Monday, November 25, 2024
ಸುದ್ದಿ

ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಯಲ್ಲಿ ಸ್ಥಾಪಕರ ದಿನಾಚರಣೆ, ಪ್ರತಿಭಾ ಪುರಸ್ಕಾರ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ -ಕಹಳೆ ನ್ಯೂಸ್

ಅಡ್ಯನಡ್ಕ: ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗಳ ಸ್ಥಾಪಕರ ದಿನಾಚರಣೆ, ಪ್ರತಿಭಾ ಪುರಸ್ಕಾರ ಮತ್ತು ಬಹುಮಾನ ವಿತರಣಾ ಸಮಾರಂಭವು ಡಿಸೆಂಬರ್ 14ರಂದು ಜನತಾ ಪದವಿಪೂರ್ವ ಕಾಲೇಜಿನ ವಾರಣಾಶಿ ಕೃಷ್ಣ ಸಭಾಭವನದಲ್ಲಿ ಜರುಗಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಖ್ಯಾತ ಹಿರಿಯ ಸಾಹಿತಿ, ಜನಪ್ರಿಯ ವೈದ್ಯ ಡಾ. ಕೆ. ರಮಾನಂದ ಬನಾರಿ ಅವರು ತಾವು ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗಳ ಹಳೆ ವಿದ್ಯಾರ್ಥಿ ಎಂಬುದನ್ನು ನೆನಪಿಸಿಕೊಳ್ಳುತ್ತಾ ವಿದ್ಯಾಸಂಸ್ಥೆಯ ಸ್ಥಾಪಕರಾದ ದಿವಂಗತ ವಾರಣಾಶಿ ಸುಬ್ರಾಯ ಭಟ್ ಹಾಗೂ ದಿವಂಗತ ಸಾಯ ಕೃಷ್ಣ ಭಟ್ ಅವರ ಬಗ್ಗೆ ಸಂಸ್ಮರಣಾ ಭಾಷಣ ನಡೆಸಿಕೊಟ್ಟರು. ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಗೋವಿಂದ ಪ್ರಕಾಶ್ ಸಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆತ್ತವರನ್ನು, ಕಲಿಸಿದ ಗುರುಗಳನ್ನು, ಶಾಲೆಯನ್ನು, ಶಾಲೆಯ ಸ್ಥಾಪಕರನ್ನು ಸ್ಮರಿಸುವ ಮೂಲಕ ಮಕ್ಕಳ ಸಾಧನೆಗೆ ಮತ್ತಷ್ಟು ಪ್ರೇರಣೆ ದೊರೆಯಲಿ ಎಂದು ಹಾರೈಸಿದರು. ಜನತಾ ವಿದ್ಯಾಸಂಸ್ಥೆಗಳ ಸಂಚಾಲಕರಾದ ಡಾ. ಅಶ್ವಿನಿ ಕೃಷ್ಣಮೂರ್ತಿ ವಾರಣಾಶಿ ಅವರು ಪ್ರಸ್ತಾವನೆಗೈದರು. ದತ್ತಿನಿಧಿಯ ವರದಿಯನ್ನು ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಟಿ. ಆರ್. ನಾಯ್ಕ್ ವಾಚಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ರಮೇಶ್ ಎಂ. ಬಾಯಾರು ಹಾಗೂ ಜನತಾ ಪದವಿಪೂರ್ವ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ದೇವಾನಂದ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ. ಶ್ರೀನಿವಾಸ್, ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ. ಆರ್. ನಾಯ್ಕ್, ಜನತಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಾಧವ ನಾಯ್ಕ್ ಹಾಗೂ ಜನತಾ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಪ್ರಶಾಂತ ಮುಳಿಯ ಅವರು ಜನತಾ ವಿದ್ಯಾಸಂಸ್ಥೆಗಳ ವಾರ್ಷಿಕ ವರದಿಯನ್ನು ಹಾಗೂ ಹಳೆ ವಿದ್ಯಾರ್ಥಿ ಸಂಘದ ಉಪಕಾರ್ಯದರ್ಶಿ ಮಹಾಬಲೇಶ್ವರ ಜಿ. ಅವರು ಹಳೆ ವಿದ್ಯಾರ್ಥಿ ಸಂಘದ ವರದಿಯನ್ನು ವಾಚಿಸಿದರು.

ಜನತಾ ವಿದ್ಯಾಸಂಸ್ಥೆಗಳ ಸ್ಥಾಪಕರಾದ ದಿವಂಗತ ವಾರಣಾಶಿ ಸುಬ್ರಾಯ ಭಟ್ ಹಾಗೂ ದಿವಂಗತ ಸಾಯ ಕೃಷ್ಣ ಭಟ್ ಅವರ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ, ದತ್ತಿನಿಧಿ ಬಹುಮಾನಗಳು, ಸಾಂಸ್ಕೃತಿಕ ಸ್ಪರ್ಧೆಗಳು ಮತ್ತು ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟ ಹಾಗೂ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಸನ್ಮಾನಿಸಲಾಯಿತು. ಅಧ್ಯಾಪಕ ವೃಂದದ ಸುಗುಣ ರೈ, ಸುಂದರ್ ಜಿ., ಮಮತಾ, ಗೀತಾ ಎಚ್ ಶೆಟ್ಟಿ ಹಾಗೂ ಸೋಮಶೇಖರ್ ಎಚ್. ಅವರು ಬಹುಮಾನ ವಿಜೇತರ ಹಾಗೂ ಪುರಸ್ಕೃತರ ವಿವರ ವಾಚಿಸಿದರು.

ಈ ಕಾರ್ಯಕ್ರಮದ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೃಷಿಕ, ಸಾಧಕ ಅಮೈ ಮಹಾಲಿಂಗ ನಾಯ್ಕ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ದಿವಂಗತ ಪಾರ್ವತಿ ಅಮ್ಮನವರ ಸ್ಮರಣಾರ್ಥ, ಅವರ ಮಗ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ದಿವಂಗತ ನಾರಾಯಣ ಜೋಯಿಸ ಚವರ್ಕಾಡು ಅವರ ಪ್ರಾಯೋಜಕತ್ವದ ಸಿಹಿತಿಂಡಿ ವಿತರಿಸಲಾಯಿತು. ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ವಿದ್ಯಾರ್ಥಿನಿಯರಾದ ಶರಣ್ಯಕುಮಾರಿ ಬಿ. ಹಾಗೂ ಶ್ರೀಲೇಖಾ ಕೆ. ಅವರು ಸಭಾ ಕಾರ್ಯಕ್ರಮ ನಿರೂಪಿಸಿದರು. ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ. ಶ್ರೀನಿವಾಸ್ ವಂದಿಸಿದರು.