Sunday, November 24, 2024
ಸುದ್ದಿ

17,000 ಕೊಳವೆ ಬಾವಿ ನಿರ್ಮಾಣಕ್ಕೆ ಹಣ ಪಾವತಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿ: ಸಮಾಜ ಕಲ್ಯಾಣ ಇಲಾಖೆ, ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿದಂತೆ 7 ವಿವಿಧ ನಿಗಮಗಳ ಮೂಲಕ ಗಂಗಾ ಕಲ್ಯಾಣ ಯೋಜನೆಯಡಿ 17,000 ಕೊಳವೆ ಬಾವಿ ಕೊರೆಯಲು ರೈತರ ಖಾತೆಗೆ ನೇರವಾಗಿ ಹಣ ಜಮೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.

ಅನಾರೋಗ್ಯದ ಕಾರಣ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಸಚಿವರು, ಆಸ್ಪತ್ರೆಯಿಂದಲೇ ವಿಡಿಯೋ ಕಾನ್ಫರೆನ್ಸ್‌ ಮೂಲಕ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿ, ಗಂಗಾ ಕಲ್ಯಾಣ ಯೋಜನೆಯಡಿ 2022-23ನೇ ಸಾಲು ಸೇರಿದಂತೆ ಹಿಂದಿನ ಸಾಲಿನಲ್ಲಿ ಆಯ್ಕೆಯಾದ 17,000ಕ್ಕೂ ಹೆಚ್ಚು ಫಲಾನುಭವಿಗಳ ಬ್ಯಾಂಕ್ ಖಾತೆಗೆ ₹1,115 ಕೋಟಿ ವರ್ಗಾವಣೆಗೊಳಿಸಲಾಗುತ್ತಿದ್ದು, ಇದಕ್ಕೆ ಅಗತ್ಯವಿರುವ ಡಿಬಿಟಿ ತಂತ್ರಾಂಶ ಸಿದ್ದಪಡಿಸಿ ಇ ರೂಪೆ ಮೂಲಕ ಪಾವತಿಸಲಾಗುವುದು ಎಂದರು.

ಫಲಾನುಭವಿಗಳು ಇಲಾಖೆಯಿಂದ ನೋಂದಾಯಿತ ಸಂಸ್ಥೆಗಳ ಮೂಲಕ ಕೊಳವೆ ಬಾವಿಗಳನ್ನು ಕೊರೆಸಲು ಹಾಗೂ ಅನುಕೂಲವಾಗುವ ಪಂಪ್‌ಸೆಟ್‌ಗಳ ಖರೀದಿ ಮಾಡಬಹುದು. ಇದರಿಂದಾಗಿ ಯೋಜನೆಯ ಅನುಷ್ಠಾನದ ವಿಳಂಬತೆ ತಡೆ ಹಾಗೂ ಪಾರದರ್ಶಕತೆಗೆ ಒತ್ತು ನೀಡಿದಂತಾಗುತ್ತದೆ ಎಂದರು.

ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ಪಟ್ಟಿಯನ್ನು ಜಿಲ್ಲೆಗೆ ವರ್ಗಾಯಿಸಲಾಗಿದ್ದು, ಸಮಿತಿಯು ಅರ್ಹ ಫಲಾನುಭವಿಗಳನ್ನು ನವೆಂಬರ್ ಅಂತ್ಯದೊಳಗೆ ಆಯ್ಕೆ ಮಾಡಲಿದೆ ಎಂದರು.

ಬಜೆಟ್‌ನಲ್ಲಿ ಘೋಷಿಸಿದಂತೆ ಬೆಳಗಾವಿ, ಕಲಬುರಗಿ, ಧಾರವಾಡ, ದಕ್ಷಿಣ ಕನ್ನಡ, ಮೈಸೂರು ಜಿಲ್ಲಾ ಕೇಂದ್ರಗಳ ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿಗಳ ಸೇರ್ಪಡೆ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದೀನ ದಯಾಳ್ ಉಪಾಧ್ಯಾಯ ಸೌಹಾರ್ದತಾ ವಿದ್ಯಾರ್ಥಿ ನಿಲಯಗಳನ್ನು ಬಾಡಿಗೆ ಕಟ್ಟಡಗಳಲ್ಲಿ ಪ್ರಾರಂಭಿಸಲಾಗಿದೆ. ಶೀಘ್ರ ಸ್ವಂತ ಕಟ್ಟಡ ನಿರ್ಮಾಣ ನಡೆಯಲಿದೆ ಎಂದರು.

ಮಹಿಳೆಯರ ಸ್ವಾವಲಂಬನೆಗೆ ಐಐಎಂಬಿ ಮೂಲಕ 300 ಮಹಿಳಾ ಪದವೀಧರರಿಗೆ ಉದ್ಯಮ ಶೀಲತಾ ತರಬೇತಿ ನೀಡಲಾಗುತ್ತಿದೆ. ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ 14 ಲಕ್ಷ ವಿದ್ಯಾರ್ಥಿಗಳಿಗೆ ₹615.5 ಕೋಟಿ ವಿದ್ಯಾರ್ಥಿ ವೇತನ ಮಂಜೂರು ಮಾಡಲಾಗಿದೆ ಎಂದರು.

ಅಭಿವೃದ್ದಿ ನಿಗಮಗಳ ಸ್ವಯಂ ಉದ್ಯೋಗ ಹಾಗೂ ಇತರೆ ಕಾರ್ಯಕ್ರಮಗಳ ಗುರಿಯಲ್ಲಿ ಶೇ.25 ರಷ್ಟು ಪ.ಜಾತಿ ಮತ್ತು ಪಂಗಡದ ಮಹಿಳೆಯರಿಗೆ ಕಾಯ್ದಿರಿಸಲಾಗಿದೆ ಎಂದರು.

ಇಲಾಖೆ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಜೆಟ್‌ನಲ್ಲಿ ₹580 ಕೋಟಿ ದೊರೆತಿತ್ತು. ಹೆಚ್ಚುವರಿಯಾಗಿ ₹410 ಕೋಟಿ ಅನುದಾನ ಸಿಕ್ಕಿದೆ. ವಸತಿ ರಹಿತ ಎಸ್‌ಸಿ, ಎಸ್‌ಟಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರಿಗೆ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಮನೆ ನಿರ್ಮಾಣಕ್ಕೆ 4,277 ಅರ್ಜಿಗಳು ಜಿಲ್ಲಾ ಮಟ್ಟದ ಸಮಿತಿಗೆ ಬಂದಿವೆ. ಫಲಾನುಭವಿಗಳಿಗೆ ಶೀಘ್ರ ಮನೆ ಮಂಜೂರಾತಿ ಪತ್ರ ನೀಡಲಾಗುವುದು ಎಂದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್, ಆಯುಕ್ತ ರಾಕೇಶ್, ಹಿಂದುಗಳಿದ ವರ್ಗಗಳ ಅಭಿವೃದ್ದಿ ಇಲಾಖೆ ಆಯುಕ್ತ ದಯಾನಂದ್ ಹಾಗೂ 7 ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಇದ್ದರು.