ಬೆಳ್ತಂಗಡಿ, ಜು 26: ಬೆಂಗಳೂರು ಮೂಲದ ಬಾಲಕನೋರ್ವ ಗುರುವಾಯನ ಕೆರೆಯಲ್ಲಿ ನಾಪತ್ತೆಯಾಗಿದ್ದಾನೆ. ಇಲ್ಲಿನ ಸನಿಹದ ಕೆರೆಯಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದ್ದು ಅಗ್ನಿ ಶಾಮಕ ದಳದವರು ಬುಧವಾರ ಸಂಜೆ ಶೋಧ ಕಾರ್ಯಾಚರಣೆ ನಡೆಸಿದರು.
ಬೆಂಗಳೂರಿನ ಹೂಡಿ ಎಂಬಲ್ಲಿನ ಮುನಿಸ್ವಾಮಿ ಶೆಟ್ಟಿ ಲೇಔಟ್ ನಿವಾಸಿ ಎನ್.ವಿ. ಪ್ರೇಮ್ ಕುಮಾರ್ ಎಂಬುವರ ಪುತ್ರ ಬೆಂಗಳೂರು ದೂರವಾಣಿ ನಗರದ ಐಟಿಐ ವಿದ್ಯಾ ಮಂದಿರದ ೯ ನೇ ತರಗತಿ ವಿದ್ಯಾರ್ಥಿ ಯಶ್ವಂತ್ ಸಾಯಿ ಕೆ.ಪಿ ಎಂಬಾತ ಶಾಲೆಗೆ ಹೋಗದೆ ಮನೆಗೆ ಮರಳಿ ಬಾರದೆ ಇರುವುದರಿಂದ ನಾಪತ್ತೆಯಾಗಿದ್ದಾನೆ. ಈ ಕುರಿತು ಬೆಂಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೇ ಬಾಲಕನ ಶಾಲಾ ಬ್ಯಾಗ್, ಚಪ್ಪಲಿ, ಶಾಲೆಯ ಐಡಿ ಕಾರ್ಡ್, ಪುಸ್ತಕ, ಜನನ ಪ್ರಮಾಣ ಪತ್ರ ಇತ್ಯಾದಿಗಳು ಕೆರೆಯ ಪಕ್ಕ ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಬಾಲಕ ಕೆರೆಗೆ ಬಿದ್ದಿರುವ ಅನುಮಾನದಿಂದ ಅಗ್ನಿ ಶಾಮಕ ದಳದವರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಬಾಲಕ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬಂದ ಬಸ್ ಟಿಕೆಟ್ ಪತ್ತೆಯಾಗಿದೆ. ಬಳಿಕ ಧರ್ಮಸ್ಥಳದಿಂದ ಕಾರ್ಕಳಕ್ಕೂ ಮಾಡಿರುವ ಬಸ್ ಟಿಕೆಟ್ ಪತ್ತೆಯಾಗಿದ್ದು ಗುರುವಾಯನಕೆರೆಯಲ್ಲಿ ಇಳಿದಿರಬಹದು ಎಂಬ ಅನುಮಾನ ವ್ಯಕ್ತವಾಗಿದೆ.
ಇನ್ನೊಂದೆಡೆ ಬಾಲಕ ಕರಾಟೆ ಪಟು ಕೂಡ ಎಂದು ಹೇಳಲಾಗುತ್ತಿದೆ. ಮನೆಯವರನ್ನು ಹೆದರಿಸಲು ಚಪ್ಪಲ್, ಬ್ಯಾಗ್ ಕೆರೆಯ ಬಳಿ ಇಟ್ಟು ಬೇರೆಕಡೆ ಹೋಗಿರಬಹುದೂ ಎಂದೂ ಹೇಳಲಾಗುತ್ತಿದೆ. ಅಗ್ನಿ ಶಾಮಕ ದಳದವರು ಬೃಹತ್ ಕೆರೆಯ ಮೂಲೆ ಮೂಲೆಯನ್ನು ಶೋಧಿಸಿದರಾದರೂ ಯಾವುದೇ ಕುರುಹು ಕಂಡು ಬರದೆ ಶೋಧ ಕಾರ್ಯವನ್ನು ನಿಲ್ಲಿಸಿದ್ದಾರೆ.