ಮೀನು ಹಿಡಿಯಲು ಹೊಳೆಗೆ ತೆರಳಿದ ತಂದೆ-ಮಗನ ಮೇಲೆ ಒಂಟಿ ಸಲಗ ದಾಳಿ : ಗಂಭೀರ ಗಾಯಗೊಂಡು ಸಾವನ್ನಪ್ಪಿದ ತಂದೆ – ಕಹಳೆ ನ್ಯೂಸ್
ಉಪ್ಪಿನಂಗಡಿ: ತಂದೆ ಮತ್ತು ಮಗ ಮೀನು ಹಿಡಿಯಲೆಂದು ಹೊಳೆಗೆ ತೆರಳಿದ ಸಂದರ್ಭ ಒಂಟಿ ಸಲಗವೊಂದು ದಾಳಿ ಮಾಡಿದ್ದು, ತಂದೆ ಸಾವನ್ನಪ್ಪಿ, ಮಗ ಗಂಭೀರವಾಗಿ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಗುಂಡ್ಯ ಹೊಳೆಯಲ್ಲಿ ಶನಿವಾರ ಸಂಜೆ ಸಂಭವಿಸಿದೆ.
ಶಿರಾಡಿ ಗ್ರಾಮದ ಜನತಾ ಕಾಲನಿ ನಿವಾಸಿ ತಿಮ್ಮಪ್ಪ (45) ಎಂಬವರು ಆನೆ ದಾಳಿಗೆ ಒಳಗಾಗಿ ಮೃತಪಟ್ಟ ದುರ್ದೈವಿಯಾಗಿದ್ದು, ಅವರ ಪುತ್ರ ಶರಣ್ ಗಂಭೀರವಾಗಿ ನೆಲ್ಯಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಮಗ ಶರಣ್ ಮೀನು ಹಿಡಿಯಲು ಗುಂಡ್ಯ ಹೊಳೆ ಬದಿಗೆ ಹೋಗಿದ್ದ ವೇಳೆ, ಹೊಳೆಯ ಕಡೆಗೆ ಬಂದ ಒಂಟಿ ಸಲಗ ಶರಣ್ ಮೇಲೆ ದಾಳಿಗೆ ಮುಂದಾಯಿತು.
ಈ ವೇಳೆ ಮಗನ ರಕ್ಷಣೆಗೆ ಓಡಿ ಬಂದ ತಿಮ್ಮಪ್ಪ ಅವರನ್ನು ಆನೆ ಕೆಡವಿ ಕಾಲಿನಿಂದ ತುಳಿದು ಹಾಕಿತು. ಇದರಿಂದ ಗಂಭೀರವಾಗಿ ಗಾಯಗೊಂಡ ತಿಮ್ಮಪ್ಪ ಅವರನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಯಿತು.
ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಸಾವನ್ನಪ್ಪಿದರು ಎಂದು ವೈದ್ಯರು ತಿಳಿಸಿದ್ದಾರೆ. ನೆಲ್ಯಾಡಿ ಹೊರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.