Monday, January 20, 2025
ದಕ್ಷಿಣ ಕನ್ನಡಸುದ್ದಿ

ದಕ್ಷಿಣ ಕೊಡಗಿನ ಹೋಂಸ್ಟೇಯಲ್ಲಿ ಇಬ್ಬರು ಮಹಿಳೆಯರೊಂದಿಗೆ ತಂಗಿದ್ದ ಶಾರೀಕ್..! – ಕಹಳೆ ನ್ಯೂಸ್

ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ‌ ಆರೋಪಿ ಶಾರೀಕ್, ಇಬ್ಬರು ಮಹಿಳೆಯರು ಹಾಗೂ ಸಹಚರರೊಂದಿಗೆ ಕೊಡಗಿಗೂ ಬಂದು ಹೋಗಿದ್ದ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಕೋಮು ಸೂಕ್ಷ್ಮ ಪ್ರದೇಶವಾದ ಕರಾವಳಿಯಲ್ಲಿ ಶಂಕಿತ ಉಗ್ರ ಶಾರೀಕ್ ಆಟೋದಲ್ಲಿ ಕುಕ್ಕರ್ ಬಾಂಬ್ ಹಿಡಿದುಕೊಂಡು ಒಯ್ಯತ್ತಿದ್ದಾಗ ಅದು ಸ್ಫೋಟಗೊಂಡಿತ್ತಲ್ಲದೆ, ಆರೋಪಿ ಹಾಗೂ ಆಟೋ ಚಾಲಕ ಗಂಭೀರವಾಗಿ ಗಾಯಗೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಘಟನೆಗೂ ಮುನ್ನ ಶಾರೀಕ್ ಕೊಡಗು ಜಿಲ್ಲೆಗೂ ಭೇಟಿ ನೀಡಿದ್ದ ಎಂಬ ಮಾಹಿತಿ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಐಎನ್‌ಎ)ಗೂ ಲಭಿಸಿತ್ತು.
ಈ ಹಿನ್ನೆಲೆಯಲ್ಲಿ ಭಾನುವಾರ ದಕ್ಷಿಣ ಕೊಡಗಿನ ಹೋಂಸ್ಟೇಯೊಂದಕ್ಕೆ ಭೇಟಿ ನೀಡಿದ್ದ ಐಎನ್‌ಎ ಅಧಿಕಾರಿಗಳು ಹಾಗೂ ಮಂಗಳೂರು ಪೊಲೀಸರು, ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಸಮೀಪದ ನೆಮ್ಮಲೆ ಗ್ರಾಮದ ಓಟೆಕಾಡ್ ಹೋಂಸ್ಟೇಯಲ್ಲಿ ತಪಾಸಣೆ ನಡೆಸಿದ್ದರು.

ಈ ಸಂದರ್ಭ ಹೋಂಸ್ಟೇ ಮಾಲಕರು ನೀಡಿರುವ ಮಾಹಿತಿಯನ್ವಯ ಶಾರೀಕ್ ಇಬ್ಬರು ಮಹಿಳೆಯರು ಹಾಗೂ ತನ್ನ ಇತರ ಸಹಚರರೊಂದಿಗೆ ಹೋಂಸ್ಟೇಗೆ ಬಂದು ಹೋಗಿದ್ದ ಎಂಬುದು ದೃಢಪಟ್ಟಿದೆ.
ಹೆಚ್ಚಿನ ವಿಚಾರಣೆಗಾಗಿ ಹೋಂಸ್ಟೇ ಮಾಲಕನನ್ನು ಮಂಗಳೂರಿಗೆ ಬರುವಂತೆ ಪೊಲೀಸರು ತಿಳಿಸಿ ಹೋಗಿದ್ದಾರೆ.

ಕೊಡಗಿನಲ್ಲೂ ಹೆಜ್ಜೆ ಗುರುತು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ರೂವಾರಿ ಶಾರೀಕ್ ಕೊಡಗಿಗೂ ಬಂದು ಹೋಗುವ ಮೂಲಕ ಸೈನಿಕರ ನಾಡಿನಲ್ಲೂ ತನ್ನ ಹೆಜ್ಜೆ ಗುರುತು ಮೂಡಿಸಿದಂತಾಗಿದೆ.
ಕೊಡಗಿನಲ್ಲಿ ಆತ ಯಾರೊಂದಿಗೆ ಸಂಪರ್ಕ ಹೊಂದಿದ್ದ? ಜಿಲ್ಲೆಯಲ್ಲೂ ಸ್ಫೋಟ ನಡೆಸುವ ಸಂಚು ರೂಪಿಸಿದ್ದನೇ ಎಂಬುದು ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.

ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಮ್ಮಲೆ ಗ್ರಾಮದ ಟಾಟಾ ಸಂಸ್ಥೆಗೆ ಸೇರಿದ ಚಹಾ ತೋಟದ ಬಳಿಯಲ್ಲಿರುವ, ಹೆಚ್ಚು ಜನಸಂಚಾರವಿಲ್ಲದ ಹೋಂಸ್ಟೇಗೆ ಶಾರೀಕ್ ಬಂದು ಹೋಗಿದ್ದ ಎಂಬ ವಿಚಾರ ಇದೀಗ ಚರ್ಚೆಗೆ ಗ್ರಾಸ ಒದಗಿಸಿದೆ.

ಆತ ತಂಗಿದ್ದ ಹೋಂಸ್ಟೇ ಕೂಡಾ ಪ್ರವಾಸೋದ್ಯಮ ಇಲಾಖೆಯ ನಿಯಮಾನುಸಾರ ಪರವಾನಗಿ ಪಡೆದಿರಲಿಲ್ಲ ಎಂಬುದು ಕೂಡಾ ವಿಶೇಷವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಈ ರೀತಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಹೋಂಸ್ಟೇಗಳು ದೇಶದ ಆಂತರಿಕ ಭದ್ರತೆಗೆ ತೊಡಕಾಗುವ ಬಗ್ಗೆಯೂ ಜನವಲಯದಲ್ಲಿ ಆರೋಪ ಕೇಳಿ ಬಂದಿದೆ.

ಇಂತಹ ಹೋಂಸ್ಟೇಗಳೇ ಶಂಕಿತ ಉಗ್ರರ, ಅಕ್ರಮ ನುಸುಳುಕೋರರ, ಅಕ್ರಮ ಚಟುವಟಿಕೆದಾರರ ತಾಣಗಳಾಗುವ ಆತಂಕವೂ ಎದುರಾಗಿದೆ. ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ಹಲವಾರು ಸೂಚನೆಯ ಬಳಿಕವೂ ಜಿಲ್ಲೆಯಲ್ಲಿ ಇಂತಹ ನೂರಾರು ಹೋಂಸ್ಟೇಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಿಗೆ ಕಡಿವಾಣ ಹಾಕುವ ಅನಿವಾರ್ಯತೆ ಇದೀಗ ಹಿಂದೆಂದಿಗಿಂತಲೂ ಅಧಿಕವಾಗಿದೆ.