Sunday, November 24, 2024
ದಕ್ಷಿಣ ಕನ್ನಡಮೂಡಬಿದಿರೆರಾಜ್ಯಸುದ್ದಿ

ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಮುಂದಾಳತ್ವದ ವಿಶ್ವ ಜಾಂಬೂರಿ ಸಾಂಸ್ಕೃತಿಕ ಕ್ರಾಂತಿ ಸೃಷ್ಟಿಸಿದೆ ; ಮೂಡುಬಿದಿರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ – ಕಹಳೆ ನ್ಯೂಸ್

ಮೂಡುಬಿದಿರೆ: ಮೂಡುಬಿದಿರೆಯಲ್ಲಿ ನಡೆಯುತ್ತಿರುವ ವಿಶ್ವ ಜಾಂಬೂರಿ ಸಾಂಸ್ಕೃತಿಕ ಕ್ರಾಂತಿ ಸೃಷ್ಟಿಸಿದೆ. ಹಾದಿ ತಪ್ಪುತ್ತಿರುವ ಯುವಜನತೆಯ ಮನ ಪರಿವರ್ತನೆಗೆ ಸಾಂಸ್ಕೃತಿಕ ಚಳವಳಿಯೇ ಮುಖ್ಯ ಆಧಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ವತಿಯಿಂದ ನಗರದ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಮುಂದಾಳತ್ವದಲ್ಲಿ ಐದು ದಿನ  ಗಳಿಂದ ನಡೆಯುತ್ತಿರುವ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಅಂತಾ ರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಕಾರ್ಯ ಕ್ರಮದಲ್ಲಿ ರವಿವಾರ ಸಂಜೆ ಅವರು ಮಾತನಾಡಿದರು.

ಪ್ರಸಕ್ತ ಧರ್ಮದ ಹೆಸರಿನಲ್ಲಿ ವಿಶ್ವದಲ್ಲಿ ಹಿಂಸಾಚಾರ ನಡೆಯುತ್ತಿದ್ದು, ಇದನ್ನು ತಡೆಯುವ ಶಕ್ತಿ ಭಾರತಕ್ಕಿದೆ. ಹಿಂಸೆಯ ಪರಿವರ್ತನೆಗೆ ಸಾಂಸ್ಕೃತಿಕ ಚಳವಳಿ ರೂಪು ಗೊಳ್ಳಬೇಕು ಎಂದು ಅವರು ಪ್ರತಿಪಾದಿಸಿದರು.
ಮಾನವೀಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆ ಬೆಳೆಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ಪ್ರಮುಖ ಪಾತ್ರ ವಹಿಸುತ್ತದೆ. ನಾನು ಕೂಡ ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಯಾಗಿದ್ದೆ. ಶಿಸ್ತು, ಚರಿತ್ರೆ ನಿರ್ಮಾಣ, ಹಿರಿಯರನ್ನು ಆಧರಿಸುವುದು ಹಾಗೂ ಕಿರಿಯರನ್ನು ಪ್ರೀತಿ ಸುವುದನ್ನು ಸಂಸ್ಥೆ ಕಲಿಸುತ್ತದೆ ಎಂದರು.

ಯಾವುದೇ ಧರ್ಮ ಹಿಂಸೆಯನ್ನು ಪ್ರಚೋದಿಸುವುದಿಲ್ಲ. ವೈವಿಧ್ಯವೇ ನಮ್ಮ ಸಂಸ್ಕೃತಿ. ಏಕ್‌ ಭಾರತ್‌ ಶ್ರೇಷ್ಠ ಭಾರತ್‌, ಆತ್ಮ ನಿರ್ಭರ ಭಾರತ್‌ ಮುಂತಾದ ಘೋಷಣೆ ಮೂಲಕ ಪ್ರಧಾನಿ ಮೋದಿ ರಾಷ್ಟ್ರ ನಿರ್ಮಾಣದ ಕಲ್ಪನೆ ನೀಡಿದ್ದಾರೆ. ಇದನ್ನು ಜಾಂಬೂರಿ ಇಮ್ಮಡಿಗೊಳಿಸಿದೆ ಎಂದರು.

ದ.ಕ. ಜಿಲ್ಲಾ ಸ್ಕೌಟ್ಸ್‌ ಗೈಡ್ಸ್‌ ಮುಖ್ಯ ಆಯುಕ್ತ ಡಾ| ಎಂ. ಮೋಹನ ಆಳ್ವ ಪ್ರಸ್ತಾವನೆಗೈದರು. ರಾಜ್ಯಸಭಾ ಸದಸ್ಯ ಹಾಗೂ ಸ್ಕೌಟ್ಸ್‌ ಗೈಡ್ಸ್‌ ರಾಷ್ಟ್ರ ಅಧ್ಯಕ್ಷ ಡಾ| ಅನಿಲ್‌ ಕುಮಾರ್‌ ಜೈನ್‌ ಶುಭ ಕೋರಿದರು.

ಸಚಿವರಾದ ವಿ. ಸುನಿಲ್‌ ಕುಮಾರ್‌,ಬಿ.ಸಿ. ನಾಗೇಶ್‌, ಸಿ.ಟಿ. ರವಿ, ನಾರಾಯಣ ಗೌಡ, ಶಾಸಕರಾದ ಉಮಾನಾಥ ಕೋಟ್ಯಾನ್‌, ಲಾಲಾಜಿ ಆರ್‌. ಮೆಂಡನ್‌, ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್‌ ಸಿಂಧ್ಯಾ, ಡಿಜಿಪಿ ಚಂದ್ರ ಗುಪ್ತ, ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌, ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ್‌ ಸೋನಾವಣೆ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕುಮಾರ್‌, ಮೂಡಬಿದಿರೆ ಪುರಸಭಾ ಅಧ್ಯಕ್ಷ ಪ್ರಸಾದ್‌, ಉದ್ಯಮಿ ಕೆ. ಶ್ರೀಪತಿ ಭಟ್‌ ಉಪಸ್ಥಿತರಿದ್ದರು.

ಅತಿಥಿಗಳು ವೇದಿಕೆಯತ್ತ ಆಗಮಿಸುತಿದ್ದಂತೆ ಸ್ಕೌಟ್ಸ್‌ ಗೈಡ್ಸ್‌ನ ಗೌರವ ಸಲ್ಲಿಸಲಾಯಿತು. “ವಂದೇ ಮಾತರಂ’ ಹಾಡಿನ ಬಳಿಕ “ಕೋಟಿ ಕಂಠ’ ಹಾಡಿಗೆ ಸೇರಿದ್ದ ಸಹಸ್ರಾರು ವಿದ್ಯಾರ್ಥಿಗಳು ತಮ್ಮ ಕೈಯಲ್ಲಿದ್ದ ರಾಷ್ಟ್ರ ಪತಾಕೆಗಳನ್ನು ಮೇಲೆತ್ತಿ ರಾರಾಜಿಸಿ ಗೌರವ ಸಲ್ಲಿಸಿದರು.

ಸ್ಕೌಟ್ಸ್‌ ಗೈಡ್ಸ್‌ ರಾಷ್ಟ್ರೀಯ ಅಧ್ಯಕ್ಷ,ರಾಜ್ಯಸಭಾ ಸದಸ್ಯ ಅನಿಲ್‌ ಜೈನ್‌ ಮಾತನಾಡಿ, ಕರ್ನಾಟಕದಲ್ಲಿ ಅಂತಾ ರಾಷ್ಟ್ರೀಯ ಜಾಂಬೂರಿ ಆಯೋಜನೆಗೆ ಅವಕಾಶ ಮಾಡಿಕೊಟ್ಟ ಕರ್ನಾಟಕ ಸರಕಾರಕ್ಕೆ ಮತ್ತು ಆಳ್ವಾಸ್‌ ಶಿಕ್ಷಣ ಸಂಸ್ಥೆಗೆ ಕೃತಜ್ಞತೆಗಳು. ಜಾಂಬೂರಿ ಮೂಲಕ ಪ್ರಧಾನಿಯವರ ಏಕ್‌ ಭಾರತ್‌-ಶ್ರೇಷ್ಠ ಭಾರತ್‌ ಪರಿಕಲ್ಪನೆ ಅನಾವರಣಗೊಂಡಿದೆ. ಸಾಂಸ್ಕೃತಿಕ, ಪರಂಪರೆ, ಸಾಂಪ್ರದಾಯಿಕ ವೈಭವ ಈ ಮೂಲಕ ಮೇಳೈಸಿದ್ದು, ಯುವ ಸಾಂಸ್ಕೃತಿಕ ಒಗ್ಗಟ್ಟು ಎದ್ದು ಕಾಣುತ್ತಿದೆ ಎಂದು ತಿಳಿಸಿದರು.

ಆಳ್ವರು ಸಾಂಸ್ಕೃತಿಕ ರಾಯಭಾರಿ: ಮುಖ್ಯಮಂತ್ರಿ
“ಬಹುಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಕಂಡು ಖುಷಿಯಾಗಿದೆ. ಆಳ್ವಾಸ್‌ ಶಿಕ್ಷಣ ಸಂಸ್ಥೆ ಎನ್ನುವುದು ಕಲಾಮಾತೆ ಸರಸ್ವತಿಯ ವಾಹನ ಪರಮಹಂಸವಿದ್ದಂತೆ. ಪರಮಹಂಸ ಅತೀ ಬಲಾಡ್ಯ, ವೇಗ ಹಾಗೂ ಅತೀ ಎತ್ತರಕ್ಕೆ ಹಾರಬಲ್ಲ ಹಕ್ಕಿ. ಇಂತಹ ಪರಮಹಂಸಕ್ಕೆ ಹೋಲಿಕೆ ಮಾಡಬಹುದಾದ ಆಳ್ವಾಸ್‌ ಪರಿಶುದ್ಧತೆಯ ಸಂಸ್ಥೆ ಎಂದು ಶ್ಲಾಘಿಸಿದರು. ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಅದ್ಭುತ ಕಾರ್ಯಕ್ರಮ. ಸಾಂಸ್ಕೃತಿಕ ಚಳವಳಿ ಹುಟ್ಟುಹಾಕುವ ನಿಟ್ಟಿನಲ್ಲಿ ಮೋಹನ್‌ ಆಳ್ವರು ಬಹುದೊಡ್ಡ ಪಾತ್ರ ನಿರ್ವಹಿಸಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಪಿಲಿಕುಳದಲ್ಲಿ ಯುವಶಕ್ತಿ ಕೇಂದ್ರ: ಡಾ| ಆಳ್ವ
ಡಾ| ಎಂ. ಮೋಹನ್‌ ಆಳ್ವ ಮಾತನಾಡಿ, “ವಿದ್ಯಾರ್ಥಿಗಳಲ್ಲಿ ಒಳ್ಳೆಯ ಮನಸ್ಸು ಕಟ್ಟುವ ನೆಲೆಯಿಂದ ಜಾಂಬೂರಿ ಆಯೋಜಿಸಲಾಗಿದೆ. ಸಹಬಾಳ್ವೆ, ದೇಶಪ್ರೇಮ, ಸೇವಾ ಮನೋಭಾವ ಮೂಡಿಸಲು ಸ್ಕೌಟ್ಸ್‌ ಮತ್ತು ಗೈಡ್ಸ್‌ ನಿಂದ ಸಾಧ್ಯ. ದೇಶದಲ್ಲಿ 48 ಕೋಟಿ ಹಾಗೂ ರಾಜ್ಯದಲ್ಲಿ 1 ಕೋಟಿ ಮಂದಿ 1ನೇ ತರಗತಿಯಿಂದ ಸ್ನಾತಕೋತ್ತರ ಪದವಿ ತನಕದ ವಿದ್ಯಾರ್ಥಿಗಳಿದ್ದಾರೆ. ರಾಜ್ಯದಲ್ಲಿ 6.5 ಲಕ್ಷ ಸ್ಕೌಟ್ಸ್‌ ಮತ್ತು ಗೈಡ್ಸ್‌ಗಳಿದ್ದಾರೆ. ಇವರೆಲ್ಲರನ್ನು ಸೇರಿಸಿ ವಿಶ್ವಜಾಂಬೂರಿ ಆಯೋಜಿಸುತ್ತಿರುವುದು ನಮ್ಮ ಭಾಗ್ಯ’ ಎಂದರು.

“ಊಟೋಪಚಾರ, ಕಿಟ್‌ ಸಹಿತ ಒಟ್ಟು ಕಾರ್ಯಕ್ರಮಕ್ಕೆ 40 ಕೋ.ರೂ. ಖರ್ಚಾಗಲಿದೆ. ಹೀಗಾಗಿ ಸರಕಾರ ನೆರವು ನೀಡುವ ಭರವಸೆ ಇದೆ. ಜಾಂಬೂರಿಯ ಸವಿನೆನಪಿನಲ್ಲಿ ಪಿಲಿಕುಳದಲ್ಲಿ ಯುವಶಕ್ತಿ ಕೇಂದ್ರ ಮಾಡಲಿದ್ದು, ಇದಕ್ಕೂ ಸರಕಾರದ ನೆರವಿನ ನಿರೀಕ್ಷೆಯಿದೆ’ ಎಂದರು.

ಮುಖ್ಯಮಂತ್ರಿಗೆ ಅಭಿನಂದನೆ
ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶಾಲು ಹೊದಿಸಿ, ಹೂಹಾರ ಹಾಕಿ, ಬೆಳ್ಳಿಯ ಗಣಪತಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬಳಿಕ ವಿದ್ಯಾರ್ಥಿಗಳು ಪನ್ನೀರು ಸಿಂಚನಗೈದು, ಆರತಿ ಬೆಳಗಿ ಶುಭ ಹಾರೈಸಿದರು.