ನ. 24ಕ್ಕೆ ಪ್ರೈಮ್‌ನಲ್ಲಿ ಕಾಂತಾರಾ ಬಿಡುಗಡೆ; ಓಟಿಟಿಯಲ್ಲಿ ಕೆಜಿಎಫ್ ದಾಖಲೆ ಮುರಿಯುತ್ತಾ ಶೆಟ್ಟಿ ಸಿನಿಮಾ? – ಕಹಳೆ ನ್ಯೂಸ್
ಬೆಂಗಳೂರು, ನ. 17: ರಿಷಬ್ ಶೆಟ್ಟಿ ನಟನೆ-ನಿರ್ದೇಶನದ ಕಾಂತರಾ ಸಿನಿಮಾ ಕನ್ನಡ ನಾಡಿನಲ್ಲಿ ಮಾತ್ರವಲ್ಲ ದೇಶದ ಹಲವೆಡೆ ಜನರ ಮಿಡಿತ ಗಿಟ್ಟಿಸುವಲ್ಲಿ ಯಶಸ್ವಿಯಾಗಿದೆ. ಹಿಂದಿ ಮಾರುಕಟ್ಟೆಯಲ್ಲಿ ನೂರು ಕೋಟಿ ರೂ ಗಳಿಕೆಯತ್ತ ಸಾಗುತ್ತಿದೆ. ಒಟ್ಟಾರೆ ಗಳಿಕೆ 400 ಕೋಟಿ ರೂ ಗಡಿ ದಾಟಿ ಹೋಗುತ್ತಿದೆ.
ಹಲವಾರು ರೀತಿಯ ದಾಖಲೆಗಳನ್ನು ಕಾಂತರಾ ಪುಡಿಪುಡಿ ಮಾಡುತ್ತಿದೆ. ಇದೇ ವೇಳೆ, ಕಾಂತಾರಾ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ನವೆಂಬರ್ 24ರಂದು ಬಿಡುಗಡೆಯಾಗುತ್ತಿರುವುದಾಗಿ ಖಚಿತ ಸುದ್ದಿಯೊಂದು ಹೊರಬಿದ್ದಿದೆ.
ಅಮೇಜಾನ್ ಪ್ರೈಮ್‌ನಲ್ಲಿ ನವೆಂಬರ್ 4ರಂದೇ ಕಾಂತಾರಾವನ್ನು ಬಿಡುಗಡೆ ಮಾಡಲು ನಿರ್ಮಾಪಕರು ಸಿದ್ಧವಿದ್ದರು. ಆದರೆ, ಥಿಯೇಟರ್‌ನಲ್ಲಿ ಚಿತ್ರದ ಹವಾ ಇನ್ನೂ ಮುಂದುವರಿಯುತ್ತಿದ್ದರಿಂದ ಓಟಿಟಿಯಲ್ಲಿ ಬಿಡುಗಡೆ ಮಾಡುವುದನ್ನು ಮುಂದೂಡಲಾಗಿತ್ತು. ನವೆಂಬರ್ 18ರಂದು, ಅಂದರೆ ನಾಳೆ ಪ್ರೈಮ್‌ನಲ್ಲಿ ಕಾಂತಾರಾ ಸ್ಟ್ರೀಮ್ ಆಗುತ್ತದೆ ಎಂದು ಹೇಳಲಾಗಿತ್ತು. ಕೊನೆಗೆ ಅದೂ ಕೂಡ ಒಂದು ವಾರ ಮುಂದೂಡಿಕೆಯಾಗಿ ಈಗ ನವೆಂಬರ್ 24ಕ್ಕೆ ಸ್ಟ್ರೀಮಿಂಗ್ ಡೇಟ್ ಫಿಕ್ಸ್ ಆಗಿದೆ. ಅಷ್ಟರೊಳಗೆ ಕಾಂತಾರಾ ಸಿನಿಮಾದ ಒಟ್ಟಾರೆ ಗಲ್ಲಾಪೆಟ್ಟಿಗೆ ಕಲೆಕ್ಷನ್ಸ್ 400 ರೂ ಗಡಿ ದಾಟಿ ಹೋಗುವುದು ಖಚಿತವಾಗಿರುತ್ತದೆ.
ಕಾಂತಾರಾ ನೋಡಿ ಬೆರಗಾದ ಝೀರೋಧ ಸಿಇಒ ಹೇಳಿದ್ದೇನು?
ಒಟಿಟಿಯಲ್ಲಿ ಕಾಂತಾರಾ ಎಷ್ಟಕ್ಕೆ ಸೇಲ್?
ಎಲ್ಲವೂ ಅಂದುಕೊಂಡಂತೆ ಆದರೆ ನವೆಂಬರ್ 24, ಅಂದರೆ ಮುಂದಿನ ಗುರುವಾರ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಕಾಂತಾರಾ ಕಾಲಿಡಲಿದೆ. ಆದರೆ, ಎಷ್ಟಕ್ಕೆ ಮಾರಾಟವಾಗಿದೆ ಎಂಬುದರ ಖಚಿತ ಮಾಹಿತಿ ಇಲ್ಲ. ಕಾಂತಾರಾ ನಿರ್ಮಾಪಕರಿಗೆ ಒಟಿಟಿಯಿಂದ ದೊಡ್ಡ ಮೊತ್ತ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಕೆಲ ವರದಿಗಳ ಪ್ರಕಾರ ಪ್ರೈಮ್ ವಿಡಿಯೋ ಕಾಂತಾರಾದ ಒಟಿಟಿ ಹಕ್ಕನ್ನು ಸುಮಾರು 150 ಕೋಟಿ ರೂಪಾಯಿಗೆ ಖರೀದಿ ಮಾಡಿರಬಹುದು. ನವೆಂಬರ್ 4ಕ್ಕೆ ಬಿಡುಗಡೆ ಮಾಡಲು 150 ಕೋಟಿ ರೂಗೆ ಪ್ರೈಮ್ ವಿಡಿಯೊದವರು ಒಪ್ಪಿಕೊಂಡಿದ್ದಿರಬಹುದು. ಈಗ ಮೂರು ವಾರ ವಿಳಂಬವಾಗಿರುವುದರಿಂದ ಕಡಿಮೆ ಹಣಕ್ಕೆ ಕಾಂತಾರಾದ ಒಟಿಟಿ ಹಕ್ಕು ಮಾರಾಟವಾಗುತ್ತದೆಯಾ ಗೊತ್ತಿಲ್ಲ.
ಒಟಿಟಿಯಲ್ಲಿ ಕಾಂತಾರಾ ನಂ. 2?
ಯಶ್ ನಟನೆಯ ಕೆಜಿಎಫ್-2 ದಾಖಲೆ ಬಾಕ್ಸಾಫೀಸ್‌ನಲ್ಲಿ 1200 ಕೋಟಿ ರೂ ಕಲೆಕ್ಷನ್ ಮಾಡಿ ದೊಡ್ಡ ಧೂಳೆಬ್ಬಿಸಿತ್ತು. ಒಟಿಟಿಯಲ್ಲೂ ಕೆಜಿಎಫ್-2 ದಾಖಲೆ ಮಾಡಿದೆ. ಅಮೇಜಾನ್ ಪ್ರೈಮ್‌ಗೆ ಕೆಜಿಎಫ್-2 ಸಿನಿಮಾದ ಒಟಟಿ ಹಕ್ಕನ್ನು 320 ಕೋಟಿ ರೂಪಾಯಿಗೆ ಮಾರಲಾಗಿತ್ತು. ಇದು ಸದ್ಯ ಭಾರತೀಯ ಸಿನಿಮಾವೊಂದು ಒಟಿಟಿಯಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ದಾಖಲೆಯಾಗಿದೆ. ಈ ವಿಚಾರದಲ್ಲಿ ಕಾಂತಾರಾ ಎರಡನೇ ಸ್ಥಾನ ಪಡೆಯುವ ಸಾಧ್ಯತೆ ಇದೆ. ಒಂದು ವೇಳೆ ವರದಿಗಳಂತೆ ಕಾಂತಾರಾ 150 ಕೋಟಿ ರೂಗೆ ಒಟಿಟಿ ಹಕ್ಕು ಮಾರಿರುವುದು ನಿಜವೇ ಆದಲ್ಲಿ ಕೆಜಿಎಫ್-2 ನಂತರದ ಸ್ಥಾನ ಕಾಂತಾರಾದ್ದಾಗುತ್ತದೆ.
ಬಾಕ್ಸಾಫೀಸ್‌ನಲ್ಲೂ ಅತಿ ಹೆಚ್ಚು ಕಲೆಕ್ಷನ್ ಕಂಡ ಕನ್ನಡ ಸಿನಿಮಾಗಳಲ್ಲಿ ಕೆಜಿಎಫ್-2 ಮೊದಲ ಸ್ಥಾನದಲ್ಲಿದೆ. ಒಟಿಟಿಯಲ್ಲಂತೂ ಭಾರತೀಯ ಸಿನಿಮಾಗಳಲ್ಲೇ ಕೆಜಿಎಫ್-2 ಮೊದಲ ಸ್ಥಾನದಲ್ಲಿದೆ. ಕೇವಲ 15 ಕೋಟಿ ರೂ ಬಜೆಟ್‌ನಲ್ಲಿ ನಿರ್ಮಾಣಗೊಂಡ ಕಾಂತಾರಾ ಸಿನಿಮಾ ಎಲ್ಲಾ ವಿಚಾರದಲ್ಲೂ ಕೆಜಿಎಫ್-2 ಬೆನ್ನು ಬಿದ್ದಿದೆ. ಕೆಜಿಎಫ್-1 ಸಿನಿಮಾದ ಒಟಿಟಿ ಹಕ್ಕನ್ನೂ ಅಮೇಜಾನ್ ಪ್ರೈಮ್ ಪಡೆದುಕೊಂಡಿತ್ತು.
ಒಟಿಟಿಯಲ್ಲಿ ಅತಿ ಹೆಚ್ಚು ಗಳಿಸಿದ ಭಾರತೀಯ ಸಿನಿಮಾಗಳು
1) ಕೆಜಿಎಫ್-2 (ಕನ್ನಡ ಭಾಷೆ): 320 ಕೋಟಿ ರೂ (ಅಮೇಜಾನ್ ಪ್ರೈಮ್‌ನಲ್ಲಿ)
2) ಲಕ್ಷ್ಮೀ ಬಾಂಬ್ (ಹಿಂದಿ ಭಾಷೆ): 125 ಕೋಟಿ ರೂ (ಹಾಟ್‌ಸ್ಟಾರ್)
3) ಭುಜ್: ದಿ ಪ್ರೈಡ್ ಆಫ್ ಇಂಡಿಯಾ (ಹಿಂದಿ ಭಾಷೆ): 110 ಕೋಟಿ ರೂ (ಹಾಟ್‌ಸ್ಟಾರ್‌ನಲ್ಲಿ)
4) ಸಡಕ್-2 (ಹಿಂದಿ ಭಾಷೆ): 70 ಕೋಟಿ ರೂ (ಹಾಟ್‌ಸ್ಟಾರ್‌ನಲ್ಲಿ)
5) ಗುಲಾಬೋ ಸಿತಾಬೋ (ಹಿಂದಿ ಭಾಷೆ): 65 ಕೋಟಿ ರೂ (ಅಮೇಜಾನ್ ಪ್ರೈಮ್‌ನಲ್ಲಿ)
6) ಗುಂಜನ್ ಸಕ್ಸೇನಾ, ದಿ ಕಾರ್ಗಿಲ್ ಗರ್ಲ್ (ಹಿಂದಿ ಭಾಷೆ): 50 ಕೋಟಿ ರೂ (ನೆಟ್‌ಫ್ಲಿಕ್ಸ್)
7) ಶಾಕುಂತಳಾ ದೇವಿ (ಹಿಂದಿ ಭಾಷೆ): 40 ಕೋಟಿ ರೂ (ಅಮೇಜಾನ್ ಪ್ರೈಮ್)
8) ದಿ ಬಿಗ್ ಬುಲ್ (ಹಿಂದಿ ಭಾಷೆ): 40 ಕೋಟಿ ರೂ (ಹಾಟ್‌ಸ್ಟಾರ್‌ನಲ್ಲಿ)
9) ದಿಲ್ ಬೇಚಾರಾ (ಹಿಂದಿ ಭಾಷೆ): 40 ಕೋಟಿ ರೂ (ಹಾಟ್‌ಸ್ಟಾರ್‌ನಲ್ಲಿ)
10) ಪುಷ್ಪಾ (ತೆಲುಗು ಭಾಷೆ): 30 ಕೋಟಿ ರೂ (ಅಮೇಜಾನ್ ಪ್ರೈಮ್‌ನಲ್ಲಿ)
ತಮಿಳಿನ ಕಾಂಚಾಣ ಸಿನಿಮಾದ ರೀಮೇಕ್ ಆಗಿದ್ದ ಅಕ್ಷಯ್ ಕುಮಾರ್ ಅಭಿನಯದ ಲಕ್ಷ್ಮೀ ಬಾಂಬ್ ಹಿಂದಿ ಚಿತ್ರ ಥಿಯೇಟರ್‌ನಲ್ಲಿ ಬಿಡುಗಡೆಯಾಗದೇ ನೇರವಾಗಿ ಓಟಿಟಿಯಲ್ಲಿ ರಿಲೀಸ್ ಆಗಿತ್ತು. ಹೀಗಾಗಿ, ಅದಕ್ಕೆ 125 ಕೋಟಿ ರೂಗೆ ಡೀಲ್ ಕುದುರಿತ್ತು. ಅದಕ್ಕೆ ಹೋಲಿಸಿದರೆ ಕಾಂತಾರಾ ಸಿನಿಮಾ ಒಟಿಟಿಯಲ್ಲಿ 150 ರೂಗೆ ಸೇಲ್ ಆಗುತ್ತಿರುವುದು ನಿಜವೇ ಆಗಿದ್ದಲ್ಲಿ ಬಹಳ ದೊಡ್ಡ ಸುದ್ದಿಯಾಗುತ್ತದೆ.