Friday, September 20, 2024
ಸುದ್ದಿ

ರಿಪೇರಿ ನೆಪದಲ್ಲಿ 4 ವಾರಗಳಿಂದ ಆಂಬುಲೆನ್ಸ್ ನಾಪತ್ತೆ ! – ಕಹಳೆ ನ್ಯೂಸ್

ಆಲಂಕಾರು : ತುರ್ತು ಚಿಕಿತ್ಸಾ ಸೇವೆಗೆ ರಾಜ್ಯ ಸರಕಾರ ನಿಯೋಜಿಸಿದ್ದ ಆರೋಗ್ಯ ಕವಚ 108 ಆ್ಯಂಬುಲೆನ್ಸ್‌ನ ಸೇವೆ ಸುಮಾರು 25 ದಿನಗಳಿಂದ ಆಲಂಕಾರಿನ ಜನತೆಗೆ ಲಭ್ಯವಾಗುತ್ತಿಲ್ಲ. ಜನರು ಹಣ ತೆತ್ತು ಖಾಸಗಿ ವಾಹನಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

2015ರಲ್ಲಿ ಆಲಂಕಾರನ್ನು ಕೇಂದ್ರವಾಗಿರಿಸಿಕೊಂಡು ಆರಂಭವಾದ 108 ಆರೋಗ್ಯ ರಕ್ಷಾ ಆ್ಯಂಬುಲೆನ್ಸ್‌ ಸೇವೆ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಿರಾತಂಕವಾಗಿ ಸಾಗಿತ್ತು. ಸದ್ಯ 108 ಆ್ಯಂಬುಲೆನ್ಸ್‌ ಸೇವೆಗಾಗಿ 15 ಕಿ.ಮೀ. ದೂರದ ಕಡಬ ಅಥವಾ ಉಪ್ಪಿನಂಗಡಿ, 35 ಕಿ.ಮೀ. ದೂರದ ಸುಬ್ರಹ್ಮಣ್ಯ, 30 ಕಿ.ಮೀ. ದೂರದ ಶಿರಾಡಿ ಅಥವಾ 25 ಕಿ.ಮೀ. ದೂರದಲ್ಲಿರುವ ಬೆಳ್ಳಾರೆಯನ್ನು ಸಂಪರ್ಕಿಸಬೇಕಾಗಿದೆ. ಈ ಸೇವೆ ಸೂಕ್ತ ಸಮಯದಲ್ಲಿ ಸಿಗುವುದೂ ಇಲ್ಲ. ದುಬಾರಿ ಬಾಡಿಗೆ ಹಣ ನೀಡಿ ಖಾಸಗಿ ವಾಹನವನ್ನು ಅವಲಂಬಿಸಬೇಕಾಗಿರುವುದು ಅನಿವಾರ್ಯ.

ಜಾಹೀರಾತು
ಜಾಹೀರಾತು
ಜಾಹೀರಾತು

108 ಸೇವೆ ರದ್ದುಪಡಿಸುವ ಹುನ್ನಾರವೇ?
ಆ್ಯಂಬುಲೆನ್ಸ್‌ಗೆ ಅಗತ್ಯವಾಗಿರುವ ವಾಹನದ ಎಫ್ ಸಿ  (ಫಿಟ್ನೆಸ್‌ ಸರ್ಟಿಫಿಕೇಟ್ ) ಅವಧಿ ಮುಕ್ತಾಯವಾಗಿದೆ. ಇದರ ನವೀಕರಣಕ್ಕಾಗಿ ಹಾಗೂ ಬಣ್ಣ ಬಳಿಯುವುದಕ್ಕಾಗಿ ಜು. 14ರಂದು ವಾಹನವನ್ನು ಗ್ಯಾರೇಜಿನಲ್ಲಿರಿಸಲಾಗಿದೆ. 108 ಸೇವೆಯನ್ನು ರದ್ದುಪಡಿಸುವ ಹುನ್ನಾರ ಇದು ಎಂದು ಸಾರ್ವಜನಿಕ ವಲಯದಿಂದ ಆರೋಪ  ಕೇಳಿ ಬಂದಿದೆ. ತುರ್ತು ಸೇವೆಗಾಗಿ 108 ಅನ್ನು ನಂಬಿಕೊಂಡಿದ್ದ ಆಲಂಕಾರು, ಕುಂತೂರು, ಪೆರಾಬೆ, ಬಲ್ಯ, ಪದವು, ರಾಮಕುಂಜ, ಕೊಯಿಲ, ಹಳೆನೇರಂಕಿ ಗ್ರಾಮಗಳ ಜನರು ಸದ್ಯ ಈ ಸೇವೆಯಿಂದ ವಂಚಿತರಾಗಿದ್ದಾರೆ.

ಜಾಹೀರಾತು

ನೂರೆಂಟು ಸಮಸ್ಯೆ
ಕೆಲ ದಿನಗಳ ಹಿಂದಷ್ಟೇ ಕಡಬದ 108 ಆ್ಯಂಬುಲೆನ್ಸ್‌ನ ಚಕ್ರದಲ್ಲಿ ದೋಷವಿದೆ ಎನ್ನುವ ಕಾರಣ ನೀಡಿ ಸಾರ್ವಜನಿಕ ಸೇವೆಯಿಂದ ದೂರವಿಟ್ಟಿದ್ದರು. ಆಲಂಕಾರಿನಲ್ಲಿರುವ ಆ್ಯಂಬುಲೆನ್ಸ್‌ ಸೇವೆ ಬೆಳಗ್ಗೆಯಿಂದ ಸಂಜೆ ತನಕ ಮಾತ್ರ ಸೇವೆಗೆ ಲಭ್ಯವಾಗುತ್ತಿದೆ. ಕೇವಲ ಇಬ್ಬರು ಸಿಬಂದಿ ಇದ್ದು, ರಾತ್ರಿ ವೇಳೆ ಕರ್ತವ್ಯ ನಿರ್ವಹಿಸಲು ಸಿಬಂದಿ ಕೊರತೆಯೂ ಕಾಡುತ್ತಿದೆ.

ಸತ್ಯಾಗ್ರಹ ನಡೆಸಲಾಗುವುದು
108 ಆ್ಯಂಬುಲೆನ್ಸ್‌ ಅನ್ನು ದುರಸ್ತಿಗೆ ಕಳುಹಿಸುವಾಗ ಬದಲಿ ವ್ಯವಸ್ಥೆ ಕಲ್ಪಿಸಿಕೊಡುವುದು ಕಂಪೆನಿಯ ಕರ್ತವ್ಯ  ವಾರಗಟ್ಟಲೆ ವಾಹನವನ್ನು ಗ್ಯಾರೇಜ್‌ನಲ್ಲಿ ನಿಲ್ಲಿಸಿ, ಕೆಲ ನೆಪ ನೀಡಿ ಕೇಂದ್ರ ಬದಲಾಯಿಸುವ ಹುನ್ನಾರವನ್ನು ಕಂಪೆನಿ ನಡೆಸುತ್ತಿದೆ ಎನ್ನುವ ವಿಚಾರ ತಿಳಿದುಬಂದಿದೆ. ಮುಂದಿನ 1 ವಾರದೊಳಗೆ ಆಲಂಕಾರಿನ ಜನತೆಗೆ 108 ಆ್ಯಂಬುಲೆನ್ಸ್‌ ಸೇವೆಗೆ ಲಭ್ಯವಾಗದಿದ್ದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು.
 - ಅಬೂಬಕ್ಕರ್‌ (ಅಬ್ಬು), ಆಲಂಕಾರು ವಲಯ ಕಾರ್ಮಿಕ ಸಂಘದ ಅಧ್ಯಕ್ಷರು.

ಶೀಘ್ರವೇ ಲಭ್ಯವಾಗಲಿದೆ
ಆಲಂಕಾರಿನ ವಾಹನದ ಫಿಟ್‌ನೆಸ್‌ ಸರ್ಟಿಫಿಕೇಟ್ ಅವಧಿ ಮುಗಿದಿರುತ್ತದೆ. ನವೀಕರಿಸಿ ಪಡೆಯುವುದಕ್ಕಾಗಿ ವಾಹನವನ್ನು ಕಾರ್ಕಳ ಗ್ಯಾರೇಜ್‌ ನಲ್ಲಿ ದುರಸ್ತಿಗೆ ಇಟ್ಟಿದ್ದೇವೆ. ಪೈಂಟ್‌ ಕೊಡಲಾಗಿದೆ. ಮಳೆ ಬರುತ್ತಿದ್ದ ಕಾರಣ ಪೈಂಟ್‌ ಸರಿಯಾಗಿ ಒಣಗಿಲ್ಲ. ಹೀಗಾಗಿ ವಾಹನ ಬಿಡುಗಡೆ ವಿಳಂಬವಾಗಿದೆ. ಕೆಲವೇ ದಿನಗಳಲ್ಲಿ ವಾಹನವನ್ನು ಆಲಂಕಾರಿನ ಜನತೆಯ ಸೇವೆಗೆ ಲಭ್ಯವಾಗುವಂತೆ ಮಾಡಲಾಗುವುದು. ಯಾವುದೇ ನಿರ್ಲಕ್ಷ್ಯ ಮಾಡಿಲ್ಲ.
– ಮಹಾಬಲ,
ಜಿಲ್ಲಾ ವ್ಯವಸ್ಥಾಪಕರು, ಆರೋಗ್ಯರಕ್ಷಾ