ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಿಂದಾಗಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಅಮಿತ್ ಷಾ ಹಾಗೂ ಧೋನಿಯವರ ಭೇಟಿಯು ಹಲವು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. 2019ರ ಲೋಕಸಭಾ ಚುನಾವಣೆಗೆ ಧೋನಿಯವರನ್ನು ರಾಜಕೀಯಕ್ಕೆ ಸೆಳೆಯಲು ಅಮಿತ್ ಷಾ ತಂತ್ರ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಅಮಿತ್ ಷಾ ಕೈಗೊಂಡಿರುವ ಸಂಪರ್ಕ್ ಫಾರ್ ಸಮರ್ಥನ್ ಪ್ರಚಾರದಡಿ ದೇಶದ ಹಲವು ಗಣ್ಯ ವ್ಯಕ್ತಿಗಳನ್ನು ಖುದ್ದು ಭೇಟಿ ಮಾಡಿ, ಮೋದಿ ಸರ್ಕಾರದ ಸಾಧನೆಗಳನ್ನು ತಿಳಿಸುತ್ತಾ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಧೋನಿಯವರೊಂದಿಗೆ ಹಲವು ವಿಷಯಗಳ ಕುರಿತು ಮಾತುಕತೆ ನಡೆದಿದ್ದು, ಮೋದಿ ಸರ್ಕಾರ 2014ರಿಂದ ಜಾರಿಗೆ ತಂದ ಯೋಜನೆಗಳ ಪೂರ್ಣ ಮಾಹಿತಿಯನ್ನು ಧೋನಿಯವರಿಗೆ ತಿಳಿಸಿದ್ದಾರೆ.
ಧೋನಿಯವರ ಭೇಟಿ ನಂತರ ಅಮಿತ್ ಷಾರವರು ತಮ್ಮ ಟ್ವೀಟ್ ಮೂಲಕ, ಸಂಪರ್ಕ್ ಫಾರ್ ಸಮರ್ಥನ್ ಪ್ರಚಾರದ ಭಾಗವಾಗಿ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಫಿನಿಶರ್ ಗಳಲ್ಲಿ ಒಬ್ಬರಾಗಿರುವ ಧೋನಿ ಅವರನ್ನು ಭೇಟಿ ಮಾಡಿ, ಮೋದಿ ಸರ್ಕಾರ 4 ವರ್ಷಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಎಂಎಸ್ ಧೋನಿಗೆ ತಿಳಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಧೋನಿ ಭೇಟಿ ಸಂದರ್ಭದಲ್ಲಿ ಅಮಿತ್ ಷಾ ಅವರಿಗೆ ರೈಲ್ವೇ ಸಚಿವ ಪಿಯೂಷ್ ಗೋಯಲ್, ಬಿಜೆಪಿ ದೆಹಲಿ ಮುಖ್ಯಸ್ಥ ಮನೋಜ್ ತಿವಾರಿ ಹಾಗೂ ಪಕ್ಷದ ಇತರ ಹಿರಿಯರು ಸಾಥ್ ನೀಡಿದ್ದರು.