Friday, January 24, 2025
ಸುದ್ದಿ

ಜ.27ರಿಂದ ಮೇ 31ರವರೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ವಿಮಾನ ಹಾರಾಟದ ಸಮಯ ಮಾರ್ಪಾಡು –ಕಹಳೆ ನ್ಯೂಸ್

ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಎಂಐಎ) ರನ್‌ವೇಯ ನವೀಕರಣ ಕಾಮಗಾರಿ ನಡೆಯಲಿದ್ದು, ಜ.27ರಿಂದ ಮೇ 31ರವರೆಗೆ ವಿಮಾನ ಹಾರಾಟದ ವೇಳಾಪಟ್ಟಿ ಮಾರ್ಪಾಡು ಆಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಭಾನುವಾರ ಹಾಗೂ ರಾಷ್ಟ್ರೀಯ ರಜಾದಿನಗಳನ್ನು ಹೊರತುಪಡಿಸಿ, ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9.30ರಿಂದ ಸಂಜೆ 6 ಗಂಟೆವರೆಗೆ ರನ್‌ ವೇ ನವೀಕರಣ ಕಾಮಗಾರಿ ನಡೆಯಲಿದೆ.

ಹಾಗಾಗಿ ಈ ಅವಧಿಯಲ್ಲಿ ವಿಮಾನಗಳು ಬೆಳಿಗ್ಗೆ 9.30ಕ್ಕಿಂತ ಮುನ್ನ ಹಾಗೂ ಸಂಜೆ 6 ಗಂಟೆಯ ನಂತರ ವಿಮಾನಗಳು ಕಾರ್ಯಾಚರಿಸಲಿವೆ.

2,450 ಮೀ. ಉದ್ದದ ಹಾಗೂ 45 ಮಿ ಅಗಲದ ಕಾಂಕ್ರೀಟ್‌ ರನ್‌ವೇಯನ್ನು 2006ರ ಮೇ ತಿಂಗಳಲ್ಲಿ ಲೊಕಾರ್ಪಣೆಗೊಳಿಸಲಾಗಿತ್ತು. ಈ ಮೂಲಕ ಕಾಂಕ್ರೀಟ್‌ ರನ್‌ವೇಯನ್ನು ಹೊಂದಿರುವ ಹಾಗೂ ಎರಡೆರಡು ರನ್‌ ವೇಗಳನ್ನು ಹೊಂದಿರುವ ರಾಜ್ಯದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಎಂಐಎ ಪಾತ್ರವಾಗಿತ್ತು.

ಈ ರನ್‌ವೇಯ ದುರಸ್ತಿ ಹಾಗೂ ನಿರ್ವಹಣೆ ಕಾರ್ಯವನ್ನು ಕಾಲಕಾಲಕ್ಕೆ ನಡೆಸಲಾಗುತ್ತಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯವು ನಿಗದಿಪಡಿಸಿದ ಗುಣಮಟ್ಟಕ್ಕೆ ತಕ್ಕುದಾಗಿ ರನ್‌ವೇ ಡಾಂಬರೀಕರಣ ನಡೆಸಲು ಪ್ರಸ್ತುತ ನವೀಕರಣ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ.

‘ಅತಿ ಸೂಕ್ಷ್ಮ ಮತ್ತು ಸೂಕ್ಷ್ಮ ಮೇಲ್ಮೈ ಸುಧಾರಣೆ ಹಾಗೂ ಇನ್ನಿತರ ದುರಸ್ತಿ ಸಲುವಾಗಿ ರನ್ ವೇಯನ್ನು ನವೀಕರಿಸಲಾಗುತ್ತಿದೆ. ಇದಕ್ಕೆ ವರ್ಷಕ್ಕೂ ಮುಂಚೆ ಸಿದ್ಧತೆ ನಡೆದಿತ್ತು. ನವೀಕರಣದ ಸಂದರ್ಭದಲ್ಲಿ ರನ್‌ವೇಯ ನಡುಗೆರೆಯಲ್ಲಿ ದೀಪಗಳನ್ನು ಅಳವಡಿಸಲಾಗುತ್ತದೆ. ರಾತ್ರಿ ವೇಳೆ ಹಾಗೂ ರನ್‌ವೇ ಗೋಚರಿಸುವಿಕೆ ಪ್ರಮಾಣ ಕಡಿಮೆ ಇದ್ದಾಗಲೂ ವಿಮಾನ ಹಾರಾಟ ನಡೆಸಲು ಇದು ನೆರವಾಗಲಿದೆ. ರನ್‌ವೇ ಕೊನೆಗೊಳ್ಳುವ ಸುರಕ್ಷತಾ ಪ್ರದೇಶವೂ (ಆರ್‌ಇಎಸ್‌ಎ) ಸುಧಾರಣೆಗೊಳ್ಳಲಿದೆ.

ಕೊಯಿಕ್ಕೋಡ್‌ನಲ್ಲಿ ನಡೆದ ವಿಮಾನ ಅಪಘಾತದ ತನಿಖೆ ನಡೆಸಿದ್ದ ಸಮಿತಿಯು ವಿಮಾನ ನಿಲ್ದಾಣಗಳ ಸುರಕ್ಷತೆಯನ್ನು ಮೇಲ್ದರ್ಜೆಗೇರಿಸಲು ಕೆಲವೊಂದು ಶಿಫಾರಸುಗಳನ್ನು ಮಾಡಿತ್ತು. ಅದರ ಆಧಾರದಲ್ಲಿ ಎಂಐಎ ರನ್‌ವೇಯನ್ನು ನವೀಕರಿಸಲಾಗುತ್ತಿದೆ.

ಈ ನವೀಕರಣ ಕಾಮಗಾರಿಗೆ ಸಂಬಂಧ ಪ್ರಾಧಿಕಾರಗಳಿಂದ ಮಂಜೂರಾತಿ ಪಡೆಯುವುದಕ್ಕೂ ಮುನ್ನವೇ, ಈ ಬಗ್ಗೆ ಪಾಲುದಾರ ಸಂಸ್ಥೆಗಳ ಜೊತೆ ಹಾಗೂ ವಿಮಾನಯಾನ ಸೇವೆ ಒದಗಿಸುವ ಕಂಪನಿಗಳ ಜೊತೆ ಎಂಐಎ ಸಮಾಲೋಚನೆ ನಡೆಸಿದೆ. ಅಂತರರಾಷ್ಟ್ರೀಯ ಹಾಗೂ ದೇಶದೊಳಗಿನ ಯಾವುದೇ ಪ್ರಮುಖ ತಾಣಗಳ ವಿಮಾನ ಯಾನ ಸೇವೆಗಳು ಕಡಿತಗೊಳ್ಳದಂತೆ ಕ್ರಮಕೈಗೊಳ್ಳುವುದಾಗಿ ಎಂಐಎ ಭರವಸೆ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.