ಭಾರತದ ಶೌರ್ಯ, ಹೋರಾಟದ ಕೆಚ್ಚು, ಸಾಮರಿಕ ಬಲ, ಸೈನಿಕರ ಆತ್ಮಸ್ಥೈರ್ಯವೆಲ್ಲ ಕಾರ್ಗಿಲ್ ಯುದ್ಧದ ಮೂಲಕ ಮತ್ತೊಮ್ಮೆ ಜಗದೆದುರು ಅನಾವರಣಗೊಂಡಿತು. ಹಾಗೆಯೇ, ಪಾಕಿಸ್ತಾನದ ಧೂರ್ತತನ, ಕಪಟ ಬುದ್ಧಿ ಹಾಗೂ ದ್ವೇಷ ಮನೋಭಾವವೂ ಬಯಲಾಯಿತು. ನಮ್ಮ ಸೇನೆ ತೀರಾ ಸವಾಲಿನ ಸನ್ನಿವೇಶಗಳಲ್ಲಿ ಹೋರಾಡುತ್ತ ಜಯದ ಧ್ವಜ ಹಾರಾಡಿಸಿದ್ದು 1999ರ ಜುಲೈ 26ರಂದು. ದೇಶಕ್ಕೆ ಈ ವಿಜಯ ತಂದುಕೊಡಲು 500ಕ್ಕೂ ಹೆಚ್ಚು ವೀರಯೋಧರು ಹುತಾತ್ಮರಾಗಬೇಕಾಯಿತು. ಕಾರ್ಗಿಲ್ ಯುದ್ಧ ಘಟಿಸಿ 19 ವರ್ಷಗಳಾಗಿವೆ.
ahale news
ಕಾರ್ಗಿಲ್ ಯುದ್ಧದ ಹಾದಿ
- 1999ರ ಮೇ 3: ಪಾಕಿಸ್ತಾನಿಯರು ಅನಧಿಕೃತವಾಗಿ ಕಾರ್ಗಿಲ್ ಪ್ರವೇಶಿಸಿದ ಮಾಹಿತಿ ಕುರಿಕಾಯುವ ಸ್ಥಳೀಯರಿಂದ ತಿಳಿದು ಬಂತು.
- ಮೇ 5: ಭಾರತೀಯ ಸೇನೆಯ ಗಸ್ತುದಳವನ್ನು ಕಳಿಸಲಾಯಿತು; ಆದರೆ, ಪಾಕ್ ಸೇನೆ ಐವರು ಭಾರತೀಯ ಯೋಧರನ್ನು ಸೆರೆ ಹಿಡಿದು ಹಿಂಸಿಸಿ ಸಾಯಿಸಿತು.
- ಮೇ 9: ಪಾಕಿಸ್ತಾನ ಸೇನೆಯಿಂದಾದ ಭಾರಿ ಷೆಲ್ ದಾಳಿಯಿಂದಾಗಿ ಕಾರ್ಗಿಲ್ನಲ್ಲಿನ ಯುದ್ಧಸಾಮಗ್ರಿಗಳ ಹಂಗಾಮಿ ಕೋಠಿ ಹಾನಿಗೊಳಗಾಯಿತು.
- ಮೇ 10: ದ್ರಾಸ್, ಕಸ್ಕರ್ ಮತ್ತು ಮುಷ್ಕೊಹ್ ವಲಯಗಳಲ್ಲಿ ಒಳನುಸುಳುವಿಕೆಗಳು ಮೊದಲಿಗೆ ಪತ್ತೆಯಾದವು.
- ಮೇ ಮಧ್ಯಭಾಗ: ಭಾರತೀಯ ಸೇನೆ ಹೆಚ್ಚಿನ ಪಡೆಗಳನ್ನು ಕಾಶ್ಮೀರ ಕಣಿವೆಯಿಂದ ಕಾರ್ಗಿಲ್ ವಲಯಕ್ಕೆ ಸಾಗಿಸಿತು.
- ಮೇ 26: ಒಳನುಸುಳಿದವರಿಗೆ ಪ್ರತಿಯಾಗಿ ಭಾರತೀಯ ವಾಯುಪಡೆ ವಾಯುದಾಳಿಗಳನ್ನು ನಡೆಸಿತು.
- ಮೇ 27: ಮಿಗ್-21 ಮತ್ತು ಮಿಗ್ 27 ಎಂಬ ಎರಡು ಯುದ್ಧ ವಿಮಾನಗಳನ್ನು ಭಾರತೀಯ ವಾಯಪಡೆ ಕಳೆದುಕೊಂಡಿತು ; ಫ್ಲೈಟ್ ಲೆಫ್ಟಿನೆಂಟ್ ನಚಿಕೇತರನ್ನು ಯುದ್ಧ ಕೈದಿಯನ್ನಾಗಿ ಹಿಡಿಯಲಾಯಿತು.
- ಮೇ 28: ಪಾಕಿಸ್ತಾನಿಯರು ಭಾರತೀಯ ವಾಯುಪಡೆಯ ಎಂಐ-17 ವಿಮಾನವನ್ನು ಹೊಡೆದುರುಳಿಸಿದರು ; ನಾಲ್ವರು ವಿಮಾನ ಸಿಬ್ಬಂದಿ ಮೃತರಾದರು.
- ಜೂನ್ 1: ದಾಳಿಗಳ ತೀವ್ರತೆಯನ್ನು ಪಾಕಿಸ್ತಾನ ಹೆಚ್ಚಿಸಿತು.
- ಜೂನ್ 5: ಮೂವರು ಪಾಕಿಸ್ತಾನಿ ಯೋಧರಿಂದ ವಶಪಡಿಸಿಕೊಳ್ಳಲಾದ, ಪಾಕಿಸ್ತಾನಿಯರ ಒಳಗೊಳ್ಳುವಿಕೆಯನ್ನು ಸೂಚಿಸುವ ದಾಖಲೆಗಳನ್ನು ಭಾರತೀಯ ಸೇನೆ ಬಿಡುಗಡೆ ಮಾಡಿತು.
- ಜೂನ್ 6: ಭಾರತೀಯ ಸೇನೆ ಕಾರ್ಗಿಲ್ನಲ್ಲಿ ಪಾಕ್ ಸೈನಿಕರ ವಿರುದ್ಧ ದಾಳಿ ಆರಂಭಿಸಿತು.
- ಜೂನ್ 9: ಬಟಾಲಿಕ್ ವಲಯದಲ್ಲಿನ ಎರಡು ಪ್ರಮುಖ ಸೇನಾ ಠಾಣೆಗಳನ್ನು ಭಾರತೀಯ ಸೇನೆ ಮರುವಶಮಾಡಿಕೊಂಡಿತು.
- ಜೂನ್ 11: ಚೀನಾಕ್ಕೆ ಭೇಟಿ ನೀಡಲು ಮಾರ್ಗ ಮಧ್ಯದಲ್ಲಿದ್ದ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಪರ್ವೆಜ್ ಮುಷರಫ್ ಹಾಗೂ ರಾವಲ್ಪಿಂಡಿಯಲ್ಲಿದ್ದ ಲೆಫ್ಟಿನೆಂಟ್ ಜನರಲ್ ಅಜೀಜ್ ಖಾನ್ ನಡುವೆ ನಡೆದ ಸಂಭಾಷಣೆಗಳ ವಿವರಗಳನ್ನು, ಪಾಕಿಸ್ತಾನಿ ಸೇನೆಯ ಒಳಗೊಳ್ಳುವಿಕೆಯ ಪುರಾವೆಯಾಗಿ ಭಾರತವು ಬಿಡುಗಡೆ ಮಾಡಿತು.
- ಜೂನ್ 13: ಭಾರತೀಯ ಸೇನೆ ದ್ರಾಸ್ನಲ್ಲಿನ ಟೊಲೊಲಿಂಗ್ನ್ನು ವಶಪಡಿಸಿಕೊಂಡಿತು.
- ಜೂನ್ 15: ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ರೊಂದಿಗಿನ ತಮ್ಮ ದೂರವಾಣಿ ಸಂಭಾಷಣೆಯಲ್ಲಿ, ಅಮೆರಿಕದ ಅಂದಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಕಾರ್ಗಿಲ್ನಿಂದ ಹಿಂದೆ ಸರಿಯುವಂತೆ ಅವರಿಗೆ ತಿಳಿಸಿದರು.
- ಜೂನ್ 29: ಟೈಗರ್ ಹಿಲ್ ಸಮೀಪದ ಪಾಯಿಂಟ್ 5060 ಮತ್ತು ಪಾಯಿಂಟ್ 5,100 ಎಂಬ ಎರಡು ಪ್ರಮುಖ ಸಿಪಾಯಿ ನೆಲೆಗಳನ್ನು ಭಾರತೀಯ ಸೇನೆ ವಶಕ್ಕೆ ತೆಗೆದುಕೊಂಡಿತು.
- ಜುಲೈ 2: ಭಾರತೀಯ ಸೇನೆ ಕಾರ್ಗಿಲ್ನಲ್ಲಿ ಮುಮ್ಮುಖ ದಾಳಿ ಆರಂಭಿಸಿತು.
- ಜುಲೈ 4: 11 ಗಂಟೆಗಳ ಕದನದ ನಂತರ ಭಾರತೀಯ ಸೇನೆ ಟೈಗರ್ ಹಿಲ್ನ್ನು ಮರುವಶಮಾಡಿಕೊಂಡಿತು.
- ಜುಲೈ 5: ಭಾರತೀಯ ಸೇನೆ ದ್ರಾಸ್ನ್ನು ತನ್ನ ಹತೋಟಿಗೆ ತೆಗೆದುಕೊಂಡಿತು. ಕ್ಲಿಂಟನ್ ಜೊತೆಗಿನ ತಮ್ಮ ಸಭೆಯ ನಂತರ ಷರೀಫ್ರವರು, ಕಾರ್ಗಿಲ್ನಿಂದ ಪಾಕಿಸ್ತಾನಿ ಸೇನೆಯ ವಾಪಸಾತಿ ಬಗ್ಗೆ ಘೊಷಿಸಿದರು.
- ಜುಲೈ 7: ಭಾರತವು ಬಟಾಲಿಕ್ನಲ್ಲಿನ ಜುಬಾರ್ ಹೈಟ್ಸ್ ಎಂಬ ಶಿಖರವನ್ನು ಮರುವಶಮಾಡಿಕೊಂಡಿತು.
- ಜುಲೈ 11: ಪಾಕಿಸ್ತಾನವು ಸೇನಾ ವಾಪಸಾತಿ ಪ್ರಕ್ರಿಯೆ ಪ್ರಾರಂಭಿಸಿತು; ಬಟಾಲಿಕ್ನಲ್ಲಿ ಪ್ರಮುಖ ಶಿಖರಗಳನ್ನು ಭಾರತ ವಶಪಡಿಸಿಕೊಂಡಿತು.
- ಜುಲೈ 14: ‘ಆಪರೇಷನ್ ವಿಜಯ್’ ಕಾರ್ಯಾಚರಣೆ ಯಶಸ್ವಿಯಾಯಿತು ಎಂದು ಭಾರತದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಘೊಷಿಸಿದರು. ಪಾಕಿಸ್ತಾನದೊಂದಿಗಿನ ಮಾತುಕತೆಗಳಿಗೆ ಭಾರತವು ಷರತ್ತನ್ನು ನಿಗದಿಪಡಿಸಿತು.
- ಜುಲೈ 26: ಕಾರ್ಗಿಲ್ ಯುದ್ಧವು ಅಧಿಕೃತವಾಗಿ ಕೊನೆಗೊಂಡಿತು. ಒಳನುಗ್ಗಿದ್ದ ಪಾಕಿಸ್ತಾನಿಯರನ್ನು ಸಂಪೂರ್ಣವಾಗಿ ಹೊರದಬ್ಬಲಾಗಿದೆ ಎಂದು ಭಾರತೀಯ ಸೇನೆ ಘೊಷಿಸಿತು.
- ಮಡಿದ ಪಾಕ್ ಸೈನಿಕರು – 696
- ಸಮರದ ಒಟ್ಟು ವೆಚ್ಚ – 1,100 ಕೋಟಿ ರೂಪಾಯಿಗಳು
- ಹುತಾತ್ಮರಾದ ಭಾರತೀಯ ಸೈನಿಕರು – 537
- ಗಾಯಗೊಂಡ ಭಾರತೀಯ ಸೈನಿಕರು – 584
- ನಾಪತ್ತೆಯಾದ ಭಾರತೀಯ ಸೈನಿಕರು – 06
- ಒಟ್ಟು ಭಾರತೀಯ ಸೈನಿಕರು – 20,000
- ಅತಿಕ್ರಮಣಕಾರರು – 1,500
- ಯುದ್ಧ ನಡೆದ ಅವಧಿ – 74 ದಿನಗಳು
- ಯುದ್ಧಕ್ಷೇತ್ರದ ವ್ಯಾಪ್ತಿ – 150 ಕಿ.ಮೀ.