ಮಂಗಳೂರು,ಆ 02: ಜೀನ್ಸ್ ಪ್ಯಾಂಟ್, ಶರ್ಟ್, ಕೊರಳಿಗೊಪ್ಪುವ ಟೈ, ಬಣ್ಣ ಹಚ್ಚಿ ಮಾಡಿದ ಕೆಂಬಣ್ಣದ ಕೂದಲು, ತಳಕು ಬಳಕು ಮೈಮಾಟ…ಪಕ್ಕನೆ ನೋಡಿದರೆ ಇವರು ಲುಕ್ ನಲ್ಲಿ ತೀರಾ ಹೈಫೈ..ಆದರೆ ಕೆಲಸ ಮಾತ್ರ ಭಿಕ್ಷಾಟನೆ.. ಒಂಥರಾ ಹೈಟೆಕ್ ನಂತಹ ಭಿಕ್ಷಾಟನೆ ಅಂದರೂ ತಪ್ಪಿಲ್ಲ..ಮಾತಿನಲ್ಲೇ ಮೋಡಿ ಮಾಡಿ ಸಾರ್ವಜನಿಕರಿಂದ ಸಾವಿರಾರು ರೂ. ವಸೂಲಿ ಮಾಡುವ ಮೂಲಕ ಹೈಟೆಕ್ ಭಿಕ್ಷಾಟನೆಯಲ್ಲಿ ತೊಡಗಿದ್ದ ೮ ಮಂದಿ ಲಲನೆಯರು ಇದೀಗ ಪೊಲೀಸರ ಅತಿಥಿಗಳಾದ ಘಟನೆ ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಮಾತಿನಲ್ಲೇ ಮೋಡಿ ಮಾಡುತ್ತಿದ್ದ ಈ ಯುವತಿಯರು ನಾವು ರಾಜಸ್ಥಾನದ ರಾಣಿಪುರದವರು. ನಮಗೆ ಮನೆ ಇಲ್ಲ… ಊಟ ಇಲ್ಲ… ತಮ್ಮ ಊರಿನಲ್ಲಿ ನೆರೆ ಬಂದಿದ್ದು, ಆಸ್ತಿಪಾಸ್ತಿ ಕಳೆದುಕೊಂಡಿದ್ದೇವೆ, ಆಹಾರ ಬಟ್ಟೆ ಬರೆ ಇಲ್ಲದೆ ಸಂತ್ರಸ್ತರಾಗಿದ್ದು, ಧನ ಸಹಾಯ ನೀಡಿ ಎಂದು ಜೆರಾಕ್ಸ್ ಪ್ರತಿ ಹಿಡಿದು ತಿರುಗಾಡುತ್ತಾ ಕಾಸು ಕೊಡಿ ಅಂತ ಸಾರ್ವಜನಿಕರಿಗೆ ಗಾಳ ಹಾಕಿ ತಲಾ ಒಬ್ಬೊಬ್ಬರಿಂದ 100, 200 ರೂ. ವಸೂಲಿ ಮಾಡುತ್ತಿದ್ರು. ಕಾಲೇಜು ಮತ್ತು ಯುವಜನರು ಹೆಚ್ಚಿರುವ ಸ್ಥಳಗಳೇ ಅವರ ಆಯ್ಕೆ. ಸ್ವಲ್ಪ ಹೆಚ್ಚಿಗೆ ವಿಚಾರಿಸಿದರೆ ಇವರ ಬಳಿ ಲೆಟರ್ ಹೆಡೆ ಅಥವಾ ಪೊಲೀಸರಿಂದ ಪಡೆದ ಅನುಮತಿ ಪತ್ರವಾಗಲೀ ಇಲ್ಲ. ಕೊನೆಪಕ್ಷ ಗುರುತಿನ ಚೀಟಿಯೂ ಇಲ್ಲ.
https://youtu.be/udBzLbp6Ao0
ಪೊಲೀಸರು ಎಚ್ಚೆತ್ತುಕೊಂಡಿದ್ದು ಹೀಗೆ :
ಈ ಬಗ್ಗೆ ಸೌರಜ್ ಮಂಗಳೂರು ಎಂಬವರು ತಮ್ಮ ಪೇಸ್ ಬುಕ್ ಖಾತೆಯಲ್ಲಿ ಇವರ ಹೈಟೆಕ್ ಭಿಕ್ಷಾಟನೆಯ ಬಗ್ಗೆ, ಹಲವಾರು ನಗರದಲ್ಲಿ ತಿರುಗಾಡುತ್ತಾ ವ್ಯಕ್ತಿಯೋರ್ವನಿಂದ ನೂರು ರೂಪಾಯಿಗೂ ಹೆಚ್ಚು ವಸೂಲಿ ಮಾಡುವ ಇವರ ಭಿಕ್ಷಾಟನೆಯ ದಂಧೆಯ ಬಗ್ಗೆ ವಿವರಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ಯುವತಿಯರನ್ನು ಕದ್ರಿ ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಚಿಕ್ಕಾಬಳ್ಳಾಪುರದಲ್ಲೂ ಸಿಕ್ಕಿಬಿದ್ದಿದ್ದರು:
ಕಳೆದ ವರ್ಷ ಇದೇ ರೀತಿಯಲ್ಲಿ ಭಿಕ್ಷಾಟನೆಯಲ್ಲಿ ತೊಡಗಿಸಿಕೊಂಡ ತಂಡವೊಂದು ಚಿಕ್ಕಬಳ್ಳಾಪುರ ನಗರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಪೊಲೀಸರಿಗೆ ಅನುಮಾನಸ್ಪದವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಯುವತಿಯರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದರು. ಪೊಲೀಸರು ಗುರುತಿನ ಚೀಟಿ ಕೇಳಿದರೂ ತೋರಿಸದೆ ಗೋಗರೆದಿದ್ದರು. ಬಳಿಕ ಚಿಕ್ಕಬಳ್ಳಾಪುರ ನಗರ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ತಕ್ಷಣ ಚಿಕ್ಕಬಳ್ಳಾಪುರ ತೊರೆದುಬಿಟ್ಟು ತಮ್ಮೂರಿಗೆ ತೆರಳುವಂತೆ ಸೂಚಿಸಿದ್ದರು.