ಡಿ.30 ಶುಕ್ರವಾರ ರಾತ್ರಿ ಆಗಸದಲ್ಲಿ ನಕ್ಷತ್ರಗಳ ಮೆರವಣಿಗೆ ಕಂಡಿರಾ..!? ಏನಿದು ಅಚ್ಚರಿ ಅನ್ನೋರಿಗೆ ಇಲ್ಲಿದೆ ಉತ್ತರ…! – ಕಹಳೆ ನ್ಯೂಸ್
ಇಂದು ರಾತ್ರಿಯಿಂದ ಒಂದೇ ಮಾತು. ಆಕಾಶದಲ್ಲಿ ನಕ್ಷತ್ರಗಳು ಸಾಲಾಗಿ ತೇಲುತ್ತಿವೆ, ನದಿಯಲ್ಲಿ ದೀಪಗಳನ್ನು ತೇಲಿ ಬಿಟ್ಟಂತೆ ಓಡುತ್ತಿವೆ. ಇರುವೆಗಳಂತೆ ಸಾಲಾಗಿ ಚಲಿಸುತ್ತಿವೆ. ನಕ್ಷತ್ರಗಳು ಸಾಲಾಗಿ ಮೆರವಣಿಗೆ ಹೊರಟಿವೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವ್ಯಾಖ್ಯಾನ ಮಾಡಿ ತಮಗನಿಸಿದ್ದನ್ನು ಹೇಳುತ್ತಿದ್ದಾರೆ. ಬಾಹ್ಯಾಕಾಶದಲ್ಲಿ ಏಕಾಏಕಿ ಹೀಗೆ ಬೆಳಕುಗಳ ಸರಮಾಲೆ ಹರಿದು ಹೋಗುತ್ತಿರೋದನ್ನು ಕಂಡು ಅನೇಕ ಮಂದಿ ಅಚ್ಚರಿಗೊಳಗಾಗಿದ್ದಂತೂ ಸತ್ಯ. ಆದರೆ ಇದರ ಸತ್ಯಾಸತ್ಯತೆ ಏನು ಅನ್ನೋದು ಸಾಕಷ್ಟು ಮಂದಿಗೆ ತಿಳಿದಿಲ್ಲ.
ಅಸಲಿಗೆ ಶುಕ್ರವಾರ ಸಂಜೆ ಸುಮಾರು 7.15ರಿಂದ 7.30ರ ಅವಧಿಯಲ್ಲಿ ಸುಮಾರು 50-100 ನಕ್ಷತ್ರಗಳು ಸಾಲು ಚಲಿಸುತ್ತಿರುವಂತೆ ನೋಡುಗರಿಗೆ ಭಾಸವಾಗಿದ್ದು ಹೌದು. ಆದರೆ ಈ ಕುತೂಹಲದ ಹಿಂದಿರುವ ಅಸಲಿ ಸತ್ಯ ಇದೀಗ ಬಯಲಾಗಿದ್ದು, ಇದು ಬಾಹ್ಯಾಕಾಶ ಉದ್ಯಮಿ ಎಲಾನ್ ಮಸ್ಕ್ ಅವರ ಮಾಲೀಕತ್ವದ ಬಾಹ್ಯಾಕಾಶ ಸಂಸ್ಥೆ, ಅಮೆರಿಕದ ಸ್ಪೇಸ್ ಎಕ್ಸ್ ಉಡಾವಣೆ ಮಾಡಿದ ಸ್ಟಾರ್ ಲಿಂಕ್ ಎಂಬ ಸುಮಾರು 12 ಸಾವಿರ ಕೃತಕ ಉಪಗ್ರಹಗಳನ್ನು (satellites) ಆಕಾಶಕ್ಕೆ ಹಾರಿ ಬಿಡುವ ಭಾರಿ ಯೋಜನೆ ಎಂದು ತಿಳಿದು ಬಂದಿದೆ. ಭವಿಷ್ಯದಲ್ಲಿ ಸುಮಾರು 42 ಸಾವಿರ ಕೃತಕ ಉಪಗ್ರಹಗಳನ್ನು ಹಾರಿಬಿಡುವ ಯೋಜನೆ ಇದೆ ಎಂದು ತಿಳಿದು ಬಂದಿದ್ದು, ಇದಕ್ಕೆ ಪೂರಕವಾಗಿ ಈಗಾಗಲೇ 60 ಉಪಗ್ರಹಗಳ ಒಂದು ಗುಚ್ಛವನ್ನು ಉಡಾವಣೆ ಮಾಡಲಾಗಿದ್ದು, ಇದು ಭೂಮಿಯ ಸುತ್ತ ಸುತ್ತಿ ಮನೆಗಳಿಗೆ ವಯರ್‌ಲೆಸ್ ಇಂಟರ್‌ನೆಟ್ ಸೌಲಭ್ಯವನ್ನು ನೀಡಲಿದೆ. ಹಾಗಾಗಿ ಶುಕ್ರವಾರ ಸಂಜೆಯ ವೇಳೆಗೆ ಕರ್ನಾಟಕದಲ್ಲಿ ಹಾದು ಹೋಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಮಾಹಿತಿ ನೀಡಿರುವ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಹವ್ಯಾಸಿ ಖಗೋಳ ವೀಕ್ಷಕರ ಕ್ಲಬ್‌ನ ಆತುಲ್ ಭಟ್, ಇದು ಕೃತಕ ಉಪಗ್ರಹಗಳಾಗಿದ್ದು, ಕತ್ತಲೆಯಲ್ಲಿ ಈ ಉಪಗ್ರಹಗಳ ಹೊರ ಮೈ ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತಾ ಸಮಾನಾಂತರವಾಗಿ ಸರಳರೇಖೆಯಲ್ಲಿ ಚಲಿಸುವಾಗ ನಕ್ಷತ್ರಗಳ ಮೆರೆವಣಿಗೆ ನಡೆಸಿದಂತೆ, ರಾತ್ರಿ ಹೊತ್ತು ಯುದ್ಧ ವಿಮಾನಗಳು ಸಾಗಿದಂತೆ ಭಾಸವಾಗುತ್ತದೆ. ಈ ವಿದ್ಯಮಾನ ಹೊಸದೇನಲ್ಲ. ಕಳೆದ ಕೆಲ ದಿನಗಳಿಂದ ವಿಶ್ವದ, ದೇಶದ ಕೆಲ ಭಾಗಗಳಲ್ಲಿ ಇದು ಸುದ್ದಿಯಾಗುತ್ತಲೇ ಇದೆ. ಆದರೆ ರಾಜ್ಯದ ಕರಾವಳಿಯಲ್ಲಿ ಮಾತ್ರ ಶುಕ್ರವಾರ ಸ್ಪಷ್ಟವಾಗಿ ಗೋಚರಿಸಿದೆ. ಉಡುಪಿ, ಮಣಿಪಾಲ, ಮಂಗಳೂರು, ಕಳಸದಿಂದಲೂ ತಮಗೆ ಕರೆಗಳು ಬಂದಿವೆ ಎಂದು ಹೇಳಿದ್ದಾರೆ.
ಎಲಾನ್ ಮಸ್ಕ್ ಮಾಲೀಕತ್ವದ ಬಾಹ್ಯಾಕಾಶ ಸಂಸ್ಥೆ, ಅಮೆರಿಕದ ಸ್ಪೇಸ್ ಎಕ್ಸ್ ಸ್ಟಾರ್ ಲಿಂಕ್ ಎಂಬ ಯೋಜನೆಯಡಿ ಉಡಾವಣೆ ಮಾಡಿದ ಸರಣಿ ಉಪಗ್ರಹಗಳ ಸರಮಾಲೆ ಇದಾಗಿದ್ದು, ಈಗಾಗಲೆ 1,800ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. ಅವುಗಳಲ್ಲಿ 1,732 ಉಪಗ್ರಹಗಳು ತಮ್ಮ ನಿಗದಿತ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುತ್ತಿವೆ. 2018ರ ಫೆ. 22ರಂದು ಆರಂಭವಾದ ಈ ಯೋಜನೆಯಲ್ಲಿ ವಿವಿಧ ಹಂತಗಳಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. ಅವುಗಳಲ್ಲಿ ಒಂದು ಗುಂಪಿನ ಉಪಗ್ರಹಗಳು ಆಗಸದಲ್ಲಿ ಕಂಡುಬಂದಿದೆ. ಹೀಗೆ ಕೃತಕ ಉಪಗ್ರಹಗಳು ಆಕಾಶದಲ್ಲಿ ಚಲಿಸಿದಾಗ ಅಚ್ಚರಿಗೊಳಗಾದ ಜನರು ಕ್ಯಾಮೆರಾಗಳಲ್ಲಿ, ಮೊಬೈಲ್‌ಗಳಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಹೀಗಾಗಿ ಇದು ಸಾಕಷ್ಟು ಸುದ್ದಿಯಾಗಿತ್ತು. ಇದೀಗ ಮತ್ತೆ ಇನ್ನೊಂದು ಹಂತದಲ್ಲಿ ಉಡಾವಣೆ ಮಾಡಲಾಗಿದೆ ಎಂದು ತಿಳಿಸಿದರು.
ಎಲಾನ್ ಮಸ್ಕ್ (Elon Musk) ಮಾಲೀಕತ್ವದ ಸ್ಪೇಸ್ ಎಕ್ಸ್ ಅಧೀನ ಸಂಸ್ಥೆ ಸ್ಟಾರ್‌ಲಿಂಕ್ (Starlink) ಭಾರತದಲ್ಲಿ 2022ರ ಡಿಸೆಂಬರ್‌ನಿಂದ ಉಪಗ್ರಹ ಆಧರಿತ ಬ್ರಾಡ್‌ಬ್ಯಾಂಡ್ ಸೇವೆ ಆರಂಭಿಸಲಿದ್ದು, ಈ ಹಿನ್ನೆಲೆಯಲ್ಲಿ 2 ಲಕ್ಷ ಸಕ್ರಿಯ ಟರ್ಮಿನಲ್‌ಗಳಿಗೆ ಭಾರತ ಸರ್ಕಾರದಿಂದ ಅನುಮತಿ ಕೋರಿದೆ. ಸ್ಪೇಸ್ ಎಕ್ಸ್ ಮಾಲೀಕತ್ವದ ಅಧೀನ ಸಂಸ್ಥೆ ಸ್ಟಾರ್‌ಲಿಂಕ್ ಸ್ಯಾಟಲೈಟ್ ಕಮ್ಯುನಿಕೇಷನ್ ಪ್ರೈ.ಲಿ (ಎಸ್‌ಎಸ್‌ಸಿಪಿಎಲ್) ಭಾರತದಲ್ಲಿ ನ.1ರಿಂದ ತನ್ನ ಕಚೇರಿಯನ್ನು ಆರಂಭಿಸಿದೆ. ನಾವು ಇನ್ನುಮುಂದೆ ಪರವಾನಗಿ ಪಡೆಯಲು, ಬ್ಯಾಂಕ್ ಖಾತೆ ತೆರೆಯಲು ಅರ್ಜಿ ಸಲ್ಲಿಸಬಹುದು ಎಂದು ಕಂಪನಿಯ ಭಾರತದ ನಿರ್ದೇಶಕ ಸಂಜಯ್ ಭಾರ್ಗವ ಹೇಳಿದ್ದಾರೆ. ಅಲ್ಲದೆ, 2022 ಡಿಸೆಂಬರ್ ಅಂತ್ಯದ ಕೃತಕ ಉಪಗ್ರಹ ಉಡಾವಣೆ ಇದೆ ಎಂದೂ ತಿಳಿಸಿದ್ದರು..