ಮಂಡ್ಯದಲ್ಲಿ ಮೊಳಗಲಿದೆ ಚುನಾವಣಾ ರಣಕಹಳೆ: ಬರ್ತಿದ್ದಾರೆ ಅಮಿತ್ ಶಾ! ; ಡಿ.30ರಂದು ಸಕ್ಕರೆನಾಡು ಮಂಡ್ಯ ಜಿಲ್ಲೆಗೆ ಬಿಜೆಪಿ ರಾಜಕೀಯ ಚಾಣಾಕ್ಷ – ಕಹಳೆ ನ್ಯೂಸ್
ಬಿಜೆಪಿ ರಾಜಕೀಯ ಚಾಣಾಕ್ಷ ಅಮಿತ್ ಶಾ ಡಿ.30ರಂದು ಸಕ್ಕರೆನಾಡು ಮಂಡ್ಯ ಜಿಲ್ಲೆಗೆ ಆಗಮಿಸುತ್ತಿದ್ದಾರೆ. 2023ರ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಿಸಲು ಸಂಕಲ್ಪ ಮಾಡಿರುವ ಬಿಜೆಪಿ ನಾಯಕರು ಮಂಡ್ಯದಲ್ಲಿ ಚುನಾವಣಾ ರಣಕಹಳೆ ಮೊಳಗಿಸಲಿದ್ದಾರೆ.
ಸೂಪರ್ ಸಿಕ್ಸ್ ಸ್ಥಾನಗಳಲ್ಲಿ ಗೆಲ್ಲುವ ಗುರಿಯೊಂದಿಗೆ ಮುಖಂಡರು- ಕಾರ್ಯ ಕರ್ತರಲ್ಲಿ ರಣೋತ್ಸಾಹ ತುಂಬಲು ಸಜ್ಜಾಗಿ ದ್ದಾರೆ. 2019ರ ಕೆ.ಆರ್.ಪೇಟೆ ಉಪ ಚುನಾವಣೆಯ ಗೆಲುವಿನೊಂದಿಗೆ ಹಳೇ ಮೈಸೂರು ಭಾಗದಲ್ಲೂ ಕಮಲ ಅರಳಿಸಬಹುದೆಂಬ ಖಚಿತ ನಿರ್ಧಾರಕ್ಕೆ ಬಂದ ಕಮಲ ಪಡೆ ನಾಯಕರು.
ಆ ಸಮಯದಿಂದಲೂ ಹಳೇ ಮೈಸೂರು ಭಾಗದ ಮೇಲೆ ಕಣ್ಣಿಟ್ಟು, ಪಕ್ಷಕ್ಕೆ ಶಕ್ತಿ ತುಂಬುವುದಕ್ಕೆ ಇನ್ನಿಲ್ಲದ ಕಸರತ್ತು ನಡೆಸಿತು. ಅದುವರೆಗೂ ಖಾತೆಯನ್ನೇ ತೆರೆಯದೆ ಸೋಲಿನ ಸುಳಿಯಲ್ಲೇ ಸಿಲುಕಿದ್ದ ಬಿಜೆಪಿಗೆ ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಕೆ.ಸಿ.ನಾರಾಯಣಗೌಡರ ಗೆಲುವು ಜಿಲ್ಲೆಯಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತು.
ಅಲ್ಲಿಯವರೆಗೂ ಹಳೇ ಮೈಸೂರು ಭಾಗವನ್ನು ನಿರ್ಲಕ್ಷಿಸುತ್ತಲೇ ಬಂದಿದ್ದ ಬಿಜೆಪಿ ನಾಯಕರು ಈ ಭಾಗದ ಮೇಲೆ ಕಣ್ಣರಳಿಸಿ ನೋಡಲಾರಂಭಿಸಿದರು. ಪ್ರತಿ ಕ್ಷೇತ್ರದಲ್ಲೂ ಹೊಸ ಮುಖಗಳಿಗೆ ಆದ್ಯತೆ ನೀಡುತ್ತಾ ಅವರಿಗೆ ಶಕ್ತಿ ತುಂಬುವ ಪ್ರಯತ್ನ ನಡೆಸಿದರು.
ಅದರಂತೆ ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಅಶೋಕ್ ಜಯರಾಂ, ಡಾ.ಸಿದ್ದರಾಮಯ್ಯ, ಹೆಚ್.ಆರ್.ಅರವಿಂದ್, ಪಾಂಡವಪುರದಲ್ಲಿ ಡಾ.ಇಂದ್ರೇಶ್, ಶ್ರೀರಂಗಪಟ್ಟಣದಿಂದ ಎಸ್.ಸಚ್ಚಿದಾನಂದ, ನಾಗಮಂಗಲದಿಂದ ಫೈಟರ್ ರವಿ, ಮದ್ದೂರಿನಿಂದ ಎಸ್.ಪಿ.ಸ್ವಾಮಿ, ಮಳವಳ್ಳಿಯಿಂದ ಬಿ.ಸೋಮಶೇಖರ್, ಮುನಿ
ರಾಜು ಹೀಗೆ ಬಿಜೆಪಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸುವಷ್ಟರ ಮಟ್ಟಿಗೆ ಪಕ್ಷಕ್ಕೆ ಶಕ್ತಿ ತುಂಬುವ ಪ್ರಯತ್ನ ನಡೆದಿದೆ.