ಕಂಬಳದ ಕರೆಯಲ್ಲೇ ಜಾರಿ ಬಿದ್ದರೂ ಕೋಣಗಳ ಜತೆಗೇ ಗುರಿ ಮುಟ್ಟಿ ಸ್ವರ್ಣ ಪದಕ ಬಾಚುವಲ್ಲಿ ಯಶಸ್ವಿಯಾದ ವಂದೀತ್ ಶೆಟ್ಟಿ –ಕಹಳೆ ನ್ಯೂಸ್
ಮಂಗಳೂರು: ಮೂಲ್ಕಿ ಸೀಮೆ ಅರಸು ಜೋಡುಕರೆ ಕಂಬಳದ ಹಗ್ಗ ಹಿರಿಯ ವಿಭಾಗದ ಫೈನಲ್ ಹಣಾಹಣಿಯಲ್ಲಿ ನಂದಳಿಕೆ ಕೋಣವನ್ನು ಓಡಿಸಿದ ಜಾಕಿ ಬಂಬ್ರಾಣಬೈಲು ವಂದಿತ್ ಶೆಟ್ಟಿ ಅರ್ಧ ಕರೆಯಲ್ಲೇ ಜಾರಿ ಬಿದ್ದರೂ, ಕೋಣಗಳ ಜತೆಗೇ ಗುರಿ ಮುಟ್ಟಿ ಸ್ವರ್ಣ ಪದಕ ಬಾಚುವಲ್ಲಿ ಯಶಸ್ವಿಯಾಗಿದ್ದಾರೆ.
ಭಾನುವಾರ ಸಂಜೆ ಸುಮಾರು 06.07 ಸಮಯ, ಎಲ್ಲರೂ ಕುತೂಹಲದಿಂದ ಕರೆಯ ಇಕ್ಕೆಲಗಳಲ್ಲಿ ಹಗ್ಗ ಹಿರಿಯ ವಿಭಾಗದ ಫೈನಲ್ ಪಂದ್ಯ ವೀಕ್ಷಣೆಗೆ ತುದಿಗಾಲಲ್ಲಿ ನಿಂತಿದ್ದರು. ಈ ವಿಭಾಗದಲ್ಲಿ ಬಲಿಷ್ಠ ಕೋಣಗಳಾದ ನಂದಳಿಕೆ ಶ್ರೀಕಾಂತ್ ಭಟ್‍ರ ‘ಬಿ’ ಮತ್ತು ಪದವು ಕಾನಡ್ಕ ಫ್ಲೇವಿ ಡಿಸೋಜರ ಕೋಣಗಳ ಮಧ್ಯೆ ಸ್ಪರ್ಧೆ. ಎಲ್ಲರ ನೋಟವು ಗಂತ್‍ನ ಕಡೆಯಲಿದ್ದರೆ ‘ಅಲೆ ಬುಡಿಯೆರ್’ ಎಂದು ಘೋಷಣೆಯಾಗುತ್ತಿದ್ದಂತೆ ಎರಡೂ ಜತೆ ಕೋಣಗಳು ಓಟಕಿತ್ತವು. ಮೂಡಾಯಿ ಕರೆಯಲ್ಲಿ ಪದವು ಕಾನಡ್ಕ ಫ್ಲೇವಿ ಡಿಸೋಜರ ಮುನ್ನೆ-ಗಂತು ಕೋಣಗಳು ಹಾಗೂ ಪಡ್ಡಾಯಿ ಕರೆಯಲ್ಲಿ ನಂದಳಿಕೆ ಶ್ರೀಕಾಂತ್ ಭಟ್‍ರ ಕುಟ್ಟಿ-ರಾಜಾ ಕೋಣಗಳು ಓಡುತ್ತಿತ್ತು. ಸುಮಾರು ಅರ್ಧ ಕರೆ ದಾಟುತ್ತಿದ್ದಂತೆ ನಂದಳಿಕೆ ಕೋಣಗಳನ್ನು ಓಡಿಸುತ್ತಿದ್ದ ವಂದಿತ್ ಶೆಟ್ಟಿ ಕಾಲು ಜಾರಿ ಕರೆಯಲ್ಲಿ ಬಿದ್ದರು.
ಕಾಲು ಜಾರಿ ಬಿದ್ದರೂ ವಂದಿತ್ ಶೆಟ್ಟಿ ಅವರು ಸುಮಾರು 80 ಮೀಟರ್ ದೂರವನ್ನು ಹಗ್ಗ ಹಿಡಿದೇ ಕೋಣದ ಜತೆ ಬಂದು (11.50ಸೆಕೆಂಡ್) ಗುರಿ ತಲುಪಿ, ಕೋಣದ ಮಾಲೀಕರಿಗೆ ಸ್ವರ್ಣ ಗೆದ್ದು ಕೊಡುವಲ್ಲಿ ಯಶಸ್ವಿಯಾದರು. ವಂದಿತ್ ಶೆಟ್ಟಿ ಗುರಿ ತಲುಪುತ್ತಿದ್ದಂತೆ ಸಹಾಯಕರು ಬಂದು ಮಂಜೊಟ್ಟಿಯಲ್ಲಿ ಎಬ್ಬಿಸಿ ಸಂತೈಸಿದರು. ಕರೆಯ ಅರ್ಧದಲ್ಲೇ ಜಾರಿ ಬಿದ್ದರೂ ಗುರಿ ತಲುಪಿದ ವಂದಿತ್ ಶೆಟ್ಟಿ ಅವರ ಬಗ್ಗೆ ಕಂಬಳಾಭಿಮಾನಿಗಳಿಂದ ಶ್ಲಾಘನೆ ವ್ಯಕ್ತವಾಯಿತು.
ವಂದಿತ್ ಶೆಟ್ಟಿ ಕೋಣದ ಜತೆ ಓಡುವ ಶೈಲಿಯಲ್ಲಿ ಗಮನಿಸಿದ ಶ್ರೀಕಾಂತ್ ಭಟ್ ತಾನೇ ಆಸಕ್ತಿ ವಹಿಸಿ ವಂದಿತ್ ಶೆಟ್ಟಿಗೆ ತರಬೇತಿ ಕೊಡಿಸಿದ್ದರು. ಕಳೆದ 2 ವರ್ಷದಿಂದ ಕೋಣ ಓಡಿಸುತ್ತಿರುವ ವಂದಿತ್ ಶೆಟ್ಟಿ ಈಗಾಗಲೇ ಹಲವು ಪದಕಗಳನ್ನು ಗೆಲ್ಲಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಕಂಬಳ ಕರೆಯಲ್ಲಿ ಕೋಣ ಓಡಿಸುವಾಗ ಬಿದ್ದರೂ ಹಗ್ಗ ಬಿಡದೆ ಗುರಿ ತಲುಪಿದ ಸಾಧನೆ ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ಘಟನೆ ನಡೆದಿತ್ತು. ಕೆಲವು ಸಂದರ್ಭದಲ್ಲಿ ಕರೆಯಲ್ಲಿ ಜಾಕಿ ಬಿದ್ದರೂ ಕೋಣಗಳು ಮಾತ್ರ ಗುರಿ ತಲುಪಿ ಜಯಗಳಿಸಿದ ನಿದರ್ಶನಗಳಿವೆ. ಕಳೆದ ವರ್ಷ ಪುತ್ತೂರಿನಲ್ಲಿ ನಡೆದ ಕೋಟಿ ಚೆನ್ನಯ ಕಂಬಳದಲ್ಲಿ ಕೊಳಕೆ ಎಕ್ಸ್ಪ್ರೆಸ್ ಖ್ಯಾತಿಯ ಕೊಳಕೆ ಇರ್ವತ್ತೂರು ಆನಂದ ಅವರು ಬೆಳ್ಳಿಪ್ಪಾಡಿ ಕೈಪದ ಚಾನ್ಸ್ ವಿಭಾಗದಲ್ಲಿ ಕೋಣಗಳನ್ನು ಓಡಿಸುವ ವೇಳೆ ಓಟದ ರಭಸಕ್ಕೆ ಅವರ ತಲೆಯಲ್ಲಿದ್ದ ಬೈರಾಸ್ ಮುಖಕ್ಕೆ ಬಿದ್ದಿತ್ತು.
ಕೋಣಗಳನ್ನು ಓಡಿಸುವ ರಭಸದಲ್ಲಿ ಮತ್ತು ಗುರಿ ಮುಟ್ಟುವ ಏಕಮಾತ್ರ ಗುರಿಯೊಂದಿಗೆ ಇದ್ದ ಓಟಗಾರ ಆನಂದ ಅವರು ಕಣ್ಮುಚ್ಚಿಕೊಂಡೇ ಮಂಜೊಟ್ಟಿ ತಲುಪಿದ್ದರು.