸಂಘಟನೆಗಾಗಿ ಮೀಸಲಿಟ್ಟು ಸಾಮಾಜಿಕ ಜವಾಬ್ದಾರಿಯ ರಾಜಕಾರಣಕ್ಕೆ ಇಳಿದಿದ್ದೇವೆ ಎಂದು ಸ್ಪಷ್ಟಪಡಿಸಿದರು.
ನಮೋ ಭಾರತ್” ಸಂಘಟನೆಗೆ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿದ ಅನಂತಕುಮಾರ್ ಹೆಗ್ಡೆ ಯವರು, ಭಾರತ ಸ್ವಾತಂತ್ರ್ಯ ಹೊಂದುವುದಕ್ಕೆ ಮುಂಚಿನ ಪರಿಸ್ಥಿತಿಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, “ಭಾರತಕ್ಕೆ ಕೇವಲ ಉಪವಾಸದಿಂದ ಸ್ವಾತಂತ್ರ್ಯ ಲಭಿಸಿಲ್ಲ ಜನರು ನೀರಿನಂತೆ ರಕ್ತ ಚೆಲ್ಲಿದ ಪರಿಣಾಮ ನಮಗೆ ಸ್ವಾತಂತ್ರ್ಯ ಸಿಕ್ಕಿತು. ಜನರು ರಕ್ತ ಚೆಲ್ಲದೇ, ಬಲಿದಾನ ಮಾಡದೇ ಹೋರಾಟ ಮಾಡಿದ್ದಲ್ಲಿ ನಾವು ಇನ್ನೂ ಬ್ರಿಟಿಷರ ಅಧೀನದಲ್ಲಿಯೇ ಬದುಕ ಬೇಕಾಗುತ್ತಿತ್ತು” ಎಂದು ಹೇಳಿದರು. ಈ ಸಂದರ್ಭದಲ್ಲಿ ದೇಶಕ್ಕೆ ಹೊಸ ವಿಶ್ವಾಸವನ್ನು ಕೊಟ್ಟಿದ್ದು ಸರ್ದಾರ್ ವಲ್ಲಭಾಯಿ ಪಟೇಲ್ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರು. ಆಗ ಈ ಮಹನೀಯರು ದೇಶದಲ್ಲಿ ಜನರ ಭಾವನೆಗಳನ್ನು ಅರಿತು ರಾಷ್ಟ್ರೀಯತೆಯ ವಿಚಾರವನ್ನು ಜನಮನದಲ್ಲಿ ಬಿತ್ತಿ, ತಮ್ಮ ವಿಶ್ವಾಸಾರ್ಹ ನಡೆಯಿಂದ ಜನನಾಯಕರಾದರು. ಹಾಗೆಯೇ ನಂತರದ ದಿನಗಳಲ್ಲಿ ಹಣ ರಾಜಕೀಯ ಮತ್ತು ಜಾತಿ ಇದ್ದರಷ್ಟೇ ಸಾಕು ಅಧಿಕಾರ ಪಡೆಯಬಹುದು ಎಂಬಂತಿದ್ದ ಕಾಂಗ್ರೆಸ್ ಪಕ್ಷಕ್ಕೆ ಅಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಶಾಕ್ ನೀಡಿದ್ದರು ಎಂದು ಹೇಳಿದರು.
ಇವತ್ತು ನಾವು ಮೋದಿಯವರ ನಾಯಕತ್ವವನ್ನು ಬೆಂಬಲಿಸಬೇಕು, ಏಕೆಂದರೆ ಮೋದಿಯವರ ಮಾತುಗಳಲ್ಲಿ ಸ್ಪಷ್ಟತೆ ಇದೆ. ಏನೋ ಒಂದು ಮಾಡುತ್ತೇವೆ ಅಥವಾ ಸಾಧ್ಯವಾದರೆ ಮಾಡುತ್ತೇವೆ ಎನ್ನುವ ಅಸ್ಪಷ್ಟ ನಿಲುವಿಲ್ಲ. “ಮೋದಿಯವರ ಈ ಸ್ಪಷ್ಟತೆ ಹಾಗೂ ನಿಖರತೆ ಈಗಿನ ಬುದ್ಧಿಜೀವಿ ಹಾಗೂ ಕಾಂಗ್ರೆಸ್ ಪಾಳಯದಲ್ಲಿ ಗೊಂದಲ ಸೃಷ್ಟಿಸಿದೆ” ಎಂದು ಹೇಳಿದರು.
ಜನರು ಅವರಿಗೆ ಬೇಕಾದ ನಾಯಕನನ್ನು ಪಡೆದುಕೊಳ್ಳುವುದಿಲ್ಲ ಬದಲಾಗಿ ಅವರ ಅರ್ಹತೆಗೆ ತಕ್ಕಂತೆ ನಾಯಕರನ್ನು ಪಡೆದುಕೊಳ್ಳುತ್ತಿದ್ದಾರೆ. ಹಿಂದೆ ಸಮಸ್ತ ವಿಶ್ವಕ್ಕೆ ನಾಗರೀಕತೆ, ಸಂಸ್ಕ್ರತಿ ಹಾಗೂ ಜ್ಞಾನದ ಪ್ರಸಾರ ಮಾಡಿದ್ದ ಭಾರತ, ನಂತರದ ದಿನಗಳಲ್ಲಿ ಅನೇಕ ಆಕ್ರಮಣ ಹಾಗೂ ಸಮರ್ಥ ನಾಯಕತ್ವದ ಕೊರತೆಯಿಂದ ವಿಶ್ವಮಟ್ಟದಲ್ಲಿ ರಾರಾಜಿಸಲಿಲ್ಲ. ಈಗ ಆ ಗತ ವೈಭವ ಮರುಕಳಿಸುವ ದಿನಗಳು ಪ್ರಾರಂಭಆಗಿದೆ. ಮತ್ತೆ ಭಾರತದ ರಕ್ತ ಜಗತ್ತನ್ನು ಆಳುವ ದಿನಗಳು ಬರಲಿವೆ. ಭಾರತೀಯತೆ ಮತ್ತೊಮ್ಮೆ ಜಗತ್ ವ್ಯಾಪಿಯಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಜಗತ್ತು ನಮ್ಮನ್ನು ಒಪ್ಪಿಕೊಳ್ಳಲು ತಯಾರಾಗಿದೆ. ಆ ನಾಯಕತ್ವವೂ ನಮ್ಮಲ್ಲಿದೆ. ನಮ್ಮನ್ನು ಕರೆದು ಪೂಜೆಮಾಡಲು ಜಗತ್ತು ಕಾದು ನಿಂತುಕೊಂಡಿದೆ. ಆದರೆ ಕುಳಿತುಕೊಳ್ಳುವ ಯೋಗ್ಯತೆ ತೋರಿಸದಿದ್ದರೆ ಹೇಗೆ? ಅದಕ್ಕಾಗಿ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಕಾರ್ಯಕರ್ತರಿಗೆ ಕರೆ ಕೊಟ್ಟು ಸಂಘಟನೆಗೆ ಶುಭ ಹಾರೈಸಿದರು.
ನಂತರ ಮಾತನಾಡಿದ, ಆರ್ಥಿಕ ತಜ್ಞರಾದ ಶ್ರೀ ವಿಶ್ವನಾಥ್ ಭಟ್ ಅವರು, 2014 ರಲ್ಲಿ ನರೇಂದ್ರ ಮೋದಿಯವರು ದೇಶದ ಜವಾಬ್ದಾರಿ ವಹಿಸಿಕೊಂಡಾಗ ಭಾರತದ ಆರ್ಥಿಕತೆ ಭಾರಿ ಸಂಕಷ್ಟದಲ್ಲಿತ್ತು. ಕಾಂಗ್ರೆಸ್ಸಿನ ಒಂದು ಕುಟುಂಬದ ಭ್ರಷ್ಟಾಚಾರ, ಹಾಗೂ ಅಸಮರ್ಪಕ ಆರ್ಥಿಕ ನೀತಿಗಳಿಂದಾಗಿ ಹಾಗೂ ಅವರಿಗೆ ಬೇಕಾದವರಿಗೆ ಬ್ಯಾಂಕ್ ಗಳಿಂದ ಅನಿಯಮಿತ ಸಾಲ ನೀಡಿ, ಆ ಉದ್ಯಮಿಗಳು ಮರುಪಾವತಿ ಮಾಡದೇ ದೇಶದ ಸಮಗ್ರ ಆರ್ಥಿಕತೆಯನ್ನು ಹದಗೆಡಿಸಿ ತಮ್ಮ ಬೇಳೆ ಬೇಯಿಸಿಕೊಂಡು ದೇಶವನ್ನು ಕೊಳ್ಳೆಹೊಡೆಯಿತು ಎಂದು ಹೇಳಿ 2014 ರ ಆರ್ಥಿಕ ಪರಿಸ್ಥಿತಿಯ ಕುರಿತ ಅಂಕಿ ಅಂಶಗಳನ್ನು ನೀಡಿ ಪರಿಸ್ಥಿತಿಯ ಅವಲೋಕನ ಮಾಡಿಸಿದರು. ಯುಪಿಎ ಸರ್ಕಾರದ 2014 ರ ಬಜೆಟ್ ನಲ್ಲಿ ದೇಶದ ಅರ್ಥಿಕತೆಗೆ ಸಂಬಂಧಿಸಿದ ಅಂಕಿ ಅಂಶಗಳು ಸತ್ಯಕ್ಕೆ ದೂರವಾಗಿದ್ದವು. ಅಂದಿನ ವಾಸ್ತವವನ್ನು ಮೋದಿ ಸರ್ಕಾರ ಬಹಿರಂಗ ಪಡಿಸಿದ್ದರೆ, ದೇಶದ ಅರ್ಥ ವ್ಯವಸ್ಥೆಯೇ ದಿವಾಳಿಯಾಗುತ್ತಿತ್ತು. ಆಗ ರಾಜಕೀಯವನ್ನು ಬದಿಗಿಟ್ಟು, ಆರ್ಥಿಕ ಸುಧಾರಣೆಯ ತುರ್ತು ಅಗತ್ಯಕ್ರಮಗಳನ್ನು ಮೋದಿ ಕೈಗೊಂಡರು. ಈಗ 4 ವರ್ಷಗಳಲ್ಲಿ ಅರ್ಥಿಕ ವಿಷಮ ಸ್ಥಿತಿಯನ್ನು ಸಂಪೂರ್ಣ ತಿಳಿಯಾಗಿಸಿದ್ದಾರೆ.
ಕಾಂಗ್ರೆಸ್ ನವರು ತಮ್ಮ ಅವಧಿಯಲ್ಲಿ ಉದ್ಯಮಗಳಿಗೆ ನೀಡಿದ ಅನಿಯಮಿತ ಸಾಲ ಸೌಲಭ್ಯದಿಂದ ದೇಶದಲ್ಲಿ ಉತ್ಪಾದನೆ, ಉದ್ಯೋಗ ಹೆಚ್ಚಾಬೇಕಿತ್ತು. ಜಿಡಿಪಿ ಸೂಚ್ಯಂಕ ಜಾಸ್ತಿ ಆಗಬೇಕಿತ್ತು. ಆದರೆ ಅದಕ್ಕೆ ತದ್ವಿರುದ್ಧವಾಗಿ ಜಿಡಿಪಿ 8 ರ ಮೇಲಿದ್ದ ಸೂಚ್ಯಂಕ, 4 ಕ್ಕೆ ಇಳಿಯಿತು. ನಿರುದ್ಯೋಗ ಸಮಸ್ಯೆ ಜಾಸ್ತಿಯಾಯಿತು. ಇದಕ್ಕೆ ಕಾಂಗ್ರೆಸ್ ನವರು ಉತ್ತರಿಸಬೇಕು ಎಂದು ಆಗ್ರಹಿಸಿದರು. ಹಾಗೆಯೇ ಮೋದಿಯವರ ಸಮರ್ಥ ನಾಯಕತ್ವವನ್ನು ಶ್ಲಾಘಿಸಿ, ನಮೋ ಭಾರತ ತಂಡದ ನಿಸ್ವಾರ್ಥ ಸ್ವಯಂ ಸೇವಕ ಕಾರ್ಯಕರ್ತರೊಂದಿಗೆ ಎಲ್ಲರೂ ಕೈ ಜೋಡಿಸಿ “ಮಿಷನ್ 365+” ಅಭಿಯಾನವನ್ನು ಯಶಸ್ವಿ ಆಗಿಸಬೇಕೆಂದು ಕರೆ ನೀಡಿದರು.
ದಾವಣೆಗೆರೆಯ ಸಂಸದರಾದ GM ಸಿದ್ದೇಶ್ವರ ಅವರು ಮಾತನಾಡಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, 2014 ರಲ್ಲಿ ಇದೇ ತಂಡ ನಮೋ ಬ್ರಿಗೇಡ್ ಎಂಬ ಹೆಸರಿನಲ್ಲಿ ರಾಜ್ಯಾದ್ಯಂತ ಕೆಲಸ ಮಾಡಿ, ದಾವಣಗೆರೆ ಭಾಗದಲ್ಲಿ ಬಿಜೆಪಿ ಗೆಲುವಿನಲ್ಲಿಕೂಡ ಮಹತ್ವದ ಪಾತ್ರ ವಹಿಸಿತ್ತು. ಈಗ ನಮೋ ಭಾರತ ಎಂಬ ಹೆಸರಿನಲ್ಲಿ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ತರುಣ ಪಡೆ ಸಜ್ಜಾಗಿದೆ. ಈ ಅಭಿಯಾನ ಯಶಸ್ವಿಯಾಗಿ ದೇಶದ ಚುಕ್ಕಾಣಿಯನ್ನು ಮತ್ತೊಮ್ಮೆ ಮೋದಿಯವರ ಕೈಗೆ ನೀಡಬೇಕಿರುವುದು ಈ ಹೊತ್ತಿನ ಅಗತ್ಯ. ಹಾಗಾಗಿ ಎಲ್ಲರೂ ದೇಶದ ಹಿತ ದೃಷ್ಟಿಯಿಂದ ಈ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕೆಂದು ವಿನಂತಿಸಿದರು.
ಕಾರ್ಯಕ್ರಮಕ್ಕೆಸಭಾಂಗಣದಲ್ಲಿ 1700 ಕ್ಕೂ ಹೆಚ್ವು ಜನ ಸೇರಿದ್ದರು. ಸಭಾಂಗಣದಲ್ಲಿ 1400 ಜನ ಕೂರುವಷ್ಟು ಸ್ಥಳವಾಕಾಶ ಇದ್ದರೂ, ಹಲವು ಮಂದಿ ನಿಂತುಕೊಂಡೇ ಸಂಪೂರ್ಣ ಕಾರ್ಯಕ್ರಮ ವೀಕ್ಷಿಸಿದರು. ಡಾ| ಜ್ಞಾನಶ್ರೀ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.
ಚಿತ್ರಕಲಾವಿದರಾದ ಸ್ವಾತಿಕುಮಾರ್ ಶೆಟ್ಟಿಯವರು ನಮೋಭಾರತ ಸಂಘಟನೆಯ ಲಾಂಛನವನ್ನು ಚಿತ್ರಿಸಿಕೊಟ್ಟು ಸಹಕರಿಸಿದರು. ಹಾಗೂ ರಿಶೀತ್ ಪ್ರಶಾಂತ್ ಕೇಸರಿ ಧ್ವಜದ ಮೇಲೆ ಮೋದಿಯವರ ಭಾವಚಿತ್ರವನ್ನು ಚಿತ್ರಿಸಿಕೊಟ್ಟು ಸಹಕರಿಸಿದರು. ಈ ಮೋದಿ ಬಾವುಟ ಕಾರ್ಯಕ್ರಮಕ್ಕೆ ಬಂದ ಎಲ್ಲರ ಗಮನಸೆಳೆಯಿತು.ಸಂಘಟನೆಯ ದಾವಣಗೆರೆ ವಿಭಾಗದ ಕಾರ್ಯಕರ್ತರಾದ ಶ್ರೀಕಾಂತ್ ಹುದ್ದಾರ್, ಮಾದೇಶ್ ಎಮ್.ಬಿ, ಅನಿಲ್ ಕುಮಾರ್, ಪವನ್ ಕುಮಾರ್, ಶಿವಪ್ರಸಾದ್ ಕಾರ್ಯಕ್ರಮದ ಯಶಸ್ವಿ ಆಯೋಜನೆಯಲ್ಲಿ ಸಹಕರಿಸಿದರು. ದೀಪರಾಜ್ ಅವರು ವೀಡಿಯೋ ಸಂಯೋಜನೆ ಹಾಗೂ ಪ್ರಚಾರ ಕಾರ್ಯದಲ್ಲಿ ಸಹಕರಿಸಿದರು. ಶ್ರೀಮತಿ ಸಹನಾ ಮಂಜುನಾಥ್ ಅವರಿಂದ ವಂದೇ ಮಾತರಂ ಗೀತೆಯ ಗಾಯನದೊಂದಿಗೆ ಕ್ರಾರ್ಯಕ್ರಮ ಸಮಾಪ್ತಿಗೊಂಡಿತು.