Tuesday, January 21, 2025
ದಕ್ಷಿಣ ಕನ್ನಡಪುತ್ತೂರುಯಕ್ಷಗಾನ / ಕಲೆಸುದ್ದಿ

ಶ್ರೀ ಗೆಜ್ಜೆಗಿರಿ‌‌ ಮೇಳ ಇಂದಿನಿಂದ ‌ದಿಗ್ವಿಜಯ ; ‘ಶ್ರೀಆದಿ ಧೂಮಾವತಿ, ಶ್ರೀದೇಯಿ ಬೈದೆತಿ ಕೃಪಾಷೋಷಿತ ಯಕ್ಷಗಾನ ಮಂಡಳಿ’ ಎಂಬ ನೂತನ ಯಕ್ಷಗಾನ ಮೇಳದ ಯಾನ ಆರಂಭ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು: ತಾಲ್ಲೂಕಿನ ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ನಂದನಬಿತ್ತಲ್‌ನಲ್ಲಿ ನಿರ್ಮಾಣಗೊಂಡಿದ್ದ ದೇಯಿ ಬೈದೆತಿ, ಕೋಟಿ ಚೆನ್ನಯರ ಭವ್ಯ ಕ್ಷೇತ್ರದಲ್ಲಿ ಎರಡೂವರೆ ವರ್ಷದ ಹಿಂದೆ ಲಕ್ಷಾಂತರ ಮಂದಿಯ ಸೇರುವಿಕೆಯೊಂದಿಗೆ ನಡೆದಿದ್ದ ಬ್ರಹ್ಮಕಲಶೋತ್ಸವ ಧಾರ್ಮಿಕ ಪರಂಪರೆಯಲ್ಲಿ ಇತಿಹಾಸ ಸೃಷ್ಟಿಸಿತ್ತು. ಇದೀಗ ಈ ಕ್ಷೇತ್ರದ ಮೂಲಕ ತುಳುನಾಡಿನ ಗಂಡು ಕಲೆಯಾದ ಯಕ್ಷಗಾನದ ಗೆಜ್ಜೆ ನಾದದ ಸಾಂಸ್ಕೃತಿಕ ಅನಾವರಣದತ್ತ ಹೆಜ್ಜೆಯಿಟ್ಟಿದೆ.

ಗೆಜ್ಜೆಗಿರಿ ಕ್ಷೇತ್ರದಿಂದ ‘ಶ್ರೀಆದಿ ಧೂಮಾವತಿ, ಶ್ರೀದೇಯಿ ಬೈದೆತಿ ಕೃಪಾಷೋಷಿತ ಯಕ್ಷಗಾನ ಮಂಡಳಿ’ ಎಂಬ ನೂತನ ಯಕ್ಷಗಾನ ಮೇಳ ಆರಂಭಗೊಂಡಿದ್ದು, ಇದರ ಉದ್ಘಾಟನೆ ನ.27ರಂದು ಸಂಜೆ 5.30ಕ್ಕೆ ನಡೆಯಲಿದೆ. ಆರ್ಯ ಈಡಿಗ ಮಹಾಸಂಸ್ಥಾನ ಸೋಲೂರು ಮಠದ ವಿಖ್ಯಾತನಂದ ಸ್ವಾಮೀಜಿ, ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಕಮಲಾದೇವಿ ಆಸ್ರಣ್ಣ ಆಶೀರ್ವಚನ ನೀಡುವರು. ಸಂಶೋಧಕ ಅರುಣ್‌ ಉಳ್ಳಾಲ್ ಧರ್ಮದ ಮದಿಪು ನೆರವೇರಿಸುವರು. ಗಣ್ಯರು, ಜನಪ್ರತಿನಿಧಿಗಳು ಭಾಗವಹಿಸುವರು.

ಸಭಾ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಮತ್ತು ಗೌರವಾರ್ಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾತ್ರಿ ದೇವರ ಪ್ರಥಮ ಸೇವೆಯಾಟ ನಡೆಯಲಿದೆ. ಸಭಾ ಕಾರ್ಯಕ್ರಮಕ್ಕೆ ಮೊದಲು ಸಂಜೆ ತೆಂಕು ಮತ್ತು ಬಡಗುತಿಟ್ಟಿನ ಕಲಾವಿದರಿಂದ ಯಕ್ಷನಾಟ್ಯ- ಗಾನ ವೈಭವ ಕಾರ್ಯಕ್ರಮವಿದೆ.

‘ಮಾತೆಯ ಅಭಯದಂತೆ ಭಕ್ತರೆಲ್ಲ ಸೇರಿ ನೂತನ ಯಕ್ಷಗಾನ ಮೇಳವನ್ನು ಕಟ್ಟಿದ್ದೇವೆ. ನ.27ರಿಂದ ತಿರುಗಾಟ ಆರಂಭವಾಗಲಿದ್ದು, ಈಗಾಗಲೇ 130 ಪ್ರಸಂಗಗಳು ಮುಂಗಡ ನಿಗದಿಯಾಗಿವೆ. ಅವುಗಳಲ್ಲಿ ಶೇ 30ರಷ್ಟು ಮುಂಬೈನಲ್ಲಿ ಬುಕ್ ಆಗಿವೆ. ‘ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ’, ‘ವಿಶ್ವವ್ಯಾಪಕ ನಾಮ ಶ್ರೀರಾಮ’ ಸೇರಿ ಒಟ್ಟು ಮೂರು ಪ್ರಸಂಗಗಳು ಇವೆ. ತುಳು ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ಇವೆ’ ಎಂದು ಕ್ಷೇತ್ರದ ಅಧ್ಯಕ್ಷ ಪೀತಾಂಬರ ಹೆರಾಜೆ ತಿಳಿಸಿದ್ದಾರೆ.