PFI ಬ್ಯಾನ್ – ಕೇಂದ್ರದ ಆದೇಶ ಪ್ರಶ್ನಿಸಿದ್ದ ಅರ್ಜಿ ವಜಾ ; ಕೇಂದ್ರ ಸರ್ಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್ – ಕಹಳೆ ನ್ಯೂಸ್
ಬೆಂಗಳೂರು: ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ (Karnataka HighCourt) ವಜಾಗೊಳಿಸಿದೆ.
ಅರ್ಜಿವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ಹೈಕೋರ್ಟ್ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಇಂದು ತೀರ್ಪು ಪ್ರಕಟಿಸಿದೆ. ಕರ್ನಾಟಕದ ಪಿಎಫ್‌ಐ (PFI) ಅಧ್ಯಕ್ಷ ನಾಸಿರ್ ಅಲಿ ನಿಷೇಧವನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದರು. ಕೇಂದ್ರ ಸರ್ಕಾರ (Central Government) ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಿದೆ. ಕಾನೂನುಬಾಹಿರ ಸಂಘಟನೆ ಎನ್ನಲು ಕಾರಣ ನೀಡಿಲ್ಲ. ತಕ್ಷಣ ನಿಷೇಧಕ್ಕೆ ಕಾರಣ ನೀಡಬೇಕಿತ್ತು. ವಾದಮಂಡನೆಗೆ ಕಾಲಾವಕಾಶ ನೀಡದೇ ಬ್ಯಾನ್ ಮಾಡಲಾಗಿದೆ. ಯುಎಪಿಎ ಕಾಯ್ದೆಗೆ ವಿರುದ್ಧವಾಗಿ ಆದೇಶ ಹೊರಡಿಸಲಾಗಿದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಜಯಕುಮಾರ್ ಎಸ್ ಪಾಟೀಲ್ ವಾದ ಮಂಡಿಸಿದ್ದರು. ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದರು.
ಪಿಎಫ್‌ಐ ಸಂಘಟನೆಯಿಂದ ದೇಶವಿರೋಧಿ ಚಟುವಟಿಕೆ ನಡೆಯುತ್ತಿದ್ದು, ದೇಶದಲ್ಲಿ ಹಿಂಸಾತ್ಮಕ ಕೃತ್ಯಗಳನ್ನು ಸಂಘಟನೆಯ ಕಾರ್ಯಕರ್ತರು ಎಸಗುತ್ತಿದ್ದಾರೆ. ಸಂಘಟನೆಯ ಸದಸ್ಯರಿಂದ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಸಕಾರಣವಾಗಿಯೇ ಪಿಎಫ್‌ಐ ನಿರ್ಬಂಧಿಸಲಾಗಿದೆ ಎಂದು ಕೇಂದ್ರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. ಹೈಕೋರ್ಟ್ ನ.28ಕ್ಕೆ ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು.