ಪುತ್ತೂರು : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅಗ್ನಿಪಥ್ ಸೇನಾ ನೇಮಕಾತಿಗೆ ಸಂಬಂಧಿಸಿದಂತೆ ಪುತ್ತೂರಿನ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿಯನ್ನು ನೀಡಲಾಗಿತ್ತು. ಅಗ್ನಿಪಥ್ ಯೋಜನೆ ಜಾರಿಯಾದಾಗ ಅದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸಿ ನೂರಾರು ವಿದ್ಯಾರ್ಥಿಗಳು ಸೇನಾ ರ್ಯಾಲಿಯಲ್ಲಿ ಭಾಗವಹಿಸುವಂತೆ ವಿದ್ಯಾಮಾತಾ ಅಕಾಡೆಮಿಯು ಮಹತ್ತರವಾದ ಪಾತ್ರ ವಹಿಸಿತ್ತು. ಪುತ್ತೂರಿನ ಶಾಸಕರಾದ ಶ್ರೀ ಸಂಜೀವ ಮಠಂದೂರುರವರು ಸೇನಾ ನೇಮಕಾತಿಗೆ ತೆರಳಿದ ಅಭ್ಯರ್ಥಿಗಳಿಗೆ ಹಾವೇರಿಗೆ ಉಚಿತ ಬಸ್ ವ್ಯವಸ್ಥೆಯನ್ನು ಮಾಡಿದ್ದರು. ಇದೀಗ ಅಗ್ನಿಪಥ್ ಯೋಜನೆಯಡಿ ನಡೆದ ಸೇನಾ ನೇಮಕಾತಿಯಲ್ಲಿ ದೈಹಿಕ ಕ್ಷಮತೆಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಲಿಖಿತ ಪರೀಕ್ಷೆಗಳನ್ನು ಎದುರಿಸಿ 6 ಜನ ಅಭ್ಯರ್ಥಿಗಳು “ಅಗ್ನಿವೀರ”ರಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ವಿದ್ಯಾಮಾತಾ ಅಕಾಡೆಮಿಯು “ಅಗ್ನಿವೀರ”ರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಯಾ. ಗಣೇಶ್ ಕಾರ್ಣಿಕ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ” ಅಗ್ನಿವೀರ” ರಿಗೆ ಶುಭವನ್ನು ಹಾರೈಸಿದರು. ಈ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ಇರುವ ವಿವಿಧ ಸ್ತರಗಳು ಉದ್ಯೋಗಾವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಅಲ್ಲದೆ ವಿದ್ಯಾಮಾತಾ ಅಕಾಡೆಮಿಯು ಸೇನಾ ನೇಮಕಾತಿಗಳ ಬಗ್ಗೆ ವಿಶೇಷ ಗಮನ ಹರಿಸಿ ಗ್ರಾಮೀಣ ಪ್ರದೇಶಗಳಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.
“ಗ್ರಾಮೀಣ ಪ್ರದೇಶದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಜಾಗೃತಿ ಮೂಡಿಸುವುದು ಸವಾಲಿನ ಕೆಲಸ, ಶಾಸಕನಾಗಿ ನನ್ನಿಂದ ಆಗುವ ಎಲ್ಲಾ ಸಹಕಾರವನ್ನು ವಿದ್ಯಾಮಾತಾ ಅಕಾಡೆಮಿಗೆ ನಾನು ನೀಡುತ್ತೇನೆ” ಎಂದು ಸಭಾಧ್ಯಕ್ಷತೆಯನ್ನು ವಹಿಸಿದ್ದ ಶಾಸಕರಾದ ಸಂಜೀವ ಮಠಂದೂರುರವರು ಈ ಸಂದರ್ಭದಲ್ಲಿ ತಿಳಿಸಿ ಭಾರತೀಯ ಸೇನೆಯಲ್ಲಿ “ಅಗ್ನಿವೀರ” ರಾಗಿ ಸೇವೆ ಸಲ್ಲಿಸಲು ಕರ್ತವ್ಯಕ್ಕೆ ಹಾಜರಾಗಲಿರುವ “ಅಗ್ನಿವೀರ” ರಿಗೆ ಶುಭವನ್ನು ಹಾರೈಸಿದರು ಹಾಗೂ ಅಗ್ನಿವೀರರಾಗಿ ಆಯ್ಕೆಯಾದ ಲಕ್ಷ್ಮಿಸಾಗರ್, ಜಯಪ್ರಕಾಶ್, ಭವನ್ ಕುಮಾರ್, ಸಚಿನ್, ಕಿಶೋರ್, ವೈಭವ್ ನಾಣಯ್ಯ ರವರನ್ನು ಶಾಸಕ ಸಂಜೀವ ಮಠಂದೂರುರವರು ಸನ್ಮಾನಿಸಿದರು. “ಅಗ್ನಿಪಥ್ ರ್ಯಾಲಿ” ಗೆ ಪೂರ್ವಭಾವಿಯಾಗಿ ದೈಹಿಕ ಸದೃಢತೆಯ ತರಬೇತಿಯನ್ನು ನೀಡಿದ್ದ ರಾಜ್ಯ ಪ್ರಶಸ್ತಿ ವಿಜೇತ ದೈಹಿಕ ತರಬೇತುದಾರ ದಯಾನಂದ ರೈ ಕೋಮರ್ಂಡ, ಪಟ್ಟೆ ಶ್ರೀ ಕೃಷ್ಣ ಸಮೂಹ ವಿದ್ಯಾಸಂಸ್ಥೆಗಳ ದೈಹಿಕ ತರಬೇತುದಾರ ಮೋನಪ್ಪ ಪಟ್ಟೆ ರವರನ್ನು ಕೂಡ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ತನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಾ ನೌಕಾಸೇನೆಯಲ್ಲಿ ಅಧಿಕಾರಿಯಾಗಿ ನಿವೃತ್ತಿಯ ನಂತರ ಕೆ. ಎ. ಎಸ್ ಅಧಿಕಾರಿ ಆಗುವವರೆಗೆ ತಾನು ಎದುರಿಸಿದ ಸವಾಲುಗಳನ್ನು ಹಂಚಿಕೊಂಡ ಪುತ್ತೂರು ಉಪವಿಭಾಗ ಆಯುಕ್ತರಾದ ಶ್ರೀ ಗಿರೀಶ್ ನಂದನ್ ರವರು ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿಯಲ್ಲಿರುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಾಥಮಿಕ ಮಾಹಿತಿಯನ್ನು ನೀಡಿ ವಿದ್ಯಾಮಾತಾ ಅಕಾಡೆಮಿಯ ಯಶಸ್ಸಿಗೆ ಶುಭವನ್ನು ಹಾರೈಸಿದರು. ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತುದಾರರಾಗಿರುವ ಬದ್ರುನ್ನೀಸಾ ಹೆಂತಾರ್ ರವರು ಪ್ರಥಮ ದರ್ಜೆ ಸಹಾಯಕರಾಗಿ ( ಈ. ಆ. ಂ) ಆಯ್ಕೆಯಾಗಿದ್ದು ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ವಿದ್ಯಾಮಾತಾ ಅಕಾಡೆಮಿ ಯ ಗೌರವ ಸಲಹೆಗಾರರಾದ ನಿವೃತ್ತ ಯೋಧ ಗೋಪಾಲಕೃಷ್ಣ ಕಾಂಚೋಡು ರವರು “ಅಗ್ನಿವೀರ” ರಿಗೆ ಶುಭವನ್ನು ಹಾರೈಸಿದರು. ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ರವರು ಅತಿಥಿಗಳನ್ನು ಸ್ವಾಗತಿಸಿ ವಿದ್ಯಾಮಾತಾ ನಡೆದು ಬಂದ ದಾರಿಯನ್ನು ಪ್ರಾಸ್ತಾವಿಕವಾಗಿ ಅತಿಥಿಗಳಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ವಿದ್ಯಾಮಾತಾ ಅಕಾಡೆಮಿಯ ತರಬೇತುದಾರರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.