ಶ್ರೀಮಾತೆ ಶಾರದಾದೇವಿಯವರ ಜನ್ಮ ಜಯಂತಿಯಂದೇ ಇಹಲೋಕ ತ್ಯಜಿಸಿದ ಮಂಗಳೂರು ರಾಮಕೃಷ್ಣ ಮಠದ ನಿಕಟಪೂರ್ವ ಅಧ್ಯಕ್ಷರು ಪೂಜ್ಯ ಸ್ವಾಮಿ ಪೂರ್ಣಕಾಮಾನಂದಜಿ ಮಹಾರಾಜ್ – ಕಹಳೆ ನ್ಯೂಸ್
ಮಂಗಳೂರು: ಇಲ್ಲಿನ ರಾಮಕೃಷ್ಣ ಮಠದ ನಿಕಟಪೂರ್ವ ಅಧ್ಯಕ್ಷ ಪೂಜ್ಯ ಸ್ವಾಮಿ ಪೂರ್ಣಕಾಮಾನಂದಜಿ ಮಹಾರಾಜ್ (81) ಗುರುವಾರ(ಡಿ.15) ಬೆಳಗ್ಗೆ ಮಹಾಸಮಾಧಿ ಹೊಂದಿದರು.
81 ವರ್ಷ ವಯಸ್ಸಾಗಿದ್ದ ಸ್ವಾಮೀಜಿಯ ಹುಟ್ಟೂರು ಬಾಗಲಕೋಟೆ. ಶ್ರೀಮಾತೆ ಶಾರದಾದೇವಿಯವರ ಜನ್ಮ ಜಯಂತಿಯಂದೇ ಇಂದು ಬೆಳಗ್ಗೆ 6.15 ಕ್ಕೆ ಹೃದಯಾಘಾತದಿಂದಾಗಿ ಇಹಲೋಕ ತ್ಯಜಿಸಿದರು.
ಶ್ರೀ ರಾಮಕೃಷ್ಣ- ವಿವೇಕಾನಂದರ ತತ್ವಾದರ್ಶಗಳಿಂದ ಪ್ರಭಾವಿತರಾದ ಸ್ವಾಮಿಜಿ 1969 ರಲ್ಲಿ ಭಾರತೀಯ ನೌಕಾ ಸೇನೆಯಿಂದ ನಿವೃತ್ತಿ ಪಡೆದು ಮುಂಬೈ ರಾಮಕೃಷ್ಣ ಮಠಕ್ಕೆ ಬ್ರಹ್ಮಚಾರಿಯಾಗಿ ಸೇರಿದರು.
ರಾಮಕೃಷ್ಣ ಮಹಾಸಂಘದ 10ನೆೇ ಅಧ್ಯಕ್ಷರಾಗಿದ್ಧ ಪರಮ ಪೂಜ್ಯ ಸ್ವಾಮಿ ವಿರೇಶ್ವರಾನಂದಜಿ ಯವರಿಂದ ಮಂತ್ರದೀಕ್ಷೆ ಪಡೆದರು. 1978 ರಲ್ಲಿ ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿ ಮುಂಬೈ, ಅರುಣಾಚಲಪ್ರದೇಶ ಮತ್ತು ಮಾರಿಷಸ್ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದರು.
1980 ರಲ್ಲಿ ಮಂಗಳೂರಿಗೆ ಆಗಮಿಸಿದ ಸ್ವಾಮಿಜಿಯವರು, ಪೂಜ್ಯ ಸ್ವಾಮಿ ಸುಂದಾನಂದಜಿಯವರ ನಂತರ 1998 ರಲ್ಲಿ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾಗಿ ನಿಯುಕ್ತರಾದರು.
ಪೂಜ್ಯರ ಅಧ್ಯಕ್ಷಾವಧಿಯಲ್ಲಿ ಶ್ರೀಮಠದಲ್ಲಿ ಭವ್ಯವಾದ ಸಭಾಂಗಣ, ಗ್ರಂಥಾಲಯ ಮತ್ತು ಪುಸ್ತಕ ಮಳಿಗೆ ನಿರ್ಮಾಣಗೊಂಡವು. ಸ್ವಾಮಿಜಿಯವರ ಸಹೃದಯ ವ್ಯಕ್ತಿತ್ವದಿಂದಾಗಿ ಶ್ರೀರಾಮಕೃಷ್ಣರ ಭಾವ ಪ್ರಚಾರವು ಮಂಗಳೂರಿನಲ್ಲಿ ಮತ್ತಷ್ಟು ವಿಸ್ತಾರಗೊಂಡಿತು.
ಪೂಜ್ಯ ಸ್ವಾಮಿ ಪೂರ್ಣಕಾಮಾನಂದಜಿಯವರು 2010 ರಲ್ಲಿ ತಮ್ಮ ಅಧ್ಯಕ್ಷ ಸ್ಥಾನವನ್ನು ಪೂಜ್ಯ ಸ್ವಾಮಿ ಜಿತಕಾಮಾನಂಜಿ ಯವರಿಗೆ ಹಸ್ತಾಂತರಿಸಿ ನಿವೃತ್ತಿ ಪಡೆದರು.
ಮಂಗಳೂರು ರಾಮಕೃಷ್ಣ ಮಠದಲ್ಲಿ ಮಧ್ಯಾಹ್ನ 3 ಗಂಟೆಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದ್ದು, ಸಂಜೆ 4 ಗಂಟೆಗೆ ಅವರ ಅಂತಿಮ ಕ್ರಿಯೆ ನಡೆಯಲಿದೆ ಎಂದು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ತಿಳಿಸಿದ್ದಾರೆ.