Saturday, November 23, 2024
ದಕ್ಷಿಣ ಕನ್ನಡಬೆಳ್ತಂಗಡಿರಾಜ್ಯಶಿಕ್ಷಣಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನದೀಪ ಕಾರ್ಯಕ್ರಮದಡಿ 10 ವರ್ಷಗಳಿಂದ 10 ಸಾವಿರ ಶಾಲೆಗಳಿಗೆ 65 ಸಾವಿರ ಜತೆ ಬೆಂಚ್‌-ಡೆಸ್ಕ್ ಹಸ್ತಾಂತರ ; ವ್ಯಕ್ತಿತ್ವ ವಿಕಸನ ಹಾಗೂ ಮಗುವೊಂದು ಸಂಸ್ಕಾರ ಯುಕ್ತ ಪ್ರಜೆಯಾಗಿ ಬಾಳಲು ಪ್ರಾಥಮಿಕ ಶಿಕ್ಷಣ ಅಡಿಪಾಯ : ಡಾ|ಡಿ. ವೀರೇಂದ್ರ ಹೆಗ್ಗಡೆ ಅಭಿಮತ – ಕಹಳೆ ನ್ಯೂಸ್

ಬೆಳ್ತಂಗಡಿ : ವ್ಯಕ್ತಿತ್ವ ವಿಕಸನ ಹಾಗೂ ಮಗುವೊಂದು ಸಂಸ್ಕಾರ ಯುಕ್ತ ಪ್ರಜೆಯಾಗಿ ಬಾಳಲು ಪ್ರಾಥಮಿಕ ಹಂತದ ಶಿಕ್ಷಣ ಅಡಿಪಾಯವಾಗಿದೆ. ಈ ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡುವ ಚತುರ್ದಾನಗಳೊಂದಿಗೆ ರಾಜ್ಯದ ಗ್ರಾಮೀಣ ಭಾಗಗಳ ಶಾಲೆಗಳಲ್ಲಿ ಪೀಠೊಪಕರಣ ಕೊರತೆಯನ್ನು ಮನಗಂಡು ಕಳೆದ 10 ವರ್ಷಗಳಿಂದ 10 ಸಾವಿರ ಶಾಲೆಗಳಿಗೆ 65 ಸಾವಿರ ಜತೆ ಬೆಂಚ್‌-ಡೆಸ್ಕ್ ಪೂರೈಸಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಯೋಜನೆಯ ಜ್ಞಾನದೀಪ ಕಾರ್ಯಕ್ರಮದಡಿ ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳ 365 ಗ್ರಾಮೀಣ ಸರಕಾರಿ ಶಾಲೆಗಳಿಗೆ 2.50 ಕೋ.ರೂ. ಮೊತ್ತದ 2,770 ಬೆಂಚ್‌-ಡೆಸ್ಕ್ಗಳನ್ನು ಹಸ್ತಾಂತರಿಸುವ ಕಾರ್ಯಕ್ರಮಕ್ಕೆ ರವಿವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ದಾನ ಸಿಕ್ಕ ವಸ್ತುವಿನ ಮೇಲಿರಲಿ ಪ್ರೀತಿ
ಸುದೀರ್ಘ‌ ಬಾಳಿಕೆ ಬರುವ ಹಾಗೂ ವಿದ್ಯಾರ್ಥಿಗಳಿಗೆ ಸುಲಭದಲ್ಲಿ ಸಾಗಾಟಕ್ಕೆ ಅನುಕೂಲವಾಗುವ ನೆಲೆಯಲ್ಲಿ ಹಗುರವಾದ ಫೈಬರ್‌ ಬೆಂಚು, ಡೆಸ್ಕ್ಗಳನ್ನು ಒದಗಿಸಲಾಗುತ್ತದೆ. ಉಜಿರೆಯ ಲಕ್ಷ್ಮೀ ಹಾಗೂ ಚಿನ್ಮಯಿ ಇಂಡಸ್ಟ್ರೀಸ್‌ ತಯಾರಿಸಿ ವಿತರಿಸುವ ಜವಾಬ್ದಾರಿಯನ್ನು ಹೊತ್ತಿದೆ. ದಾನ ವಾಗಿ ನೀಡುವುದಕ್ಕೂ ಮಹತ್ವ ಸಿಗಬೇಕೆನ್ನುವ ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ ಶೇ. 20 ವೆಚ್ಚವನ್ನು ಭರಿಸಿದರೆ ಕ್ಷೇತ್ರ ದಿಂದ ಶೇ. 80 ಸಹಾಯಧನದಲ್ಲಿ ಪೀಠೊಪಕರಣ ವಿತರಿಸುತ್ತಿದ್ದೇವೆ. ಒಂದು ಶಾಲೆಗೆ 8ರಿಂದ 10 ಪೀಠೊ ಪಕರಣ ನೀಡುತ್ತಿದ್ದು, ಮಕ್ಕಳು ದುರುಪಯೋಗ ಪಡಿಸದೆ ಸದು ಪ ಯೋಗಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಎಸ್‌ಕೆಡಿ ಆರ್‌ಡಿಪಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಡಾ| ಎಲ್‌.ಎಚ್‌. ಮಂಜುನಾಥ, ನಿರ್ವಹಣಾಧಿಕಾರಿ ಅನಿಲ್‌ ಕುಮಾರ್‌, ಸಮುದಾಯ ಅಭಿವೃದ್ಧಿ ವಿಭಾಗದ ಆನಂದ ಸುವರ್ಣ, ಮೂಡಿಗೆರೆ ಬಿಇಒ ಹೇಮಂತ್‌, ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ, ತಾಂತ್ರಿಕ ಯೋಜನಾಧಿಕಾರಿ ಪುಷ್ಪರಾಜ್‌, ಪೀಠೊಪಕರಣ ತಯಾರಕರಾದ ಮೋಹನ ಕುಮಾರ್‌, ಸುಂದರ ಗೌಡ ಮತ್ತು ಅಶ್ವತ್ಥ್ ಮೊದಲಾದವರು ಉಪಸ್ಥಿತರಿದ್ದರು.

21.22 ಕೋಟಿ ರೂ. ಪೂರಕ ಅನುದಾನ
ಎಸ್‌ಕೆಡಿಆರ್‌ಡಿಪಿಯ ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದಡಿ ಸಮುದಾಯ ಅಭಿವೃದ್ಧಿ ವಿಭಾಗದಿಂದ ಪ್ರತೀ ವರ್ಷ ಸುಮಾರು 400 ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್‌ ಸಂಪರ್ಕ, ಶೌಚಾಲಯ ನಿರ್ಮಾಣ, ಶಿಕ್ಷಕರ ನೇಮಕಾತಿ, ಶಾಲಾ ಕಟ್ಟಡ ನಿರ್ಮಾಣ, ಆವರಣ ಗೋಡೆ, ಆಟದ ಮೈದಾನ ರಚನೆ, ಕ್ರೀಡಾ ಸಾಮಗ್ರಿ ಪೂರೈಕೆ ಮೊದಲಾದ ಮೂಲ ಸೌಲಭ್ಯ ಒದಗಿಸಲಾಗುತ್ತದೆ. ಇದಕ್ಕಾಗಿ ಈವರೆಗೆ 23.29 ಕೋ.ರೂ. ಒದಗಿಸಲಾಗಿದೆ. ಪ್ರಸ್ತುತ ವರ್ಷ 750 ಸ್ವಯಂಸೇವಕ ಶಿಕ್ಷಕ/ಶಿಕ್ಷಕಿಯರನ್ನು ನೇಮಿಸಲಾಗಿದೆ. ರಾಜ್ಯದಲ್ಲಿ ಈ ವರೆಗೆ 10,334 ಶಾಲೆಗಳಿಗೆ 65,144 ಬೆಂಚು-ಡೆಸ್ಕ್ಗಳನ್ನು ಪೂರೈಸಿದ್ದು ಇದಕ್ಕಾಗಿ 21.22 ಕೋಟಿ ರೂ. ಪೂರಕ ಅನುದಾನ ನೀಡಲಾಗಿದೆ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.