Sunday, January 19, 2025
ಸುದ್ದಿ

ಧರ್ಮಜಾಗೃತಿಗಾಗಿ ಸರಣಿ ಶಿವಪೂಜಾ ಅಭಿಯಾನ ; ಕುಗ್ರಾಮದಿಂದ ಮಹಾನಗರಿಯ ತನಕ ಶ್ರೀಕೇಶವಕೃಪಾದ ವೇದಘೋಷಯಾತ್ರೆ – ಕಹಳೆ ನ್ಯೂಸ್

ಕಲಿಕೆಯನ್ನು ನಾವು ಎರಡು ಹಂತಗಳಲ್ಲಿ ವಿಭಾಗಿಸಬಹುದು. ಮೊದಲನೆಯದ್ದು ಸಿದ್ಧಾಂತ, ಎರಡನೆಯದ್ದು ಪ್ರಾಯೋಗಿಕ. ಈಜು ಕಲಿಕೆಯಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಯೊಬ್ಬ ಈಜುಗಾರಿಕೆಯ ಕುರಿತಾದ ಮಾಹಿತಿಯನ್ನು ಪುಸ್ತಕದಲ್ಲಿ ಓದಿ ತಿಳಿಕೊಂಡ ಮಾತ್ರಕ್ಕೆ ಆತ ಈಜುಪಟುವಾಗಲಾರ. ಸ್ವತಃ ಕೊಳದಲ್ಲಿ ಇಳಿದು ನೀರಿನಲ್ಲಿ ಕೈಕಾಲು ಬಡಿದು ಅಭ್ಯಾಸ ಮಾಡಿದಾಗಲೇ ಆತನೊಬ್ಬ ಸಮರ್ಥ ಈಜುಗಾರನಾಗುತ್ತಾನೆ. ಅಂತೆಯೇ ಪುಸ್ತಕದಲ್ಲಿ ಅಡಕವಾಗಿರುವ ಅಡುಗೆ ಕಲೆಯನ್ನು ಓದಿಕೊಂಡ ಮಾತ್ರಕ್ಕೆ ಪಾಕ ಪ್ರಾವೀಣ್ಯತೆಯೂ ಸಿದ್ದಿಸುವುದಿಲ್ಲ, ಬದಲಾಗಿ ಸ್ವತಃ ಉಪ್ಪು, ಹುಳಿ, ಖಾರ ಬೆರೆಸಿ ಪ್ರಯೋಗ ಮಾಡಿದಾಗಲೇ ರಸರುಚಿಗಳನ್ನು ಬಲ್ಲ ಸಮರ್ಥ ಪಾಕಶಾಸ್ತ್ರಜ್ಞನಾಗಬಹುದು. ಹೀಗೆ ಎಲ್ಲಾ ವಿದ್ಯೆ ಮತ್ತು ಕಲೆಗಳಿಗೆ ಸಂಬಂಧಿಸಿದ ಈ ಎರಡು ಹಂತದ ಅಭ್ಯಾಸ ಕ್ರಮವು ವೇದಾಧ್ಯಾಯವನ್ನೂ ಹೊರತುಪಡಿಸಿಲ್ಲ. ಅದಕ್ಕೆಂದೇ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ’ದ ವೇದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಹಂತವಾಗಿ ವಿಶಿಷ್ಟ ಪೂಜಾ ಪರಿಕಲ್ಪನೆಯೊಂದನ್ನು ಹುಟ್ಟುಹಾಕಲಾಗಿದೆ. ಅದೇ ‘ಸರಣಿ ಶಿವಪೂಜಾ ಅಭಿಯಾನ’

ಜಾಹೀರಾತು
ಜಾಹೀರಾತು
ಜಾಹೀರಾತು

“ಏನಿದು ಶಿವಪೂಜೆ.?”

ಜಾಹೀರಾತು
ಜಾಹೀರಾತು
ಜಾಹೀರಾತು

ಶಿವಪೂಜೆಯ ಹೆಸರಿನಲ್ಲಿ ಉಲ್ಲೇಖಿಸಲ್ಪಟ್ಟಂತೆ ಇದು ಕೇವಲ ಶಿವನಿಗೆ ಮಾತ್ರವೇ ಸಲ್ಲತಕ್ಕಂತಹ ಪೂಜೆಯಲ್ಲ. ಬದಲಾಗಿ ಇದು ಪಂಚಾಯತನ ದೇವ ಪೂಜೆ. ಅಂದರೆ ಈ ಪೂಜೆಯಲ್ಲಿ ಶಿವ, ವಿಷ್ಣು, ಗಣಪತಿ, ಅಂಬಿಕೆ, ಮತ್ತು ಸೂರ್ಯ ಈ ಐದು ದೇವರುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ನರ್ಮದಾ ನದಿಯಲ್ಲಿ ಸಿಗುವ ಶಿವಲಿಂಗವನ್ನು ಶಿವನ ಪ್ರತೀಕವಾಗಿ, ಗಂಡಕೀ ನದಿಯಲ್ಲಿ ಸಿಗುವ ಸಾಲಿಗ್ರಾಮ ಶಿಲೆಯನ್ನು ವಿಷ್ಣುವಿನ ಪ್ರತೀಕವಾಗಿ, ಶೋಣಭದ್ರಾ ನದಿಯಲ್ಲಿ ಸಿಗುವ ಶೋಣಭದ್ರಾ ಶಿಲೆಯನ್ನು ಗಣಪತಿಯ ಪ್ರತೀಕವಾಗಿ, ಕುಮುಧ್ವತಿ ನದಿಯಲ್ಲಿ ಸಿಗುವ ಅಂಬಿಕಾ ಶಿಲೆಯನ್ನು ಅಂಬಿಕೆಯ ಪ್ರತೀಕವಾಗಿ ಹಾಗೂ ಭಾನುಮತಿ ನದಿಯಲ್ಲಿ ಸಿಗುವ ಸ್ಫಟಿಕ ಲಿಂಗವನ್ನು ಸೂರ್ಯದೇವರ ಪ್ರತೀಕವಾಗಿ ಸ್ಥಾಪಿಸಿ ಆವಾಹನೆಗೈದು ಕಲ್ಪೋಕ್ತ ರೀತಿಯಲ್ಲಿ ಪೂಜಿಸುವ ವಿಶಿಷ್ಟವಾದ ಪೂಜೆಯೇ ‘ಶಿವಪೂಜೆ’. ಈ ಎಲ್ಲಾ ಶಿಲೆಗಳನ್ನು ಸುಂದರವಾದ ಬೆಳ್ಳಿಯ ಪೀಠದಲ್ಲಿರಿಸಿ ಪೂಜಿಸುತ್ತಿರುವುದು ಶ್ರೀ ಕೇಶವ ಕೃಪಾದ ವೈದಿಕ ತಂಡದ ಇನ್ನೊಂದು ವಿಶೇಷ ಆಕರ್ಷಣೆ. ಈ ಐದು ದೇವರುಗಳಿಗೆ ಪೂಜೆ ಸಲ್ಲಿಸುವುದರ ಜೊತೆಗೆ, ನಮ್ಮದು ಪರಶುರಾಮನ ನೆಲವಾಗಿರುವ ಕಾರಣ ಇಲ್ಲಿನ ನಾಗನೆಲೆಯನ್ನು ಗಮನದಲ್ಲಿರಿಸಿಕೊಂಡು ಸುಬ್ರಹ್ಮಣ್ಯ ದೇವರ ಸಹಿತವಾಗಿ ಶಿವಪೂಜೆಯನ್ನು ನಡೆಸುವ ಸಂಪ್ರದಾಯವನ್ನು ಶ್ರೀ ಕೇಶವ ಕೃಪಾದಲ್ಲಿ ಪಾಲಿಸಲಾಗುತ್ತಿದೆ. ಶಿವನಿಗೆ ಬಿಲ್ವಪತ್ರೆ, ವಿಷ್ಣುವಿಗೆ ತುಳಸಿ, ಗಣಪತಿಗೆ ಗರಿಕೆ, ಅಂಬಿಕೆಗೆ ಕೇಪಳ (ಪಾಟಲೀ ಪುಷ್ಪ), ಸೂರ್ಯನಿಗೆ ಬಿಳಿ ಎಕ್ಕೆ ಹೂವು ಮತ್ತು ಸುಬ್ರಹ್ಮಣ್ಯನಿಗೆ ಹಿಂಗಾರ ಮುಂತಾದ ಪುಷ್ಪ ಸಾಹಿತ್ಯವನ್ನು ಈ ಪೂಜೆಯಲ್ಲಿ ಬಳಸಲಾಗುತ್ತದೆ.

“ಸರಣಿ ಶಿವಪೂಜೆಯ ಒಳಮರ್ಮ”


ಸಾಮಾನ್ಯವಾಗಿ ಪೂಜೆಯೊಂದನ್ನು ಆಯೋಜಿಸುವುದರ ಹಿಂದೆ ಪ್ರತಿಫಲಾಪೇಕ್ಷೆ ಪೂರಿತವಾದ ಸ್ವ-ಹಿತದ ಉದ್ದೇಶವೇ ಹೆಚ್ಚಾಗಿರುತ್ತದೆ. ಆದರೆ ಶ್ರೀಕೇಶವ ಕೃಪಾದ ನೇತೃತ್ವದಲ್ಲಿ ಆಯೋಜಿಸಲ್ಪಡುವ ಸರಣಿ ಶಿವಪೂಜೆಯ ಉದ್ದೇಶ ಇದಕ್ಕಿಂತ ಕೊಂಚ ಭಿನ್ನವಾದದ್ದು. ಪ್ರಥಮವಾಗಿ ಇದು ಧರ್ಮಜಾಗೃತಿಗಾಗಿ ನಡೆಸುವ ಪೂಜೆಯಾದರೆ, ಮುಂದಿನ ವೈದಿಕ ಪೀಳಿಗೆಯವರು ಪೂಜೆಯ ಹಿಂದಿರುವ ವೈಜ್ಞಾನಿಕ ಸತ್ಯ ಮತ್ತು ಧಾರ್ಮಿಕ ವಿಧಿ ವಿಧಾನ ಹಾಗೂ ಆಚರಣೆಗಳ ಒಳಾರ್ಥವನ್ನು ಸ್ಪಷ್ಟವಾಗಿ ಅರ್ಥೈಸಿಕೊಂಡು ಯಾವುದೇ ಲೋಪದೋಷವಿಲ್ಲದ ಪೂಜಾ ಕಾರ್ಯವನ್ನು ನೆರವೇರಿಸಿಕೊಟ್ಟು ಲೋಕ ಕಲ್ಯಾಣದ ಹಿತಚಿಂತನೆ ಕಾಪಾಡುವ ಪರಂಪರೆಯನ್ನು ಮುಂದುವರಿಸಬೇಕೆಂಬುದು ಎರಡನೆಯ ಉದ್ದೇಶ. ಶ್ರೀಕೇಶವ ಕೃಪಾದ ಆಶ್ರಯದಲ್ಲಿ ನಡೆಸಲ್ಪಡುವ ವೇದ ಶಿಬಿರದಲ್ಲಿ ತೃತೀಯ ವರ್ಷದ ವೇದಾಭ್ಯಾಸ ನಡೆಸಿದ ಶಿಬಿರಾರ್ಥಿಗಳ ತಂಡಕ್ಕೆ ಪ್ರಾಯೋಗಿಕ ಕಲಿಕೆಯ ಅಂಗವಾಗಿ ಈ ಶಿವಪೂಜೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು ವಾರಕ್ಕೊಬ್ಬ ಶಿಬಿರಾರ್ಥಿಯ ಮನೆಯನ್ನು ನಿಗದಿಪಡಿಸಿ ಸರಣಿ ಶಿವಪೂಜಾ ಅಭಿಯಾನವನ್ನು ನಡೆಸಲಾಗುತ್ತಿದೆ. ಆಯಾಯ ಮನೆಗಳಲ್ಲಿ ನಡೆಯುವ ಶಿವಪೂಜೆಯ ಪ್ರಧಾನ ಪೌರೋಹಿತ್ಯವನ್ನು ಆಯಾ ಮನೆಯ ಶಿಬಿರಾರ್ಥಿಯೇ ವಹಿಸಿಕೊಂಡು ಗುರುಗಳ ಮಾರ್ಗದರ್ಶನದಂತೆ ಪೂಜೆ ನೆರವೇರಿಸಿ ಪೂಜಾ ವಿಧಿವಿಧಾನವನ್ನು ಕರಗತಮಾಡಿಕೊಳ್ಳುವುದು ಹಾಗೂ ಉಳಿದ ಶಿಬಿರಾರ್ಥಿಗಳೆಲ್ಲಾ ಆ ಮನೆಯಲ್ಲಿ ಉಪಸ್ಥಿತರಿದ್ದು ಸಹವೈದಿಕರಾಗಿ ಪೂಜಾಕಾರ್ಯದಲ್ಲಿ ಸಹಕರಿಸುವುದು ಈ ಸರಣಿ ಶಿವಪೂಜೆಯ ಸತ್ಸಂಪ್ರದಾಯವಾಗಿದೆ.

“ಏನೇನಿದೆ ಈ ಪ್ರಾಯೋಗಿಕ ಶಿವಪೂಜೆಯಲ್ಲಿ..?”


ಪೂಜೆಯೊಂದರ ಫಲಪ್ರಾಪ್ತಿಗೆ ಶ್ರದ್ಧೆಯೆನ್ನುವುದು ಅತ್ಯಗತ್ಯ ಮಾನದಂಡ. ಶುದ್ಧವಾದ ಅಂತಃಕರಣ ಮಾತ್ರದಿಂದಲೇ ಶ್ರದ್ಧೆ ಹುಟ್ಟಿಕೊಳ್ಳುತ್ತದೆ, ಅದಕ್ಕೆ ಬಾಹ್ಯ ಪರಿಕರಗಳ ಅಗತ್ಯವಿಲ್ಲ ಅನ್ನುವ ಮಾತು ನಿಜವಾದರೂ,
‘ಸುಂದರವಾಗಿ ಅಲಂಕರಿಸಲ್ಪಟ್ಟ ದೇವರ ಮಂಟಪ ಹಾಗೂ ದೇವರ ಬಿಂಬ, ಶಾಸ್ತ್ರೋಕ್ತ ರೀತಿಯಲ್ಲಿ ದೇವರಿಗೆ ಆರತಿ ಬೆಳಗುವ ರೀತಿ, ಪೂಜಾ ಪರಿಸರದ ಸ್ವಚ್ಛತೆ ಹಾಗೂ ಸಭ್ಯತೆ, ಪುರೋಹಿತರ ಸಮಯ ಪಾಲನೆ..’ ಇವೆಲ್ಲವು ಕೂಡಾ ಶ್ರದ್ಧೆ ಉದ್ಭವಿಸುವಂತೆ ಮಾಡಬಲ್ಲ ಪೂಜೆಯ ಪ್ರಮುಖ ಅಂಶಗಳೆನ್ನುವುದೂ ಪರಮ ಸತ್ಯ! ಆದರೆ ಅದೆಷ್ಟೋ ಕಡೆಗಳಲ್ಲಿ ಪೂಜಾ ಪರಿಸರದಲ್ಲಿ ಒಂದಷ್ಟು ಗೊಂದಲಗಳು ಹುಟ್ಟಿಕೊಳ್ಳುತ್ತವೆ. ಅಲಂಕಾರ ಪ್ರಜ್ಞೆಯ ಕೊರತೆಯಿಂದಾಗಿ ಒಪ್ಪ ಓರಣವಾಗಿ ಜೋಡಿಸದೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ರಾಶಿ ರಾಶಿ ಹೂವುಗಳು, ಸರಿಯಾಗಿ ಜೋಡಿಸದಿರುವ ಕಾರಣದಿಂದ ಅಥವಾ ಬತ್ತಿಗೆ ನೀರು ಮಿಶ್ರಣಗೊಂಡಿರುವ ಕಾರಣದಿಂದ ಸಕಾಲದಲ್ಲಿ ಉರಿಯದೆ ಕೈಕೊಡುವ ದೀಪ ಮತ್ತು ಆರತಿ ತಟ್ಟೆಗಳು, ಹಾಲು, ಸಕ್ಕರೆ, ಎಣ್ಣೆ, ಜೇನು, ತುಪ್ಪ ಇನ್ನಿತರ ಜಿಡ್ಡು ಮಿಶ್ರಿತ ಪದಾರ್ಥಗಳು ಅನಗತ್ಯ ಚೆಲ್ಲಿ ಗಲೀಜಾಗಿರುವ ಪೂಜಾ ಪರಿಸರ, ಲಯಬದ್ದ ನಾದವಿಲ್ಲದೆ ಯದ್ವಾ ತದ್ವ ಬಾರಿಸುವ ಘಂಟಾಮಣಿ ಜಾಗಟೆಗಳು, ಏರಿಳಿತಗಳ ಪರಿಜ್ಞಾನವಿಲ್ಲದೆ ಉಚ್ಛರಿಸುವ ವೇದಮಂತ್ರಗಳು ಇವೆಲ್ಲವೂ ಕೂಡ ಪೂಜೆಯ ಸೌಂದರ್ಯವನ್ನು ಹಾಗೂ ಪೂಜಾ ಪರಿಸರದ ಘನತೆಯನ್ನು ಕುಂಠಿತಗೊಳಿಸುತ್ತವೆ. ಈ ಎಲ್ಲಾ ನ್ಯೂನತೆಗಳನ್ನು ಹೋಗಲಾಡಿಸಿ ಪೂಜಾ ಸೌಂದರ್ಯದ ಜೊತೆಗೆ ಭಾವೀ ಪುರೋಹಿತರ ಜಾಣ್ಮೆ ಮತ್ತು ಕಲಾತ್ಮಕತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಸರಣಿ ಶಿವಪೂಜಾ ಅಭಿಯಾನದಲ್ಲಿ ಪುಟಾಣಿ ವೈದಿಕರಿಗೆ ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತದೆ. ಯಾವ ಸಂದರ್ಭದಲ್ಲಿ ವೇದಮಂತ್ರಘೋಷಗಳ ಲಯಬದ್ಧ ಏರಿಳಿತವಾಗಬೇಕು, ದೀಪ ಮತ್ತು ಆರತಿಗಾಗಿ ಸಿದ್ಧಪಡಿಸುವ ಬತ್ತಿಯನ್ನು ಎಷ್ಟಂಶ ಎಣ್ಣೆಯಲ್ಲಿ ಅದ್ದಿದರೆ ಅದು ಸುಲಭವಾಗಿ ಹೊತ್ತಿಕೊಳ್ಳುತ್ತದೆ? ಪೂಜಿಸುವ ದೇವರ ವಿಗ್ರಹದ ಆಕಾರ ಚಿಕ್ಕದಾಗಿದ್ದ ಪಕ್ಷದಲ್ಲಿ ಅದು ಪೂರ್ತಿ ಮುಚ್ಚಿಕೊಳ್ಳದಂತೆ ಎದ್ದು ತೋರುವ ರೀತಿಯಲ್ಲಿ ಅಲಂಕರಿಸುವುದು ಹೇಗೆ? ಹಲವು ಬಣ್ಣದ ಹೂವುಗಳನ್ನು ಆಕರ್ಷಕವಾಗಿ ಜೋಡಿಸಿ ಅಲಂಕರಿಸುವುದು ಹೇಗೆ? ಪೂಜೆಯ ಸಂದರ್ಭದಲ್ಲಿ ಧರಿಸುವ ಪವಿತ್ರವನ್ನು ಯಾವ ರೀತಿ ಸಿದ್ದಪಡಿಸಬೇಕು? ಉಪನೀತ ವಟುಗಳು ತೊಡುವ ಜನಿವಾರವನ್ನು ಹೇಗೆ ಸಿದ್ದಪಡಿಸುವುದು? ಪೂಜೆಯ ಸಾಂಪ್ರದಾಯಿಕ ಉಡುಗೆಗಳಾದ ಕಚ್ಚೆ, ಮುಂಡಾಸು ಇತ್ಯಾದಿಗಳನ್ನು ಧರಿಸುವುದು ಹೇಗೆ? ಹೋಮಕುಂಡದ ತಯಾರಿ ಹಾಗೂ ಮಂಡಲ ಹಾಕುವುದು ಹೇಗೆ? ಇತ್ಯಾದಿ ವೈದಿಕ ಶಿಷ್ಟಾಚಾರಗಳ ಜೊತೆಗೆ ವೈದಿಕ ಸತ್ಸಂಗಗಳನ್ನು ಕೂಡಾ ಪ್ರಾಯೋಗಿಕ ಶಿವಪೂಜೆಯಲ್ಲಿ ಅಳವಡಿಸಿಕೊಳ್ಳಲಾಗಿದೆ.

ಒಟ್ಟಿನಲ್ಲಿ ಪೂಜೆಗೆ ಅಣಿಯಾದ ಪುರೋಹಿತನೊಬ್ಬ ಪೂಜೆಯ ಪೂರ್ವಭಾವಿಯಾಗಿ ಜೋಡಿಸಿಟ್ಟ ಹೂವಿನ ಹರಿವಾಣವನ್ನು ಕಂಡಾಗಲೇ ಅಲ್ಲಿ ಯಾವ ದೇವರಿಗೆ ಪೂಜೆ ನಡೆಯಲಿದೆ ಅನ್ನುವುದು ಸುತ್ತಮುತ್ತಲಿನ ಜನರಿಗೆ ಸ್ಪಷ್ಟವಾಗಬೇಕು. ಅಷ್ಟರ ಮಟ್ಟಿಗೆ ಪುಟಾಣಿ ವೈದಿಕರು ಪಳಗಬೇಕು ಹಾಗೂ ಇದೊಂದು ಸಾಮೂಹಿಕ ಅಭಿಯಾನವಾಗಿರುವ ಕಾರಣ, ಶಿಬಿರಾರ್ಥಿಗಳು ಸಮಾಜದ ಎಲ್ಲಾ ಜಾತಿ ವರ್ಗದ ಜನರಲ್ಲೂ ಭ್ರಾತೃತ್ವ, ಬಂಧುತ್ವ ಮತ್ತು ಸಹಭಾಗಿತ್ವದ ಮನೋಭಾವವನ್ನು ಬೆಳೆಸಿಕೊಳ್ಳುವುದರ ಜೊತೆಗೆ ಸಭಾಕಂಪನವನ್ನು ಹೋಗಲಾಡಿಸಿಕೊಳ್ಳಬೇಕೆನ್ನುವುದು ಕೂಡಾ ಪ್ರತಿಷ್ಠಾನದ ಅಧ್ಯಕ್ಷರಾದ ಬ್ರಹ್ಮಶ್ರೀ ವೇ.ಮೂ.ಪುರೋಹಿತ ನಾಗರಾಜ ಭಟ್ಟರ ಮನೋಭಿಲಾಷೆ.

“ಕುಗ್ರಾಮದಿಂದ ಮಹಾನಗರಿಯ ತನಕ ಸರಣಿ ಶಿವಪೂಜೆಯ ವೇದಘೋಷಯಾತ್ರೆ.!”


ಶ್ರೀಕೇಶವ ಕೃಪಾದ ಆಶ್ರಯದಲ್ಲಿ 2000ನೇ ಇಸವಿಯಲ್ಲಿ ಆರಂಭವಾದ ಮೊದಲ ವೇದಶಿಬಿರದ ಶಿಬಿರಾರ್ಥಿಗಳಿಗೆ ಪ್ರಾಯೋಗಿಕ ತರಗತಿಯನ್ನು ನಡೆಸುವ ಉದ್ದೇಶದಿಂದ ದೇಲಂಪಾಡಿ ಪ್ರಕಾಶ್ ಭಟ್ ಮೀಯೋಣಿ, ನೆಡ್ಚಿಲು ಮಹಾಲಿಂಗೇಶ್ವರ ಭಟ್ ಮತ್ತು ಕುಂಬ್ರ ರಾಮಚಂದ್ರ ಭಟ್, ಪೈಚಾರು ಗೋಪಾಲಕೃಷ್ಣ ಭಟ್ ಶ್ರೀದೇವಿ ಇವರ ಸಹಕಾರದೊಂದಿಗೆ ಪ್ರತಿಷ್ಠಾನದ ಅಧ್ಯಕ್ಷರ ಸಾರಥ್ಯದಲ್ಲಿ ಮೊದಲ ಸರಣಿ ಶಿವಪೂಜಾ ಅಭಿಯಾನವು 2002 ರಲ್ಲಿ ಆರಂಭವಾಯಿತು. ಪ್ರತಿಷ್ಠಾನದ ವತಿಯಿಂದ ನಡೆಸಲ್ಪಡುವ ಈ ಶಿವಪೂಜೆಗೆ ಶಿಬಿರಾರ್ಥಿಯ ಮನೆಯವರಿಂದ ಸಂಭಾವನೆ ಪಡೆಯದೇ ಉಚಿತವಾಗಿ ನಡೆಸಿಕೊಡಲಾಗುತ್ತಿದ್ದು, ಪೂಜೆಯ ಫಲಪ್ರಾಪ್ತಿಗಾಗಿ ಸಾಂಕೇತಿಕವಾಗಿ ಹತ್ತು ರೂಪಾಯಿ ದಕ್ಷಿಣೆಯನ್ನಷ್ಟೇ ಪಡೆಯಲಾಗುತ್ತದೆ. ಉಳಿದಂತೆ ಪೂಜೆಗೆ ಸಂಬಂಧಿಸಿದ ಸಾಹಿತ್ಯಗಳನ್ನು ಜೋಡಿಸುವುದು ಹಾಗೂ ಬಂದಂತಹ ಅತಿಥಿಗಳಿಗಾಗಿ ಅನುಕೂಲಕ್ಕೆ ತಕ್ಕಂತಹ ಸುಗ್ರಾಸ ಭೋಜನದ ವ್ಯವಸ್ಥೆಯನ್ನು ಮಾಡುವುದಷ್ಟೇ ಮನೆಯವರ ಜವಾಬ್ದಾರಿ. ದಶಕಗಳ ಹಿಂದೆ ಆರಂಭವಾದ ಸರಣಿ ಶಿವಪೂಜೆಯು ಕಳೆದ ವರ್ಷಕ್ಕೆ 386 ನೇ ಶಿವಪೂಜೆಯನ್ನು ಸಂಪನ್ನಗೊಳಿಸಿದ್ದು ಈ ವರ್ಷ 387 ನೇ ಪೂಜೆಗೆ ಅಡಿಯಿಟ್ಟಿದೆ. ಇದೀಗ 390 ನೇ ಸರಣಿ ಶಿವಪೂಜೆ ಪೂರೈಸಿದೆ. ಈ ವರ್ಷದ ಸರಣಿ ಶಿವಪೂಜಾ ಅಭಿಯಾನದ ಸಂಚಾಲಕರಾಗಿ ಶ್ರೀಪ್ರಶಾಂತ್ ಕಾವಿನಮೂಲೆ ಹಾಗೂ ಮಹಿಳಾ ವಿಭಾಗದ ಸಂಚಾಲಕರಾಗಿ ಶ್ರೀಮತಿ ರಜನೀ ಪ್ರಸಾದ್ ಮಂಗಳೂರು ಇವರು ನೇತೃತ್ವ ವಹಿಸಿದ್ದು ಜೂನ್ 3 ಕ್ಕೆ ಆರಂಭಗೊಂಡ ಈ ವರ್ಷದ ಅಭಿಯಾನವು ಅಕ್ಟೋಬರ್ 28 ಕ್ಕೆ ಸಮಾಪನಗೊಳ್ಳಲಿದೆ.

ಮಕರ್ಂಜ, ಶಿಶಿಲ ಮುಂತಾದ ಗ್ರಾಮೀಣ ಪ್ರದೇಶದಿಂದ ಹಿಡಿದು ಬೆಂಗಳೂರು, ಮೈಸೂರು, ಶಿರಸಿ ಮುಂತಾದ ಮಹಾನಗರಗಳ ತನಕ ಸರಣಿ ಶಿವಪೂಜೆಯನ್ನು ನಡೆಸಿಕೊಟ್ಟಿರುವುದು ಶ್ರೀಕೇಶವಕೃಪಾದ ಹೆಗ್ಗಳಿಕೆಯಾಗಿದೆ. ಒಟ್ಟಿನಲ್ಲಿ ಕುಗ್ರಾಮದಿಂದ ಮಹಾನಗರಿಯ ತನಕ, ಗುಡಿಸಲಿನಿಂದ ಮುಗಿಲೆತ್ತರದ ಸೌಧದ ತನಕ, ಕರಾವಳಿಯಿಂದ ಮಲೆನಾಡು, ಬಯಲುಸೀಮೆಯ ತನಕ, ಭಾಷೆಯ ಗಡಿಯನ್ನು ದಾಟಿ ರಾಜ್ಯ ಹೊರರಾಜ್ಯಗಳಲ್ಲೆಲ್ಲಾ ಸದ್ದು ಮಾಡುತ್ತಿರುವ ಶ್ರೀಕೇಶವ ಕೃಪಾದ ಸರಣಿ ಶಿವಪೂಜೆಯ ವೇದಘೋಷಯಾತ್ರೆಯು ಧರ್ಮಜಾಗೃತಿಯ ಮಂಗಳನಾದ ಮೊಳಗಿಸುತ್ತಿರುವುದಂತೂ ಸತ್ಯ.!