Sunday, September 8, 2024
ಸುದ್ದಿ

“ನಮ್ಮ ಆರೋಗ್ಯ ನಮ್ಮ ಆಹಾರದ ಮೇಲೆ ಅವಲಂಬಿತವಾಗಿದೆ. ಕ್ರಮಬದ್ಧವಾದ ಜೀವನ ಶೈಲಿಯು ಮಧುಮೇಹವನ್ನು ತಡೆಗಟ್ಟಬಲ್ಲುದು” ಡಾ| ನಜೀರ್‌ ಅಹಮ್ಮದ್- ಕಹಳೆ ನ್ಯೂಸ್

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕ, ಕಲ್ಲಾರೆಯ ನಜೀರ್‌ ಡಯಾಬಿಟಿಸ್‌ ಸೆಂಟರ್‌ ಹಾಗೂ ಫಾದರ್‌ ಪತ್ರಾವೋ ಆಸ್ಪತ್ರೆ ಇವಗಳ ಸಂಯುಕ್ತ ಆಶ್ರಯದಲ್ಲಿ ಮಧುಮೇಹ ದಿನದ ಅಂಗವಾಗಿ ಮಧುಮೇಹದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನಜೀರ್‌ ಡಯಾಬಿಟಿಸ್‌ ಸೆಂಟರ್‌ನ ವೈದ್ಯರಾದ ಡಾ| ನಜೀರ್‌ ಅಹ್ಮದ್‌ರವರು “ಇತ್ತೀಚಿನ ದಿನಗಳಲ್ಲಿ ಮಧುಮೇಹ ಕಾಯಿಲೆಗೊಳಗಾಗುವವರ ಸಂಖ್ಯೆಯು ಗಣನೀಯವಾಗಿ ಹೆಚ್ಚಾಗಿದೆ. ಅಸಮರ್ಪಕ ಜೀವನಶೈಲಿ, ಮಾನಸಿಕ ಒತ್ತಡ ಹಾಗೂ ಅಸಂತುಲಿತ ಆಹಾರ ಮುಂತಾದ ಕಾರಣಗಳಿಂದ ಹೆಚ್ಚಾಗಿ ಡಯಾಬಿಟಿಸ್‌ ಕಂಡು ಬರುತ್ತದೆ. ಕ್ರಮಬದ್ಧ ಜೀವನ ಶೈಲಿ, ನಿಯಮಿತವಾದ ವ್ಯಾಯಾಮ ಮಧುಮೇಹವನ್ನು ನಿಯಂತ್ರಿಸಲು ಸಹಕಾರಿ” ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆಂಟನಿ ಪ್ರಕಾಶ್‌ ಮೊಂತೆರೊರವರು “ಪ್ರಿತಿಯೊಬ್ಬ ವ್ಯಕ್ತಿಗೂ ಡಯಾಬಿಟಿಸ್‌ನ ಬಗ್ಗೆ ಅರಿವು ಇರಬೇಕು. ನಿಯಮಿತವಾಗಿ ತಪಾಸಣೆಗೊಳಪಟ್ಟರೆ ಡಯಾಬಿಟಿಸ್‌ ಬರುವ ಸಾಧ್ಯತೆಗಳನ್ನು ಮನಗಂಡು ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬಹುದು” ಎಂದು ಹೇಳಿದರು. ವೇದಿಕೆಯಲ್ಲಿ ಕಾಲೇಜಿನ ಉಪಪ್ರಾಂಶುಪಾಲರೂ, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕರೂ ಆದ ಡಾ| ಎ ಪಿ ರಾಧಾಕೃಷ್ಣ ಉಪಸ್ಥಿತರಿದ್ದರು.

ಪ್ರೀತಮ್‌ ಮತ್ತು ಬಳಗ ಪ್ರಾರ್ಥಿಸಿದರು, ಡಾ| ಮಾಲಿನಿ ಕೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ಸಂಚಾಲಕರಾದ ಡಾ| ಡಿಂಪಲ್‌ ಫೆರ್ನಾಂಡಿಸ್‌ ವಂದಿಸಿದರು. ಫಾ| ಪತ್ರಾವೋ ಆಸ್ಪತ್ರೆಯ ವತಿಯಿಂದ ವಿದ್ಯಾರ್ಥಿಗಳ ಹಾಗೂ ಕಾಲೇಜು ಸಿಬ್ಬಂದಿಗಳ ಆರೋಗ್ಯ ತಪಾಸಣೆಯನ್ನು ಮಾಡಲಾಯಿತು. ನಂತರ ಡಾ| ನಜೀರ್‌ ಅಹ್ಮದ್ ರವರು ಸಮಾಲೋಚನೆ ನಡೆಸಿ ಸೂಕ್ತ ಸಲಹೆಗಳನ್ನು ನೀಡಿದರು.