ಸುಳ್ಯದಲ್ಲಿ ಅಡಿಕೆ ಎಲೆಚುಕ್ಕಿ, ಎಲೆಹಳದಿ ರೋಗ, ಇಸ್ರೇಲ್ ವಿಜ್ಞಾನಿಗಳೊಂದಿಗೆ ಚರ್ಚೆ ; 15 ಕೋಟಿ ರೂ. ಬಿಡುಗಡೆಗೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವ ತೋಟಗಾರಿಕೆ ಸಚಿವ ಮುನಿರತ್ನ- ಕಹಳೆ ನ್ಯೂಸ್
ಸುಳ್ಯ: ಅಡಿಕೆ ಎಲೆ ಚುಕ್ಕಿರೋಗ, ಹಳದಿ ರೋಗ ಬಾಧಿತ ತೋಟಗಳನ್ನು ವೀಕ್ಷಿಸಿದ್ದೇವೆ. ಇದರಿಂದ ರೈತರು ಬಹಳಷ್ಟು ನಷ್ಟ ಅನುಭವಿಸಿದ್ದಾರೆ. ಈ ರೋಗ ಯಾವ ಕಾರಣಕ್ಕೆ ಬರುತ್ತಿದೆ ಎಂಬ ಬಗ್ಗೆ ಸಂಶೋಧನೆ ಮಾಡಬೇಕಾಗಿದೆ. ಮುಂದಿನ ತಿಂಗಳು ಇಸ್ರೇಲ್‌ಗೆ ಹೋಗುವ ವೇಳೆ ಈ ರೋಗದ ಬಗ್ಗೆ ಅಲ್ಲಿನ ವಿಜ್ಞಾನಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಸಲಾಗುವುದು ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದರು.
ಅಡಿಕೆ ಎಲೆಚುಕ್ಕಿ, ಹಳದಿ ಎಲೆ ರೋಗ ಬಾಧಿತ ತಾಲೂಕಿನ ಮರ್ಕಂಜ ಗ್ರಾಮದ ತೋಟಗಳಿಗೆ ರವಿವಾರ ಭೇಟಿ ನೀಡಿ ವೀಕ್ಷಿಸಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ರೋಗ ನಿವಾರಣೆಗೆ ರಾಸಾಯನಿಕ ಸಿಂಪಡಿಸಲು 4 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇನ್ನೂ 15 ಕೋಟಿ ರೂ. ಬಿಡುಗಡೆಗೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವ ಸಲ್ಲಿಸಿದ್ದೇವೆ ಎಂದರು.
ದೋಟಿಗೆ ಸಬ್ಸಿಡಿ
ಎಲೆಚುಕ್ಕಿ ರೋಗ ಬಾಧಿತ ಎಲೆಗಳನ್ನು ಕತ್ತರಿಸಿ ತೆಗೆದು, ಔಷಧ ಸಿಂಪಡಿಸಿದಲ್ಲಿ ಪರಿಣಾಮ ಬೀರಲಿದೆ ಎಂದು ತಿಳಿದುಬಂದಿದೆ. ಆದರೆ ಇದನ್ನು ಅಕ್ಕಪಕ್ಕದವರೂ ಮಾಡಬೇಕು. ಇದಕ್ಕೆ ದೋಟಿ ಖರೀದಿಸಲು ಸರಕಾರದಿಂದ ಸಬ್ಸಿಡಿ ನೀಡಲಾಗುತ್ತಿದೆ. ರೋಗ ಬಾಧಿತ ರೈತರಿಗೆ ಸೂಕ್ತ ಪರಿಹಾರಕ್ಕೆ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದರು.
ರೋಗ ಬಾರದ ತಳಿ ಅಭಿವೃದ್ಧಿ ಮಾತ್ರವಲ್ಲದೇ ಶಾಶ್ವತ ಪರಿಹಾರಕ್ಕೂ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಮೀನುಗಾರಿಕೆ ಸಚಿವ ಎಸ್. ಅಂಗಾರ, ಮರ್ಕಂಜ ಗ್ರಾ.ಪಂ. ಅಧ್ಯಕ್ಷೆ ಪವಿತ್ರಾ ಗುಂಡಿ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಉಪಸ್ಥಿತರಿದ್ದರು.