ಮೂಡುಬಿದಿರೆ: ಎಕ್ಸಲೆಂಟ್ ಕಾಲೇಜಿನ ದಶಮ ಸಂಭ್ರಮದ ಪ್ರಯುಕ್ತ ನಡೆದ ಪೋಷಕರು ಮತ್ತು ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ – ಕಹಳೆ ನ್ಯೂಸ್
ಮೂಡುಬಿದಿರೆ: ಸಾಕ್ಷರತೆ ಪ್ರಮಾಣ ಹೆಚ್ಚಿದಂತೆ ಸಭ್ಯ ನಾಗರಿಕ ಸಮಾಜ ನಿರ್ಮಿತಿ ಸಾಧ್ಯವಾಗಬೇಕು. ಅದಕ್ಕೆ ಪೂರಕವಾಗಿ ಮೌಲಿಕ ಶಿಕ್ಷಣ, ಸಮಾಜಮುಖಿ ಚಿಂತನಶೀಲಶಿಕ್ಷಣ ವ್ಯವಸ್ಥೆ ಅನಿವಾರ್ಯ. ಜಾತಿ ಧರ್ಮಗಳಿಗಿಂತ ದೇಶ ಮೊದಲೆಂಬ ಭಾವನೆ ಪ್ರತಿಯೊಬ್ಬ ವಿದ್ಯಾರ್ಥಿಯ ಮನೋಭೂಮಿಕೆಯಲ್ಲಿ ಬೀಜಾಂಕುರವಾಗಬೇಕು.
ಭಾರತೀಯ ಶಿಕ್ಷಣ ಪದ್ಧತಿ ಸಾಮಾಜಿಕ ಸಾಮರಸ್ಯ ಮೂಡಿಸಿ ವಿಶ್ವಭ್ರಾತೃತ್ವದಡಿಯಲ್ಲಿ ದೇಶ ಕಟ್ಟಿ ಬೆಳೆಸುವ ಉದಾತ್ತ ಪರಿಕಲ್ಪನೆಯನ್ನು ಹೊಂದಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿದರು.
ಇಲ್ಲಿನ ಎಕ್ಸಲೆಂಟ್ ಕಾಲೇಜಿನ ದಶಮ ಸಂಭ್ರಮದ ಪ್ರಯುಕ್ತ ನಡೆದ ಪೋಷಕರು ಮತ್ತು ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಯೋಗ್ಯ ನಾಗರಿಕರಾಗಿ ರಾಷ್ಟಾçಭಿಮಾನ ಮೂಡಿಸುವ ಶೈಕ್ಷಣಿಕ ವ್ಯವಸ್ಥೆ ನಮ್ಮ ಕನಸು. ವಿದ್ಯಾರ್ಥಿಯ ಬದುಕಿಗೆ ದಾರಿದೀಪವಾದ ಶಿಕ್ಷಣ ಕೇಂದ್ರಗಳು ಸಮಾಜದ ಪ್ರಗತಿಗೆ ವಿದ್ಯಾರ್ಥಿಯ ಉತ್ತರದಾಯಿತ್ವವನ್ನು ಮನದಟ್ಟು ಮಾಡಬೇಕು. ಆ ನಿಟ್ಟಿನಲ್ಲಿ ಎಕ್ಸಲೆಂಟ್ ವಿದ್ಯಾಸಂಸ್ಥೆ ಆಧುನಿಕ ಶಿಕ್ಷಣದ ಜೊತೆ ಸಂಸ್ಕಾರವAತ ಮತ್ತು ಜವಾಬ್ದಾರಿಯುತ ಪ್ರಜೆಯ ನಿರ್ಮಾಣದ ಕಾಳಜಿಯನ್ನು ಹೊಂದಿರುವುದು ಸಂತಸದ ಸಂಗತಿ ಎಂದು ಹೇಳುತ್ತ ಶುಭ ಹಾರೈಸಿದರು.
ಇದೇ ಸಂದರ್ಭದಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯಕುಮಾರ್ ಶೆಟ್ಟಿ ಅವರು ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವದ ಜೊತೆಗೆ ಚಿತ್ತ ಚಾಂಚಲ್ಯದಿAದ ಬೇಡದ ಆಕರ್ಷಣೆಗಳಿಗೆ ಮರುಳಾಗುವ ವಯಸ್ಸಾದ ಹದಿಹರೆಯದಲ್ಲಿ ಜಾಗರೂಕರಾಗಿದ್ದು ಏಕಾಗ್ರತೆ, ಕಠಿಣ ಪರಿಶ್ರಮದ ಮೂಲಕ ಸಾಧನೆ ಮಾಡಬೇಕು. ಪರಸ್ಪರ ಸೌಹಾರ್ದತೆಯ ನೆಲೆಯಲ್ಲಿ ಸಂಘಟಿತರಾಗಿ ಕೆಲಸ ಮಾಡಿದರೆ ಯಶಸ್ಸು ನಿಶ್ಚಿತ. ನಮ್ಮೊಳಗೆ ಬದಲಾವಣೆ ಬಂದರೆ ಸಮಾಜದ ಬದಲಾವಣೆ ಸುಲಭ. ಸಮಾಜದ ಅಭಿವೃದ್ಧಿಗೆ ವಿದ್ಯಾರ್ಥಿಗಳೇ ಶ್ರೇಷ್ಠ ಸಂಪನ್ಮೂಲ. ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ವಿನಿಯೋಗಿಸುವ ಹಣ ಶೇಷ್ಠವಾದ ಬಂಡವಾಳ ಹೂಡಿಕೆ ಎಂದು ಹೇಳುತ್ತಾ ಎಕ್ಸಲೆಂಟ್ ಸಂಸ್ಥೆ ಗುಣಮಟ್ಟದ ಶಿಕ್ಷಣದ ಮೂಲಕ ಸಮಾಜದ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ನಿಭಾಯಿಸುತ್ತಿದೆ ಎಂದರು.
ಶಿಕ್ಷಣ ತಜ್ಞರು ಹಾಗೂ ಆಪ್ತ ಸಮಾಲೋಚಕರಾದ ಶ್ರೀ ಪುಷ್ಪರಾಜ್ ಬದಿಯಡ್ಕ, ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳ ಕಲಿಕಾ ಸಮಸ್ಯೆಗಳು ಮತ್ತು ಪೋಷಕರ ಪ್ರತಿ ಸ್ಪಂದನದ ಕುರಿತಾಗಿ ಬೆಳಕನ್ನು ಚೆಲ್ಲಿದರು.
ಅಧ್ಯಕ್ಷರಾದ ಯುವರಾಜ್ ಜೈನ್ ಮಾತನಾಡುತ್ತಾ ವಿದ್ಯಾರ್ಥಿಗಳು ಪಠ್ಯ ಶಿಕ್ಷಣದ ಜೊತೆಗೆ ಬದುಕಿನ ಪಾಠ ಕಲಿತು ಧನಾತ್ಮಕ ಬದಲಾವಣೆ ಕಾಣಬೇಕೆನ್ನುವುದು ನಮ್ಮ ಸಂಕಲ್ಪ. ಪೋಷಕರಲ್ಲಿ ಮತ್ತು ಅಧ್ಯಾಪಕರಲ್ಲಿ ನಂಬಿಕೆ ಇಟ್ಟು ಆತ್ಮ ವಿಶ್ವಾಸದ ಜೊತೆಗೆ ಶಿಸ್ತನ್ನು ರೂಢಿಸಿಕೊಂಡು ತಮ್ಮ ಜ್ಞಾನ ಮತ್ತು ಕೌಶಲವನ್ನು ವೃದ್ಧಿಸಿಕೊಳ್ಳಬೇಕು ಎಂದು ನುಡಿದರು.
ಹಿರಿಯ ಉಪನ್ಯಾಸಕ ಪುರುಷೋತ್ತಮ ತುಳುಪುಳೆ ಹಿರಿಯ ವಿದ್ಯಾರ್ಥಿಗಳ ಸಂಘದ ವರದಿ ವಾಚಿಸಿದರು. ವೇದಿಕೆಯಲ್ಲಿ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಾಧಕ ಹಿರಿಯ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಮಾಡಲಾಯಿತು.
ಸಭಾ ಕಾರ್ಯಕ್ರಮದ ನಂತರ ಪೋಷಕರಿಂದ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ನಡೆಯಿತು. ಉಪನ್ಯಾಸಕ ತೇಜಸ್ವಿ ಭಟ್ ಕಾರ್ಯಕ್ರಮ ನಿರೂಪಿಸಿದರು.