ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಶ್ರಾವಣಿ ಕಾಟುಕುಕ್ಕೆ ಅವರು ಕಣಿಪುರ ಮಾಸ ಪತ್ರಿಕೆಯ ವತಿಯಿಂದ ಕೊಡಮಾಡುವ ಯಕ್ಷ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಡಿಸೆಂಬರ್ 18 ರಂದು ಕುಂಬಳೆಯಲ್ಲಿ ಜರಗಲಿರುವ ಕಣಿಪುರ ಯಕ್ಷೋತ್ಸವ ಸಂದರ್ಭದಲ್ಲಿ ಈ ಪ್ರಶಸ್ತಿ ಪ್ರದಾನವಾಗಲಿದೆ. ಕಾಟುಕುಕ್ಕೆಯ ಶಿವಪ್ರಸಾದ್ ರಾವ್, ವೀಣಾ ದಂಪತಿಗಳ ಪುತ್ರಿಯಾದ ಶ್ರಾವಣಿ ಕಳೆದ ಏಳು ವರ್ಷಗಳಿಂದ ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ (ರಿ.) ಇದರ ನಿರ್ದೇಶಕ ನಾಟ್ಯಾಚಾರ್ಯ ಸಬ್ಬಣಕೋಡಿ ರಾಮ ಭಟ್ ಇವರಲ್ಲಿ ನಾಟ್ಯಾಭ್ಯಾಸ ಮಾಡುತ್ತಿದ್ದು ನೂರಾರು ವೇದಿಕೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ಮೀನಾಕ್ಷಿ, ಕೃಷ್ಣ, ವಿಷ್ಣು, ಸುಧನ್ವ, ದೇವಿ ಮಹಾತ್ಮೆಯ ದೇವಿ, ಚಿತ್ರಾಂಗದೆ ಹೀಗೆ ಹತ್ತು ಹಲವು ವೇಷಗಳು ಇವರ ಪಾಲಿಗೆ ಒದಗಿ ಬಂದಿವೆ. ಇದರೊಂದಿಗೆ ತನ್ನ ಆರನೇ ವಯಸ್ಸಿನಿಂದ ಪೆರ್ಲದ ಶಿವಾಂಜಲಿ ನೃತ್ಯ ಕಲಾ ಕೇಂದ್ರ (ರಿ.) ಇದರ ನಿರ್ದೇಶಕಿ ವಿದುಷಿ ಕಾವ್ಯ ಭಟ್ ಅವರಿಂದ ಭರತನಾಟ್ಯ ತರಬೇತಿಯನ್ನು ಪಡೆದಿದ್ದಾರೆ. ತನ್ನ ಹತ್ತನೇ ವಯಸ್ಸಿನಲ್ಲಿ ಭರತನಾಟ್ಯ ಜೂನಿಯರ್ ಪರೀಕ್ಷೆಯನ್ನು ಶೇಕಡ 90 ಅಂಕಗಳೊಂದಿಗೆ ಅತ್ಯುತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಹತ್ತಾರು ವೇದಿಕೆಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.
ಅಂತೆಯೇ ವಿದುಷಿ ಅನುರಾಧಾ ಭಟ್ ಅಡ್ಕಸ್ಥಳ ಅವರ ಬಳಿ ಕಳೆದ ಆರು ವರ್ಷದಿಂದ ಸಂಗೀತಾಭ್ಯಾಸ ಮಾಡುತ್ತಾ ಜೂನಿಯರ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.
ಕಳೆದೊಂದು ವರ್ಷದಿಂದ ತೆಂಕಬೈಲು ಮುರಳಿ ಕೃಷ್ಣ ಶಾಸ್ತ್ರಿಗಳಿಂದ ಭಾಗವತಿಕೆಯನ್ನು ಕೂಡ ಅಭ್ಯಾಸ ಮಾಡುತ್ತಾ ರಂಗಪ್ರವೇಶ ಮಾಡಿದ್ದಾರೆ. ಇತ್ತೀಚೆಗೆ ಕಾಕುಕುಕ್ಕೆ ಶ್ರೀ ಸುಬ್ರಾಯ ದೇವಳದ ಷಷ್ಠಿ ಜಾತ್ರೆಯ ಸಂದರ್ಭದಲ್ಲಿ ಭಾಗವತರಾದ ಸತ್ಯನಾರಾಯಣ ಪುಣಿಚಿತ್ತಾಯರ ಸಾಹಿತ್ಯದಲ್ಲಿ ದೇವರ ಒಂದು ಹಾಡನ್ನು ಹಾಡಿದ್ದು ಅದು ಜಾತ್ರೆಯ ಸಂದರ್ಭದಲ್ಲಿ ಬಿಡುಗಡೆಗೊಂಡಿದೆ.