Sunday, November 24, 2024
ಕೃಷಿದಕ್ಷಿಣ ಕನ್ನಡಪುತ್ತೂರುಬೆಳ್ತಂಗಡಿರಾಜ್ಯಸುದ್ದಿ

ದಕ್ಷಿಣ ಕನ್ನಡಗೂ ಬಾಹು ಚಾಚಿದ ಎಲೆಚುಕ್ಕಿ ರೋಗ – ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ, ಮುಂಡಾಜೆಯ ಕೆಲವು ಅಡಿಕೆ ತೋಟಗಳಲ್ಲಿ ಎಲೆಚುಕ್ಕಿ ರೋಗ ; ಜಿಲ್ಲೆಗೆ ವ್ಯಾಪಿಸುವ ಆತಂಕ – ಕಹಳೆ ನ್ಯೂಸ್

ಪುತ್ತೂರು ವಿಧಾನ ಸಭಾ ಕ್ಷೇತ್ರದ ಕೆಲವು ಭಾಗದಲ್ಲಿ ಈ ಎಲೆಚುಕ್ಕಿ ರೋಗ..!

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳ್ತಂಗಡಿ : ಸಂಸೆಯಿಂದ ಸುತ್ತುವರಿದು ಎಳನೀರು ಭಾಗಕ್ಕೆ ಹಬ್ಬಿದ್ದ ಎಲೆಚುಕ್ಕಿರೋಗ ಇದೀಗ ಬೆಳ್ತಂಗಡಿ ತಾಲೂಕಿನ ಕೆಳಭಾಗಕ್ಕೂ ಹಬ್ಬಿರುವುದು ಗೋಚರಿಸುತ್ತಿದೆ. ಸರಕಾರದ ನಿರ್ಲಕ್ಷ್ಯವೋ, ರೈತರ ಅಸಹಾಯಕತೆಯೋ ಅಥವಾ ಪ್ರಕೃತಿ ವೈಪರೀತ್ಯವೋ ಒಟ್ಟಿನಲ್ಲಿ ಅಡಿಕೆ ಬೆಳೆ ನಶಿಸುವ ಆತಂಕ ರೈತರಲ್ಲಿ ಕಾಡಿದೆ.

ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ, ಮುಂಡಾಜೆಯ ಕೆಲವು ಅಡಿಕೆ ತೋಟಗಳಲ್ಲಿ ಎಲೆಚುಕ್ಕಿ ರೋಗ ಕಾಣಿಸಿಕೊಂಡಿರುವುದು ಕೃಷಿಕರನ್ನು ನಿದ್ದೆಗೆಡಿಸಿದೆ. ಶಿವಮೊಗ್ಗ, ಕಳಸ ಹಾಗೂ ಸಂಸೆ ಭಾಗಗಳಲ್ಲಿ ಕಳೆದ ಮೂರು ವರ್ಷಗಳ ಹಿಂದೆ ರೋಗ ಆವರಿಸಿದ್ದಾಗ ಇದೀ ರೀತಿ ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಆ ಭಾಗದ ಅಡಿಕೆ ಕೃಷಿ ಸಂಪೂರ್ಣ ನೆಲಕಚ್ಚಿದೆ. ಅಲ್ಲಿ ಮತ್ತೆ ಹೊಸ ಕೃಷಿ ಅನಿವಾರ್ಯವಾಗಿದೆ. ಇದೀಗ ದ.ಕ. ಭಾಗದಲ್ಲಿ ಅಡಿಕೆ ಧಾರಣೆ ಸದ್ಯ ಸ್ಥಿರತೆ ಕಾಯ್ದುಕೊಂಡರೂ ಮುಂದಿನ ದಿನಗಳಲ್ಲಿ ಬೆಳೆಗೇ ಕುತ್ತು ತಂದುಕೊಳ್ಳುವಂತಾಗಲಿದೆ.

ಮಲವಂತಿಗೆ
ಶಿವಮೊಗ್ಗ, ಚಿಕ್ಕಮಗಳೂರು, ದ.ಕ., ಉತ್ತರ ಕನ್ನಡ ಹಾಗೂ ಹಾಸನ ಜಿಲ್ಲೆಗಳಲ್ಲಿ ಸುಮಾರು 20534.50 ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ ಈಗಾಗಲೆ ಬಾಧಿಸಿತ್ತು. ಬೆಳ್ತಂಗಡಿ ತಾಲೂಕಿಗೆ ಸಂಬಂಧಿಸಿ ಮಲವಂತಿಗೆ ಗ್ರಾಮದ ಎಳನೀರು ಪ್ರದೇಶದಲ್ಲಿ ಪ್ರಥಮವಾಗಿ ಕಾಣಿಸಿಕೊಂಡ ಎಲೆಚುಕ್ಕಿ ರೋಗ ಇಲ್ಲಿನ ಸುಮಾರು 200 ಎಕ್ರೆ ಅಡಿಕೆ ತೋಟ ಈಗಾಗಲೇ ನಾಶ ಮಾಡಿದೆ. ಮಲವಂತಿಗೆ ಗ್ರಾಮದ ದಿಡುಪೆ ಪರಿಸರದ ಕೆಲವು ತೋಟಗಳಲ್ಲಿ ಈಗಾಗಲೇ ಎಲೆಚುಕ್ಕಿ ರೋಗ ವ್ಯಾಪಿಸುತ್ತಿದೆ.

ಎಳನೀರು, ದಿಡುಪೆ ಪರಿಸರಕ್ಕೆ ಸುಮಾರು 6 ಕಿ.ಮೀ. ಅಂತರವಿದೆ. ದಿಡುಪೆಯಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಕಡಿರುದ್ಯಾವರ ಗ್ರಾಮದ ಆಲಂತಡ್ಕ, ಮಲ್ಲಡ್ಕ, ಕುಚ್ಚಾರು ಮೊದಲಾದ ಪರಿಸರಗಳ ವಿಘ್ನೇಶ್ ಪ್ರಭು, ಶ್ರೀಧರ ಗೌಡ, ನೇಮಣ್ಣ ಗೌಡ, ಮಂಜುನಾಥ ಗೌಡ ಹಾಗೂ ಪರಿಸರದ ಹಲವು ತೋಟಗಳಲ್ಲಿ ಎಲೆಚುಕ್ಕಿ ರೋಗ ಲಕ್ಷಣಗಳು ಕಂಡುಬಂದಿದ್ದು, ಸಾವಿರಾರು ಅಡಿಕೆ ಮರ ಹಾಗೂ ಗಿಡಗಳ ಸೋಗೆ ಹಳದಿ ಬಣ್ಣಕ್ಕೆ ತಿರುಗಿದ್ದು ಚುಕ್ಕಿಗಳು ಮೂಡಲಾರಂಭಿಸಿವೆ. ಇಲ್ಲಿಂದ 3 ಕಿ.ಮೀ. ದೂರದಲ್ಲಿರುವ ಮುಂಡಾಜೆಯ ಪರಮುಖದಲ್ಲೂ ಈ ರೋಗದ ಲಕ್ಷಣ ಕಂಡು ಬಂದಿದೆ.

ಪುತ್ತೂರು ವಿಧಾನ ಸಭಾ ಕ್ಷೇತ್ರದ ಕೆಲವು ಭಾಗದಲ್ಲಿ ಈ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದೆ ಎಂದು ಕೆಲವು ಕಡೆ ಸಭೆಗಳಲ್ಲಿ ವಿಚಾರ ಪ್ರಸ್ತಾವವಾಗಿತ್ತು. ಅದರಂತೆ ವಿಜ್ಞಾನಿಗಳ ತಂಡ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಲಹೆ ಸೂಚನೆಗಳನ್ನೂ ನೀಡಿತ್ತು. ಆದರೂ ಅಲ್ಲಿ ರೋಗವಿದೆ ಇಲ್ಲಿ ರೋಗ ಪತ್ತೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ನೇತ್ರಾವತಿ ನದಿ ಪರಿಸರ
ಎಳನೀರು, ಮಲವಂತಿಗೆ, ದಿಡುಪೆ, ಕಡಿರುದ್ಯಾವರ ಮುಂಡಾಜೆ ಈ ಪ್ರದೇಶಗಳು ನೇತ್ರಾವತಿ ನದಿ ಹಾಗೂ ಅದರ ಸಂಪರ್ಕ ಹಳ್ಳಗಳು ಇರುವ ಪ್ರದೇಶಗಳಾಗಿದ್ದು, ಇವು ಹರಿಯುವ ಪರಿಸರದಲ್ಲಿ ಎಲೆಚುಕ್ಕಿ ರೋಗ ಕಂಡು ಬರುತ್ತಿದೆ. ಎಳನೀರು ಪ್ರದೇಶದಿಂದ ನೇತ್ರಾವತಿ ನದಿ ಹರಿಯುತ್ತಿದ್ದು ಆ ಪ್ರದೇಶದಿಂದ ಎಲೆಚುಕ್ಕಿ ರೋಗದ ಶಿಲೀಂಧ್ರಗಳು ಕೆಳಭಾಗಕ್ಕೆ ವ್ಯಾಪಿಸಲು ಪ್ರಮುಖ ಕಾರಣವಾಗಿದೆ ಎಂಬ ಅನುಮಾನ ಕಾಡಿದೆ.

ಇಲಾಖೆಯನ್ನು ಸಂಪರ್ಕಿಸಿದ್ದೇವೆ
ಕಳೆದ 3 ವರ್ಷಗಳ ಹಿಂದೆ ನೆಟ್ಟ 1500 ಅಡಿಕೆ ಗಿಡಗಳು ಫಸಲು ಬರುವ ಹಂತದಲ್ಲಿದೆ. ಇದೀಗ ಎಲೆಚುಕ್ಕಿ ರೋಗ ಕಂಡುಬರುತ್ತಿದೆ. ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿದ್ದೇವೆ. ಔಷಧಗಳು ಎಷ್ಟು ಪರಿಣಾಮ ಬೀರುತ್ತವೆ ತಿಳಿದಿಲ್ಲ. ರೈತರು ತತ್‌ಕ್ಷಣ ಎಚ್ಚೆತ್ತುಕೊಳ್ಳಬೇಕಿದೆ.
-ನೇಮಣ್ಣ ಗೌಡ, ಕೃಷಿಕ, ಕಚ್ಚಾರು, ಕಡಿರುದ್ಯಾವರ

ಗಾಳಿ ಮೂಲಕ ರೋಗ ಹರಡುತ್ತದೆ
ಮಳೆಯಿಂದ ವಾತಾವರಣದಲ್ಲಿ ತೇವಾಂಶ ಅಧಿಕಗೊಂಡು ಗಾಳಿ ಮೂಲಕ ರೋಗ ಹರಡುತ್ತದೆ. ಹೆಕ್ಸ್‌ಕೊನೊಜಾಲ್‌ (Hexconozole) ಅಥವಾ ಪ್ರೊಪಿಕೊಜಾಲ್‌ (Propicozole) ದ್ರಾವಣವನ್ನು ಒಂದು ಲೀಟರ್‌ ನೀರಿಗೆ 1 ಎಂ.ಎಲ್‌.ನಷ್ಟು ಬೆರೆಸಿ ಸೋಗೆ ಪೂರ್ತಿ ಆವರಿಸುವಂತೆ ಸಿಂಪಡಿಸಲು ಸಲಹೆ ನೀಡಲಾಗಿದೆ.
-ಕೆ.ಎಸ್‌. ಚಂದ್ರಶೇಖರ್‌, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ, ತೋಟಗಾರಿಕೆ ಇಲಾಖೆ, ಬೆಳ್ತಂಗಡಿ

ಸಿಂಪಡಣೆ ಸಮಸ್ಯೆ
ಎಲೆಚುಕ್ಕಿ ರೋಗ ವ್ಯಾಪಿಸಿದ ರೀತಿ ನೋಡಿದರೆ ಔಷಧ ಸಿಂಪಡಣೆಯೂ ಪರಿಣಾಮ ಬೀರುತ್ತಿಲ್ಲ. ಅಡಿಕೆಯ ಸೋಗೆಗಳಿಗೆ ಮೇಲ್ಭಾಗದಿಂದ ಔಷಧ ಸಿಂಪಡಣೆ ಮಾಡುವುದು ಕಷ್ಟಸಾಧ್ಯ. ಡ್ರೋನ್‌ ಆಧಾರಿತ ಯಂತ್ರೋಪಕರಣದಿಂದಷ್ಟೇ ಪೂರ್ತಿ ಸಿಂಪಡಣೆ ಸಾಧ್ಯ. ಇದು ಅಸಾಧ್ಯದ ಮಾತಾಗಿದೆ. ನುರಿತ ಸಿಂಪಡಣೆ ಮಾಡುವ ಕಾರ್ಮಿಕರ ಕೊರತೆಯು ಅತಿಯಾಗಿ ಕಾಡುತ್ತಿದೆ. ಇದಕ್ಕೆ ಸರಕಾರ ಹೆಲಿಕಾಪ್ಟರ್‌ ಸಹಾಯದಿಂದ ಸಿಂಪಡಣೆಗೆ ಕ್ರಮ ಕೈಗೊಂಡಲ್ಲಿ ಪರಿಣಾಮ ಬೀರಬಹುದಾಗಿದೆ ಎಂಬುವುದು ರೈತರ ಅಭಿ ಮತವಾಗಿದೆ.