ಮಂಗಳೂರು: ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಲಿದ್ದು, ಈ ಹಿನ್ನೆಲೆಯಲ್ಲಿ ಮೀನುಗಾರರು ಎಚ್ಚರಿಕೆ ವಹಿಸಬೇಕೆಂದು ಹವಾಮಾನ ಇಲಾಖೆ ತಿಳಿಸಿದೆ.
ಡಿ. 14ರಿಂದ 17ರ ವರೆಗೆ ಕಡಲು ಪ್ರಕ್ಷುಬ್ಧವಾಗಿರಲಿದೆ. ಈ ಅವಧಿಯಲ್ಲಿ ಗಾಳಿಯ ವೇಗ ಹೆಚ್ಚಿರಲಿದೆ.
ಆದುದರಿಂದ ಮೀನುಗಾರರು ಮೀನುಗಾರಿಕೆಗೆ ಇಳಿಯದೇ ಇರುವುದು ಉತ್ತಮ. ಅದರಲ್ಲೂ ಡಿ. 16ರಂದು ಗಾಳಿಯ ವೇಗ ಅತೀ ಹೆಚ್ಚು ಇರುವ ಸಾಧ್ಯತೆ ಇದೆ. ಈ ವೇಳೆ ಸಂಭವಿಸಬಹುದಾದ ಅನಾಹುತವನ್ನು ತಡೆಗಟ್ಟುವ ಉದ್ದೇಶದಿಂದ ಯಾವುದೇ ದೋಣಿ ಮೀನುಗಾರಿಕೆಗೆ ತೆರಳದಂತೆ ಹಾಗೂ ಈಗಾಗಲೇ ತೆರಲಿರುವ ಎಲ್ಲ ದೋಣಿಗಳು ಕೂಡಲೇ ದಡ ಸೇರುವಂತೆ ಮೀನುಗಾರಿಕೆ ಜಂಟಿ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಮಂಗಳೂರು ಕೋಸ್ಟ್‍ಗಾರ್ಡ್ ನೀಡಿರುವ ಹವಾಮಾನ ಮುನ್ಸೂಚನೆ ಆಧರಿಸಿ ಅವರು ಸೂಚನೆ ನೀಡಿದ್ದಾರೆ.