ಮಂಗಳೂರು, ಅಗಸ್ಟ್ 10: ಮೈಸೂರು ನಗರದ ದೇವರಾಜ ಪೊಲೀಸ್ ಠಾಣೆ ಸರಹದ್ದಿನ ಕೆ.ಆರ್.ಆಸ್ಪತ್ರೆ ಆವರಣದ ಬಿಎಸ್ ಸಿ ಶುಶ್ರೂಕಿಯರ ನಿಲಯಕ್ಕೆ ನುಗ್ಗಿ ಆತಂಕ ಸೃಷ್ಟಿಸಿದ್ದ ಯುವಕನನ್ನು ದಕ್ಷಿಣ ಕನ್ನಡ ಪೊಲೀಸರು ಬಂಧಿಸಿದ್ದಾರೆ.
ಜುಲೈ 20ರ ತಡರಾತ್ರಿ ಅಕ್ರಮವಾಗಿ ಒಳ ನುಗ್ಗಿ, ಸೆಕ್ಯೂರಿಟಿ ಗಾರ್ಡ ಗೆ ಚಾಕು ತೋರಿಸಿ, ಮಲಗಿದ್ದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇಲೆ ಈತನನ್ನು ಬಂಧಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಮೈಸೂರಿನ ದೇವರಾಜ ಠಾಣೆಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಆರೋಪಿಯ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕೇರಳದ ಕೊಟ್ಟಾಯಂ ಜಿಲ್ಲೆಯ ಪುದುಕೊಳ್ಳಿ ಎಂಬಲ್ಲಿ ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬಂಟ್ವಾಳದ ಮಣಿನಾಲ್ಕೂರು ಗ್ರಾಮದ ಮಹಮ್ಮದ್ ಅಲ್ತಾಫ್ (23) ಎಂದು ಗುರುತಿಸಲಾಗಿದೆ.
ಪ್ರಕರಣದ ತನಿಖೆ ಚುರುಕುಗೊಳ್ಳುತಿದ್ದಂತೆ ಕೇರಳದ ಕೊಟ್ಟಾಯಂ ಜಿಲ್ಲೆಯ ಪುದುಪಳ್ಳಿ ಎಂಬಲ್ಲಿಯ ಜಿನುಲಾಲ್ ವಿಸಿ ಎಂಬವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ತಲೆ ಮರೆಸಿಕೊಂಡಿದ್ದ ಆರೋಪಿ ಮಹಮ್ಮದ್ ಅಲ್ತಾಫ್ ನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಅಪರಿಚಿತ ವ್ಯಕ್ತಿಯೊಬ್ಬ ರಾತ್ರೋರಾತ್ರಿ ಮೈಸೂರಿನ ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ನುಗ್ಗಿ ಒಳ ಉಡುಪು ಕದ್ದಿದ್ದು ಹಾಗೂ ಲೈಂಗಿಕ ಕಿರುಕುಳ ನೀಡಿದ್ದ ಘಟನೆಯ ಕುರಿತು ಭಾರೀ ಸುದ್ದಿಯಾಗಿತ್ತು. ಮೈಸೂರಿನಲ್ಲಿ ಹಾಸ್ಟೆಲ್ ಗೆ ನುಗ್ಗಿದ್ದ ವ್ಯಕ್ತಿ ವಿದ್ಯಾರ್ಥಿನಿಯರ ಒಳ ಉಡುಪು ಕದಿಯುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ವಿದ್ಯಾರ್ಥಿನಿಯರ ಕೋಣೆಗೆ ನುಗ್ಗಿದ ಆತ ಅವರ ಮೊಬೈಲ್ ಕಸಿದುಕೊಳ್ಳಲು ಪ್ರಯತ್ನ ನಡೆಸಿದ್ದ. ಆತನನ್ನು ನೋಡಿದ ವಿದ್ಯಾರ್ಥಿನಿಯ ಕತ್ತು ಹಿಸಕಲು ಪ್ರಯತ್ನ ನಡೆಸಿದ್ದ ಎಂದು ಕೂಡ ಆರೋಪಿಸಲಾಗಿತ್ತು .