25ನೇ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ; ಸರ್ವಾಧ್ಯಕ್ಷರಾಗಿ ಲಕ್ಷಾಂತರ ಗ್ರಾಮೀಣ ಮಹಿಳೆಯರ ಸ್ಫೂರ್ತಿಯ ಚಿಲುಮೆ ಹೇಮಾವತಿ ವೀರೇಂದ್ರ ಹೆಗ್ಗಡೆ – ಕಹಳೆ ನ್ಯೂಸ್
ಮಂಗಳೂರು, ಡಿ 27 : ಉಜಿರೆಯಲ್ಲಿ ನಡೆಯುವ 25ನೇ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ಹೇಮಾವತಿ ವಿ. ಹೆಗ್ಗಡೆ ಅವರನ್ನು ಆಯ್ಕೆ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಉಜಿರೆಯ ರಾಮಕೃಷ್ಣ ಸಭಾ ಮಂಟಪದಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಫೆಬ್ರವರಿ 3ರಿಂದ 5ರವರೆಗೆ ನಡೆಯಲಿರುವ 25ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ಹೇಮಾವತಿ ವಿ. ಹೆಗ್ಗಡೆಯವರನ್ನು ಆಯ್ಕೆ ಮಾಡಲಾಗಿದೆ ಎಂದು ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ ತಿಳಿಸಿದ್ದಾರೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪತ್ನಿ ಹೇಮಾವತಿ ವಿ. ಹೆಗ್ಗಡೆಯವರು ಕರ್ನಾಟಕ ರಾಜ್ಯದ ಲಕ್ಷಾಂತರ ಗ್ರಾಮೀಣ ಮಹಿಳೆಯರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಅವರ ದೂರದೃಷ್ಟಿ ಆಲೋಚನೆಗಳು ಮತ್ತು ಚಿಂತನೆಗಳು ಕರ್ನಾಟಕ ರಾಜ್ಯಾದ್ಯಂತ ವಿವಿಧ ಮಹಿಳಾ ಸಬಲೀಕರಣ ಕಾರ್ಯಕ್ರಮಗಳನ್ನು ರೂಪಿಸಿ ರಾಜ್ಯದ ಗ್ರಾಮೀಣ ಮಹಿಳೆಯರ ಜೀವನದಲ್ಲಿ ಸಮಗ್ರವಾದ ಸಬಲೀಕರಣವನ್ನುಂಟು ಮಾಡಿದೆ. ಧರ್ಮಸ್ಥಳದಲ್ಲಿ ಸಮಾಜದ ಮುಖ್ಯವಾಹಿನಿಯಿಂದ ಹೊರಗುಳಿದಿದ್ದ ಸೀಯರನ್ನು ಗುರುತಿಸಿ, ಕನ್ಯಾಕುಮಾರಿ ಯುವತಿ ಮಂಡಳಿಯನ್ನು 1973ರಲ್ಲಿ ಪ್ರಾರಂಭಿಸಿದರು. ಸ್ತ್ರೀಶಕ್ತಿ ಸಂಘದ ಪರಿಕಲ್ಪನೆಯಲ್ಲಿ ಎಲ್ಲ ಮಹಿಳೆಯರು ಆರ್ಥಿಕ ಸ್ವಾವಲಂಬನೆಯ ಬದುಕನ್ನು ನಡೆಸಲು ಕಾರಣೀಭೂತರಾದರು.ಜ್ಞಾನವಿಕಾಸ ಕಾರ್ಯಕ್ರಮಗಳ ಮೂಲಕ ಲಕ್ಷಾಂತರ ಅನಕ್ಷರಸ್ಥ ಮಹಿಳೆಯರಿಗೆ ಜೀವನ ಶಿಕ್ಷಣವನ್ನು ಧಾರೆ ಎರೆದಿದ್ದಾರೆ.
ಗ್ರಾಮೀಣ ಮಹಿಳೆಯರಿಂದ ಸ್ವಸಹಾಯ ಸಂಘವನ್ನು ರಚಿಸಿ, ಅವರನ್ನು ಸಬಲೀಕರಿಸಿದರು. ವಾತ್ಸಲ್ಯ ಕಾರ್ಯಕ್ರಮದ ಮೂಲಕ ಕುಟುಂಬದವರಿಂದ ನಿರ್ಲಕ್ಷ್ಯಕ್ಕೊಳಗಾದವರಿಗೆ ಆಸರೆಯಾದರು. ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮೂಲಕ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣದತ್ತ ಚಿಂತನೆ ನಡೆಸಿದರು. ಹೀಗೆ ಹತ್ತು ಹಲವು ಸಾಮಾಜಿಕ ಕಾರ್ಯಗಳ ಮೂಲಕ ಸಮಾಜಕ್ಕೆ ವಿಶಿಷ್ಟ ಕೊಡುಗೆ ನೀಡುತ್ತಿದ್ದಾರೆ.ಸಾಹಿತ್ಯ ಕ್ಷೇತ್ರಕ್ಕೆ ಹಲವಾರು ಕೊಡುಗೆ ನೀಡಿದ್ದಾರೆ. ಕವನ ಸಂಕಲನಗಳನ್ನು ಹೊರ ತಂದಿದ್ದಾರೆ. ಜಾನಪದ ಕಲಾ ಸಾಹಿತ್ಯ ಸೇರಿದಂತೆ ಹಲವಾರು ಸಾಹಿತ್ಯ ಪ್ರಾಕಾರಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಮತ್ತು ಸಾಹಿತ್ಯಿಕ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಡಾ. ಎಂ.ಪಿ. ಶ್ರೀನಾಥ್ ವಿವರಿಸಿದ್ದಾರೆ.