Sunday, January 19, 2025
ಕಾಸರಗೋಡುಸುದ್ದಿ

ನಿಶ್ಚಿತಾರ್ಥ ಮಾಡಿಕೊಂಡ ಆಧಿಲಾ ನಸ್ರಿನ್​ ಮತ್ತು ಫಾತಿಮಾ ನೋರಾ ; ಸಲಿಂಗ ಜೋಡಿಯ ಎಂಗೇಜ್​ಮೆಂಟ್ ಫೋಟೋಗಳು ವೈರಲ್​! – ಕಹಳೆ ನ್ಯೂಸ್

ಕೊಚ್ಚಿ: ಪಾಲಕರ ಒತ್ತಾಯದಿಂದ ಬೇರ್ಪಟ್ಟ ನಂತರ ಹೈಕೋರ್ಟ್​ ಮೆಟ್ಟಿಲೇರಿ, ಕಳೆದ ಮೇ ತಿಂಗಳಲ್ಲಿ ಕೋರ್ಟ್​ ತೀರ್ಪಿನಿಂದ ಮತ್ತೆ ಒಂದಾಗಿದ್ದ ಕೇರಳದ ಸಲಿಂಗ ಜೋಡಿ ಆಧಿಲಾ ನಸ್ರಿನ್​ ಮತ್ತು ಫಾತಿಮಾ ನೋರಾ ಇತ್ತೀಚೆಗಷ್ಟೇ ನಿಶ್ಚಿತಾರ್ಥ​ ಮಾಡಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಲುವಾ ಮೂಲದ ಆಧಿಲಾ ನಸ್ರಿನ್​ (22) ಮತ್ತು ಕೊಯಿಕ್ಕೋಡ್​ ಮೂಲದ ಫಾತಿಮಾ ನೋರಾ (23) ಪರಸ್ಪರ ಪ್ರೀತಿಸುತ್ತಿದ್ದು, ತಮ್ಮ ಪ್ರೀತಿಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಕಳೆದ ತಿಂಗಳು ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ. ಸಮುದ್ರ ತೀರದಲ್ಲಿ ನಡೆದಿರುವ ಅದ್ಧೂರಿ ಸಮಾರಂಭದ ಫೋಟೋಗಳನ್ನು ಇಬ್ಬರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಕಳೆದ ಅಕ್ಟೋಬರ್​ 11ರಂದು ಶೇರ್​ ಮಾಡಿಕೊಂಡಿದ್ದಾರೆ. ಸಾಧನೆಯನ್ನು ಅನ್‌ಲಾಕ್ ಮಾಡಲಾಗಿದೆ…ಎಂದೆಂದಿಗೂ ಜೊತೆಯಾಗಿ ಎಂದು ಅಡಿಬರಹ ನೀಡಿದ್ದಾರೆ.

ಸಾಂಪ್ರದಾಯಿಕ ಆಭರಣಗಳೊಂದಿಗೆ ಮದುವೆಯ ಉಡುಗೆ ಧರಿಸಿ ಮತ್ತು ಹಾರಗಳನ್ನು ವಿನಿಮಯ ಮಾಡಿಕೊಳ್ಳುವ ಫೋಟೋಗಳನ್ನು ಸಲಿಂಗ ಜೋಡಿ Instagram ನಲ್ಲಿ ಹಂಚಿಕೊಂಡಿದ್ದಾರೆ. ನಾನು ಮಾಡುವ ನಿಯಮಗಳನ್ನು ನಾನೇ ಅನುಸರಿಸುತ್ತೇನೆ ಎಂದು ನಸ್ರಿನ್​ ಅಡಿಬರಹ ನೀಡಿದ್ದಾರೆ. ಸದ್ಯ ಫೋಟೋಗಳು ಸಾವಿರಾರು ಲೈಕ್ಸ್​ಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ನಿಶ್ಚಿತಾರ್ಥದ ಬಗ್ಗೆ ಮಾತನಾಡಿರುವ ನಸ್ರಿನ್​, ಈ ಪರಿಕಲ್ಪನೆಯು ಆಸಕ್ತಿದಾಯಕ ಎಂದು ಭಾವಿಸಿದ್ದರಿಂದ ನಾವು ಫೋಟೋಶೂಟ್ ಪ್ರಯತ್ನಿಸಿದ್ದೇವೆ. ನಾವು ಇನ್ನೂ ಮದುವೆಯಾಗಿಲ್ಲ, ಆದರೆ ಒಂದು ಹಂತದಲ್ಲಿ ನಾವು ಮದುವೆ ಆಗಲು ಬಯಸುತ್ತೇವೆ ಎಂದು ಹೇಳಿದ್ದಾರೆ.

ಸಲಿಂಗ ಜೋಡಿಯ ಲವ್​ ಕಹಾನಿ
ಆಧಿಲಾ ನಸ್ರಿನ್​ ಮತ್ತು ಫಾತಿಮಾ ನೋರಾ ಪ್ರೀತಿಗೆ ಎರಡು ಕುಟುಂಬಗಳ ವಿರೋಧವಿದೆ. ಸೌದಿ ಅರೇಬಿಯಾದಲ್ಲಿ 11ನೇ ತರಗತಿ ಓದುವಾಗ ಆಧಿಲಾ, ನೋರಾಳನ್ನು ಭೇಟಿ ಮಾಡುತ್ತಾಳೆ. ಎಲ್ಲರಂತೆಯೇ ಇಬ್ಬರ ಸ್ನೇಹ ಆರಂಭವಾಗುತ್ತದೆ. ಆದರೆ, ದಿನ ಕಳೆದಂತೆ ಇಬ್ಬರ ಸ್ನೇಹ ಗಾಢವಾಗಿ ಮತ್ತೊಂದು ಮಜಲಿಗೆ ಹೊರಳುತ್ತದೆ. ಆಗ ಇಬ್ಬರದ್ದು ಸಲಿಂಗಕಾಮ ಎಂದು ಅರಿವಾಗುತ್ತದೆ. ಅಂದಿನಿಂದ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ತುಂಬಾ ಹತ್ತಿರವಾಗುತ್ತಾರೆ. ಇಬ್ಬರ ಪಾಲಕರು ಕೂಡ ಫ್ರೆಂಡ್ಸ್​ ಆಗಿರುವುದರಿಂದ ಆಧಿಲಾ ಮತ್ತು ನೋರಾಳನ್ನು ಉನ್ನತ ಶಿಕ್ಷಣಕ್ಕಾಗಿ ಕೊಯಿಕ್ಕೋಡ್​ನಲ್ಲಿರುವ ಕಾಲೇಜಿಗೆ ಕಳುಹಿಸಲು ನಿರ್ಧಾರ ಮಾಡುತ್ತಾರೆ. ಶಿಕ್ಷಣ ಮುಗಿದ ಬಳಿಕವೂ ಉಳಿದ ಜೀವನವನ್ನು ಒಟ್ಟಿಗೆ ಕಳೆಯಬೇಕೆಂದು ನಿರ್ಧಾರ ಮಾಡುವ ಆಧಿಲಾ ಮತ್ತು ನೋರಾ, ಡಿಗ್ರಿ ಪೂರ್ಣಗೊಳಿಸಿದ ಬಳಿಕ ಇಬ್ಬರ ವಿಚಾರವನ್ನು ಕುಟುಂಬದ ಮುಂದೆ ಪ್ರಸ್ತಾಪಿಸಲು ತೀರ್ಮಾನಿಸುತ್ತಾರೆ.

ಇದರ ನಡುವೆ ಎರಡು ಕುಟುಂಬಕ್ಕೆ ಇಬ್ಬರ ಸಂಬಂಧದ ಬಗ್ಗೆ ತಿಳಿಯುತ್ತದೆ. ಬಳಿಕ ಒಂದೇ ಕಾಲೇಜಿಗೆ ಇಬ್ಬರನ್ನು ಸೇರಿಸುವ ನಿರ್ಧಾರವನ್ನು ಹಿಂತೆಗೆದುಕೊಳ್ಳುತ್ತಾರೆ. ಇಬ್ಬರನ್ನು ಬೇರೆ ಬೇರೆ ಕಾಲೇಜಿಗೆ ಕಳುಹಿಸುತ್ತಾರೆ. ಇಬ್ಬರ ಮೇಲೆ ಸಾಕಷ್ಟು ನಿರ್ಬಂಧಗಳನ್ನು ಹೇರುತ್ತಾರೆ. ಇಬ್ಬರ ಪ್ರೀತಿ ಕೊನೆಯಾಗುತ್ತದೆ ಎಂದು ಪಾಲಕರು ಭಾವಿಸುತ್ತಾರೆ. ಆದರೆ, ಇಬ್ಬರು ಸಾಮಾಜಿಕ ಜಾಲತಾಣದ ಮೂಲಕ ಮತ್ತೆ ಸಂಪರ್ಕ ಬೆಳೆಸುತ್ತಾರೆ. ಅಲ್ಲದೆ, ಮತ್ತೆ ಭೇಟಿಯಾಗಿ, ಸಲಿಂಗ ಪ್ರೇಮಿಗಳು ಮತ್ತು ಸಲಿಂಗಕಾಮದ ಬಗ್ಗೆ ಹೆಚ್ಚು ಅರಿತುಕೊಂಡು ಒಟ್ಟಿಗೆ ವಾಸಿಸಲು ನಿರ್ಧರಿಸುತ್ತಾರೆ.

ನಿಮ್ಮ ಸಂಬಂಧ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿದೆ ಎಂದು ಅವರವರ ಪಾಲಕರು ಖಂಡಿಸುತ್ತಾರೆ. ಆದರೂ ತಮ್ಮ ಸಂಬಂಧವನ್ನು ಮುರಿದುಕೊಳ್ಳಲು ಇಬ್ಬರು ತಯಾರಿರುವುದಿಲ್ಲ. ಇದರ ನಡುವೆ ಇಬ್ಬರು ಮೇ 19ರಂದು ತಮ್ಮ ಮನೆಗಳನ್ನು ತೊರೆಯುತ್ತಾರೆ. ಆದರೆ, ಪಾಲಕರ ಕೈಗೆ ಮತ್ತೆ ಸಿಕ್ಕಿಬೀಳುತ್ತಾರೆ. ಇಬ್ಬರು ಕೊಯಿಕ್ಕೋಡ್‌ನ ಆಶ್ರಯಧಾಮದಲ್ಲಿ ಆಶ್ರಯ ಪಡೆದಿದ್ದರು. ಇಬ್ಬರು ಒಟ್ಟಿಗೆ ಬಾಳಲು ಅನುಮತಿ ನೀಡುವಾಗಿ ಭರವಸೆ ನೀಡಿ ನನ್ನನ್ನು ಆಶ್ರಯಧಾಮದಿಂದ ಪಾಲಕರು ಅಲುವಾಗೆ ಕರೆದೊಯ್ದರು ಎಂದು ಆಧಿಲಾ ಹೇಳಿದ್ದರು. ಆದರೆ, ಮನೆಯಲ್ಲಿ ಆಕೆಯ ಮೇಲೆ ಹಲ್ಲೆ ಮಾಡಿದರು ಎಂದು ಆಧಿಲಾ ಆರೋಪ ಸಹ ಮಾಡಿದ್ದಾರೆ.

ಇದರ ನಡುವೆ ನನ್ನ ಮಗಳನ್ನು ಅಪಹರಿಸಿದ್ದಾಳೆ ಎಂದು ಆಧಿಲಾ ವಿರುದ್ಧ ನೋರಾ ಪಾಲಕರು ದೂರು ನೀಡುತ್ತಾರೆ. ಇತ್ತ ತನ್ನ ಕುಟುಂಬ ಸದಸ್ಯರಿಂದಲೇ ಆಧಿಲಾ ತೀವ್ರ ದೈಹಿಕ ಹಿಂಸೆಗೆ ಒಳಗಾಗಿರುತ್ತಾಳೆ. ಆದರೆ, ಹೇಗೋ ಪೊಲೀಸರ ಸಹಾಯದಿಂದ ಆಧಿಲಾ ಆಶ್ರಯ ಮನೆಗೆ ಮರಳುತ್ತಾಳೆ. ನೋರಾಳನ್ನು ಅವಳ ಹೆತ್ತವರು ಕರೆದುಕೊಂಡು ಹೋದ ನಂತರ ಒಮ್ಮೆ ಮಾತ್ರ ಆಕೆಯಯೊಂದಿಗೆ ಆಧಿಲಾ ಮಾತನಾಡಿರುತ್ತಾಳೆ. ಈ ವೇಳೆ ನೋರಾ, ಆಧಿಲಾ ಜತೆ ಬದುಕಲು ಬಯಸಿರುವುದಾಗಿ ಹೇಳುತ್ತಾಳೆ. ಅದಾದ ಬಳಿಕ ಎಲ್ಲ ಸಂಪರ್ಕವನ್ನು ಆಧಿಲಾ ಕಳೆದುಕೊಳ್ಳುತ್ತಾಳೆ. ಅಂತಿಮವಾಗಿ ಆಧಿಲಾ, ನೋರಾಗಾಗಿ ಪೊಲೀಸ್​ ಠಾಣೆ ಹಾಗೂ ನ್ಯಾಯಾಲಯ ಮೆಟ್ಟಿಲೇರುತ್ತಾಳೆ. ನಡೆದ ಎಲ್ಲ ಘಟನೆಯನ್ನು ಆಧಿಲಾ ವಿಡಿಯೋ ರೆಕಾರ್ಡ್​ ಮಾಡಿ ಸಾಮಾಜಿಕ ಜಾಲತಾಣದಲ್ಲೂ ಹರಿಬಿಟ್ಟಿದ್ದಳು. ಅಂತಿಮವಾಗಿ ಕೋರ್ಟ್​ ನಿನ್ನೆ (ಮೇ.31) ಆದೇಶ ನೀಡಿದ್ದು, ಇಬ್ಬರು ಒಟ್ಟಿಗೆ ಬಾಳಬಹುದಾಗಿದೆ. ಆಧಿಲಾ ಮತ್ತು ನೋರಾ ಪಾಲಿಗೆ ಇದು ಸಂತಸದ ಸುದ್ದಿಯಾಗಿದೆ.

ಕೋರ್ಟ್​ ಹೇಳಿದ್ದೇನು?
ಆಧಿಲಾಳ ಮನವಿಯನ್ನು ಪರಿಗಣಿಸಿದ ನ್ಯಾಯಾಲಯವು ಅವಳು ತನ್ನ ಸಂಗಾತಿಯೊಂದಿಗೆ ಮತ್ತೆ ಸೇರಬಹುದು. ಇಬ್ಬರು ವಯಸ್ಕರಾಗಿದ್ದು, ಅವರವರ ಇಚ್ಛೆಯಂತೆ ಒಟ್ಟಿಗೆ ಬಾಳಬಹುದಾಗಿದೆ ಎಂದು ಹೈಕೋರ್ಟ್​ ಕಳೆದ ಮೇ.31ರಂದು ಮಹತ್ವದ ಆದೇಶ ಹೊರಡಿಸಿತು. ತನ್ನ ಸಂಗಾತಿ ಫಾತಿಮಾ ನೋರಾಳನ್ನು ಸಂಬಂಧಿಕರು ಬಲವಂತವಾಗಿ ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿ ಆಧಿಲಾ ನಸ್ರಿನ್​ ಮಂಗಳವಾರ ಮೇ.31ರಂದು ನ್ಯಾಯಾಲಯದ ಮೆಟ್ಟಿಲೇರಿದ್ದರು. 2018ರ ಸೆಪ್ಟೆಂಬರ್​ 6ರಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಪ್ರಕಾರ ನಮಗೆ ಒಟ್ಟಿಗೆ ವಾಸಿಸುವ ಹಕ್ಕಿದೆ ಎಂದು ಆಧಿಲಾ ನಸ್ರಿನ್​ ಅರ್ಜಿಯಲ್ಲಿ ಪ್ರತಿಪಾದಿಸಿದ್ದರು. ನ್ಯಾಯಾಲಯ ಮತ್ತು ಪೊಲೀಸರು ತಮ್ಮ ಪರವಾಗಿ ನಿಲ್ಲುವಂತೆ ಅರ್ಜಿಯಲ್ಲಿ ಆಧಿಲಾ ಕೋರಿದ್ದರು. ಆಕೆಯ ಮನವಿಯನ್ನು ಪುರಸ್ಕರಿಸಿರುವ ಹೈಕೋರ್ಟ್​ ಒಟ್ಟಿಗೆ ಬಾಳಲು ಅನುಮತಿ ನೀಡಿತು. ಇಬ್ಬರಿಗೂ ರಕ್ಷಣೆ ಒದಗಿಸಬೇಕೆಂದು ಪೊಲೀಸರಿಗೆ ನಿರ್ದೇಶನ ನೀಡಿತು. (ಏಜೆನ್ಸೀಸ್​)