ಇಂದು ನಸುಕಿನಲ್ಲಿ ವಿಧಿವಶರಾದ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರ ಅಂತ್ಯಸಂಸ್ಕಾರ ವಿಧಿವಿಧಾನದಂತೆ ನೆರವೇರಿತು.
ಸೆಕ್ಟರ್ 30ರಲ್ಲಿರುವ ರುದ್ರಭೂಮಿಯಲ್ಲಿ ನಡೆದ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ ಪ್ರಧಾನಿಯವರು ತಮ್ಮ ತಾಯಿಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಹೀರಾಬೆನ್ ಅವರ ಅಂತಿಮ ಯಾತ್ರೆಯಲ್ಲಿ ಯಾವುದೇ ಅಬ್ಬರವಿಲ್ಲದೇ ಸರಳವಾಗಿ ಕುಟುಂಬಸ್ಥರು ಹಾಗೂ ಆಪ್ತರು ಪಾಲ್ಗೊಂಡಿದ್ದರು. ಅಂತಿಮ ಯಾತ್ರೆಯಲ್ಲಿ ತಾಯಿಯ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಪ್ರಧಾನಿಯವರು, ರುದ್ರಭೂಮಿಯಲ್ಲಿ ಅಗ್ನಿಸ್ಪರ್ಶ ಮಾಡಿದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹೀರಾಬೆನ್ ಅವರನ್ನು ಬುಧವಾರವಷ್ಟೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 3.39ರ ಸುಮಾರಿಗೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಶತಾಯುಷಿ ಹೀರಾಬೆನ್ ಅವರು ಐವರು ಪುತ್ರರು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಸದ್ಯ ಹೀರಾಬೆನ್ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಗಣ್ಯರು ಸಂತಾಪಗಳನ್ನು ಸೂಚಿಸುತ್ತಿದ್ದಾರೆ. ಅಲ್ಲದೇ ಪ್ರಧಾನಿಯವರಿಗೆ ಧೈರ್ಯ ತುಂಬುತ್ತಿದ್ದಾರೆ.