Recent Posts

Sunday, January 19, 2025
ಸುದ್ದಿ

ಕಾಸರಗೋಡಿನಲ್ಲಿ ಬಿಜೆಪಿ ಹಣಿಯಲು ಬದ್ದ ವೈರಿಗಳ ರಣತಂತ್ರ – ಕಹಳೆ ನ್ಯೂಸ್

ಕಾಸರಗೋಡು, ಆ 08 : ಕೇರಳದಲ್ಲಿರುವ ಆಡಳಿತ ಮತ್ತು ಪ್ರತಿಪಕ್ಷ ಒಗ್ಗಟ್ಟಾಗಿ ಬಿಜೆಪಿ ವಿರುದ್ಧ ರಣತಂತ್ರ ಹೆಣೆಯತೊಡಗಿದ್ದು , ಅತ್ತ 2019 ರಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರಕಾರದ ವಿರುದ್ಧ ಪ್ರತಿಪಕ್ಷಗಳು ಒಗ್ಗೂಡಿ ಮಹಾಮೈತ್ರಿ ರಚನೆ ಬಿರುಸಾಗಿ ನಡೆಯುತ್ತಿದ್ದರೆ ಇತ್ತ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೇರಳದಲ್ಲಿ ಆಡಳಿತ ಸಿಪಿಐ ಎಂ ನೇತೃತ್ವದ ಎಲ್ ಡಿ ಎಫ್ ಮತ್ತು ಪ್ರತಿಪಕ್ಷವಾದ ಕಾಂಗ್ರೆಸ್ ನೇತೃತ್ವದ ಯು ಡಿ ಎಫ್ ಸ್ಥಳೀಯ ಮಟ್ಟದಲ್ಲಿ ಬಿಜೆಪಿಯನ್ನು ಹೆಣೆಯಲು ಹೊರಟಿದ್ದು , ಮೈತ್ರಿ ಪರಿಣಾಮ ಕಾಸರಗೋಡಿನ ಎರಡು ಗ್ರಾಮ ಪಂಚಾಯತ್ ಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಇದರಿಂದ ಜಿಲ್ಲೆಯಲ್ಲಿ ಬಿಜೆಪಿ ಆಡಳಿತ ಬಲ ಎರಡಕ್ಕೆ ಕುಸಿದಿದೆ. ಜಿಲ್ಲೆಯ 38 ಗ್ರಾಮ ಪಂಚಾಯತ್ ಗಳ ಪೈಕಿ ಬಿಜೆಪಿ ನಾಲ್ಕು ಗ್ರಾಮ ಪಂಚಾಯತ್ ಗಳಲ್ಲಿ ಅಧಿಕಾರದಲ್ಲಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪೈಕಿ ಕಾರಡ್ಕ ಮತ್ತು ಎಣ್ಮಕಜೆಯಲ್ಲಿ ಅವಿಶ್ವಾಸ ಗೊತ್ತುವಳಿ ಮೂಲಕ ಆಡಳಿತ ಕಳೆದುಕೊಂಡಿದೆ. ಇನ್ನು ಬಿಜೆಪಿ ಕೈಯಲ್ಲಿ ಉಳಿದಿರುವುದು ಮಧೂರು ಮತ್ತು ಬೆಳ್ಳೂರು ಗ್ರಾಮ ಪಂಚಾಯತ್ ಗಳು.
2015 ರಲ್ಲಿ ನಡೆದ ಸ್ಥಳೀಯಾಡಳಿತ ಚುನಾವಣೆಯಲ್ಲಿ ಬಿಜೆಪಿಗೆ ಮಧೂರು ಮತ್ತು ಬೆಳ್ಳೂರು ಗ್ರಾಮ ಪಂಚಾಯತ್ ಹೊರತು ಪಡಿಸಿ ಉಳಿದೆಡೆ ಬಹುಮತ ಲಭಿಸಿರಲಿಲ್ಲ. ಕಾರಡ್ಕದಲ್ಲಿ ಅತೀ ಹೆಚ್ಚು ಸ್ಥಾನ ಪಡೆದ ಹಿನ್ನಲೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಅಧ್ಯಕ್ಷ ರ ಆಯ್ಕೆ ಸಂದರ್ಭದಲ್ಲಿ ಐದು ಸ್ಥಾನ ಪಡೆದ ಎಲ್ ಡಿ ಎಫ್ ಗೆ ಮೂರು ಸ್ಥಾನ ಪಡೆದ ಯು ಡಿ ಎಫ್ ಬೆಂಬಲ ನೀಡಿದ್ದರೂ ಎಲ್ ಡಿ ಎಫ್ ನಿರಾಕರಿಸಿತ್ತು.
ಎಣ್ಮಕಜೆಯಲ್ಲಿ ಬಿಜೆಪಿ ಮತ್ತು ಯು ಡಿ ಎಫ್ ತಲಾ ಏಳು ಸ್ಥಾನ ಪಡೆದರೆ ಎಲ್ ಡಿ ಎಫ್ ಮೂರು ಸ್ಥಾನ ಪಡೆದಿತ್ತು. ಆದರೆ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಯು ಡಿ ಎಫ್ ಗೆ ಎಲ್ ಡಿ ಎಫ್ ಬೆಂಬಲ ನೀಡಲು ಮುಂದಾಗಲಿಲ್ಲ . ತಲಾ ಏಳರಂತೆ ಸಮಾನ ಸ್ಥಾನ ಪಡೆದ ಹಿನ್ನಲೆಯಲ್ಲಿ ಚೀಟಿ ಎತ್ತಿದಾಗ ಅದೃಷ್ಟ ಬಿಜೆಪಿ ಪಾಲಾಗಿತ್ತು.


ರಾಷ್ಟ್ರೀಯ ಮಟ್ಟದಲ್ಲಿ ಪ್ರತಿಪಕ್ಷ ಬಿಜೆಪಿಯನ್ನು ಕೆಳಗಿಳಿಸುವ ಪ್ರಯತ್ನ ನಡೆಯುತ್ತಿದ್ದಂತೆ ಇತ್ತ ಸ್ಥಳೀಯ ಮಟ್ಟದಲ್ಲೂ ಸಂಚಲನ ಮೂಡಿಸಿದ್ದು, ದಿನಗಳ ಹಿಂದೆ ಕಾರಡ್ಕ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಆಡಳಿತದ ವಿರುದ್ಧ ಎಲ್ ಡಿ ಎಫ್ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಗೆ ಯು ಡಿ ಎಫ್ ಬೆಂಬಲ ನೀಡುವುದರೊಂದಿಗೆ ಹದಿನೆಂಟು ವರ್ಷಗಳ ಆಡಳಿತ ಕಾರಡ್ಕ ಗ್ರಾಮ ಪಂಚಾಯತ್ ನಲ್ಲಿ ಅಂತ್ಯಗೊಂಡಿತ್ತು. ಆ ಬಳಿಕ ಇದೀಗ ಎಣ್ಮಕಜೆ ಗ್ರಾಮ ಪಂಚಾಯತ್ ಬಿಜೆಪಿ ಆಡಳಿತದ ವಿರುದ್ಧ ಯು ಡಿ ಎಫ್ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಗೆ ಎಲ್ ಡಿ ಎಫ್ ಬೆಂಬಲ ನೀಡಿದ ಪರಿಣಾಮ ಎರಡೂವರೆ ವರ್ಷದ ಆಡಳಿತದ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಆಗಸ್ಟ್ 08 ರ ಬೆಳಗ್ಗೆ ಅಧ್ಯಕ್ಷೆ ರೂಪವಾಣಿ ಆರ್ . ಭಟ್ ವಿರುದ್ಧ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ಮಂಜೂರಾಗುವ ಮೂಲಕ ಬಿಜೆಪಿ ಅಧಿಕಾರ ಕಳೆದುಕೊಳ್ಳುವಂತಾಯಿತು. ಈ ಹಿಂದೆ ಪೈವಳಿಕೆ ಗ್ರಾಮ ಪಂಚಾಯತ್ ನಲ್ಲಿ ಇದೆ ತಂತ್ರವನ್ನು ಉಭಯ ಪಕ್ಷಗಳು ಮಾಡಿದ್ದು , ಇಲ್ಲಿ ಎಂಟು ಸ್ಥಾನ ಪಡೆದ ಬಿಜೆಪಿ ಅತೀ ದೊಡ್ಡ ಪಕ್ಷವಾಗಿದ್ದರೂ ಏಳು ಸ್ಥಾನ ಪಡೆದ ಎಲ್ ಡಿ ಎಫ್ ಮತ್ತು ನಾಲ್ಕು ಸ್ಥಾನ ಪಡೆದ ಯು ಡಿ ಎಫ್ ಮೈತ್ರಿ ಕೂಟ ಕಳೆದ ಎರಡೂವರೆ ವರ್ಷಗಳಿಂದ ಆಡಳಿತ ನಡೆಸುತ್ತಿದೆ

.
ಕೇರಳದಲ್ಲಿ ಎಲ್ ಡಿ ಎಫ್ ಮತ್ತು ಯು ಡಿ ಎಫ್ ಬದ್ದ ವೈರಿಗಳಾಗಿದ್ದರೂ ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸಲು ಎಲ್ಲಾ ರೀತಿಯ ಕಸರತ್ತಿಗೆ ತೊಡಗಿದ್ದು, ಬಿಜೆಪಿ ಯ ಆಡಳಿತದ ಕನಸಿಗೆ ನಿರಾಸೆ ಮೂಡಿಸುತ್ತಿದೆ.

ಮುಂದಿನ ಲೋಕಸಭಾ ಹಾಗೂ ಇತರ ಚುನಾವಣೆಯಲ್ಲಿ ಉಭಯ ಪಕ್ಷಗಳ ರಣತಂತ್ರ ಏನೆಂಬುದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಉಭಯ ಪಕ್ಷಗಳ ಮೈತ್ರಿ ಬಿಜೆಪಿಯ ನಿದ್ದೆಗೆಡಿಸಿದ್ದರೆ ಇತ್ತ ಮೈತ್ರಿ ಶಾಶ್ವತವೇ ಎಂಬುದು ರಾಜಕೀಯ ವಲಯದಲ್ಲಿ ಪ್ರಶ್ನೆಯಾಗಿ ಉಳಿದುಕೊಂಡಿದೆ.