ಸ್ಟಾರ್ ನಟಿ ತುನಿಷಾ ಶರ್ಮಾ ಸಾವು ಲವ್ ಜಿಹಾದ್ ; ಸಹ ನಟ ಶೀಜಾನ್ ಮೊಹಮ್ಮದ್ ಖಾನ್ ಅರೆಸ್ಟ್!- ಕಹಳೆ ನ್ಯೂಸ್
ಮುಂಬೈ, ಡಿ. 26 : ಮಹಾರಾಷ್ಟ್ರದ ನಟಿ ತುನಿಷಾ ಆತ್ಮಹತ್ಯೆ ಹೈ ಪ್ರೊಫೈಲ್ ಪ್ರಕರಣಕ್ಕೆ ಭಾರತೀಯ ಜನತಾ ಪಕ್ಷದ ಶಾಸಕ ರಾಮ್ ಕದಮ್ ಭಾನುವಾರ ಲವ್ ಜಿಹಾದ್ ಎಂಬ ತಿರುವು ನೀಡಿದ್ದಾರೆ.
ಹಿಂದಿ ಕಿರುತೆರೆ ಮತ್ತು ಸಿನಿಮಾ ನಟಿ ತುನಿಷಾ ಶರ್ಮಾ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯಿ ಎಂಬಲ್ಲಿ ಟಿವಿ ಕಾರ್ಯಕ್ರಮವೊಂದರ ಸೆಟ್‌ನಲ್ಲಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಸಹ ನಟ ಶೀಜಾನ್ ಮೊಹಮ್ಮದ್ ಖಾನ್ ಅವರನ್ನು ಐಪಿಸಿ ಸೆಕ್ಷನ್ 306 ರ ಅಡಿಯಲ್ಲಿ ಬಂಧಿಸಲಾಗಿದೆ.
ಹಿಂದಿ ಧಾರಾವಾಹಿ ‘ಅಲಿ ಬಾಬಾ: ದಸ್ತಾನ್-ಎ-ಕಾಬೂಲ್’ ಟಿವಿ ಶೋನಲ್ಲಿ ಆಕೆಯ ಸಹ ನಟ ಶೀಜಾನ್ ಮೊಹಮ್ಮದ್ ಖಾನ್ ವಿರುದ್ಧ ತುನಿಷಾ ಅವರ ತಾಯಿಯ ದೂರಿನ ಆಧಾರದ ಮೇಲೆ ಆತ್ಮಹತ್ಯೆಗೆ ಪ್ರಚೋದನೆಯ ಪ್ರಕರಣವನ್ನು ದಾಖಲಿಸಲಾಗಿದೆ. ಇಬ್ಬರ ನಡುವಿನ ಸಂಬಂಧ 15 ದಿನಗಳ ಹಿಂದೆ ಮುರಿದುಬಿದ್ದಿದ್ದು, ಇದು ತುನಿಷಾ ಅವರನ್ನು ಇಂತಹ ನಿರ್ಧಾರಕ್ಕಕೆ ಕಾರಣವಾಗಿರಬಹುದು ಎನ್ನಲಾಗಿದೆ.
“ಈ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ಮಾಡಲಾಗುವುದು. ಎಲ್ಲಾ ಕೋನಗಳನ್ನು ಪರಿಶೀಲಿಸಲಾಗುವುದು ಎಂದು ಶಾಸಕ ರಾಮ್ ಕದಮ್ ಹೇಳಿದ್ದು, ತಪ್ಪಿತಸ್ಥರನ್ನು ಬಿಡಲಾಗುವುದಿಲ್ಲ ಮತ್ತು ತುನಿಷಾ ಶರ್ಮಾ ಅವರ ಕುಟುಂಬಕ್ಕೆ ನ್ಯಾಯ ಸಿಗುತ್ತದೆ’ ಎಂದು ಹೇಳಿದ್ದಾರೆ.
“ಆತ್ಮಹತ್ಯೆಗೆ ಕಾರಣವೇನು? ಇದರಲ್ಲಿ ಲವ್ ಜಿಹಾದ್ ಅಂಶವಿದೆಯೇ..? ಅಥವಾ ಇನ್ನಾವುದೇ ವಿಚಾರವಿದೆಯೇ..? ಎಂಬ ಬಗ್ಗೆ ತನಿಖೆಯಿಂದ ಸತ್ಯಾಂಶ ಹೊರಬರುತ್ತದೆ. ಆದರೆ ತುನಿಷಾ ಶರ್ಮಾ ಕುಟುಂಬಕ್ಕೆ 100 ರಷ್ಟು ನ್ಯಾಯ ಸಿಗುತ್ತದೆ. ಇದು ಲವ್ ಜಿಹಾದ್ ಪ್ರಕರಣವಾಗಿದ್ದರೇ, ನಂತರ ಪೊಲೀಸರು ಇದರ ಹಿಂದೆ ಇರುವ ಸಂಘಟನೆಗಳು ಮತ್ತು ಸಂಚುಕೋರರು ಯಾರು ಎಂಬ ಬಗ್ಗೆಯೂ ತನಿಖೆ ನಡೆಸುತ್ತಾರೆ” ಎಂದು ರಾಮ್ ಕದಮ್ ತಿಳಿಸಿದ್ದಾರೆ.
ಮುಂಬೈನ ವಸಾಯಿ ನ್ಯಾಯಾಲಯವು ಇಂದು ಮಧ್ಯಾಹ್ನ ಶೀಜಾನ್ ಮೊಹಮ್ಮದ್ ಖಾನ್ ಅವರನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಘಟನೆಯ ಕುರಿತು ವಿಚಾರಣೆಗಾಗಿ ಭಾನುವಾರ ಮತ್ತೊಬ್ಬ ಸಹ ನಟ ಪಾರ್ಥ್ ಜುಟ್ಶಿ ಅವರನ್ನು ಪೊಲೀಸರು ಕರೆದಿದ್ದರು.
ನ್ಯಾಯಾಲಯದಲ್ಲಿ, ಮಾಧ್ಯಮಗಳೊಂದಿಗೆ ಮಾತನಾಡಿದ ಶೀಜಾನ್ ಮೊಹಮ್ಮದ್ ಖಾನ್ ಅವರ ವಕೀಲ ಶರದ್ ರೈ, “ಏನೇ ನಡೆದರೂ ಪೊಲೀಸರು ಮತ್ತು ನ್ಯಾಯಾಲಯವು ಕೆಲಸ ಮಾಡುತ್ತಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅವರ ವಿರುದ್ಧದ ಆರೋಪಗಳು ಆಧಾರರಹಿತವಾಗಿವೆ” ಎಂದು ಹೇಳಿದ್ದಾರೆ.
20 ವರ್ಷ ವಯಸ್ಸಿನ ನಟಿ ತುನಿಷಾ ಶರ್ಮಾ ಶನಿವಾರ ಶೂಟಿಂಗ್ ವೇಳೆಯಲ್ಲಿ ಚಹಾ ವಿರಾಮದ ನಂತರ ವಾಶ್‌ರೂಮ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಎಷ್ಟೋ ಹೊತ್ತಾದರೂ ಶೌಚಾಲಯದಿಂದ ಆಕೆ ಹೊರಗೆ ಬರದ ಹಿನ್ನೆಲೆಯಲ್ಲಿ ಬಾಗಿಲು ಒಡೆದು ಒಳ ಹೋದಾಗ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ವಾಲೀವ್ ಪೊಲೀಸರು ತಿಳಿಸಿದ್ದಾರೆ. ಶೂಟಿಂಗ್ ಸಿಬ್ಬಂದಿ ಆಕೆಯನ್ನು ಮಧ್ಯರಾತ್ರಿ 1:30 ರ ಸುಮಾರಿಗೆ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಆಕೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.
ತುನಿಷಾ ಶರ್ಮಾ ಅವರ ಸಹೋದ್ಯೋಗಿಗಳು ಅವರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಆದರೆ ಪೊಲೀಸರು ಸ್ಥಳದಲ್ಲೇ ತನಿಖೆ ನಡೆಸಿದ್ದು, ಯಾವುದೇ ಮರಣ ಪ್ರಮಾಣಪತ್ರ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.