Recent Posts

Sunday, January 19, 2025
ಸುದ್ದಿ

ತುಳುನಾಡಿನಲ್ಲಿ ಸಂಭ್ರಮದ ನಾಗರಪಂಚಮಿ ; ಹಿನ್ನಲೆ ಮತ್ತು ಮಹತ್ವದ ಕುರಿತ ಒಂದು ವರದಿ – ಕಹಳೆ ನ್ಯೂಸ್

ಮಂಗಳೂರು, ಆಗಸ್ಟ್ 15: ಪರಶುರಾಮ ಸೃಷ್ಟಿಯ ತುಳುನಾಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗರಪಂಚಮಿಯನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಯಿತು.

 

ಜಾಹೀರಾತು
ಜಾಹೀರಾತು
ಜಾಹೀರಾತು

ನಾಗ ಬನದಲ್ಲಿ ನಾಗದೇವರಿಗೆ  ಹಾಲು, ಕ್ಷೀರಾ, ತುಪ್ಪ, ಜೇನಿನೊಂದಿಗೆ ಪಂಚಾಮೃತ ಆಭಿಷೇಕವನ್ನು ಮಾಡಿ ವಿಶೇಷ ಪೂಜೆ ನೆರವೇರಿಸಿದರು. ಈ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರೆ ನಾಗ ದೋಷ ಪರಿಹಾರ, ಸಂತಾನ ಪ್ರಾಪ್ತಿ ಹಾಗೂ ರೋಗ ರುಜಿನಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಭಕ್ತರದ್ದು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಕುಟುಂಬವೂ ನಾಗನ ವಿಗ್ರಹಗಳಿಗೆ ಹಾಲು ಹಾಗೂ ಸೀಯಾಳಾಭಿಷೇಕವನ್ನು ಮಾಡುವ ಮೂಲಕ ನಾಗನ ಮೇಲಿರುವ ನಂಬಿಕೆ ಹಾಗೂ ಭಕ್ತಿಯನ್ನು ಸಾದರಪಡಿಸುತ್ತದೆ.

ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾದ ಜಿಲ್ಲೆಯ ಕುಕ್ಕೆ ಸುಬ್ರಮಣ್ಯದಲ್ಲಿಯೂ ನಾಗರಪಂಚಮಿಯನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು. ದೇಶದೆಲ್ಲೆಡೆಯಿಂದ ಬಂದ ಭಕ್ತಾಧಿಗಳು ನಾಗನ ವಿಗ್ರಹಕ್ಕೆ ಹಾಲಿನ ಹಾಗೂ ಸೀಯಾಳಾಭಿಷೇಕ ಮಾಡುವ ಮೂಲಕ ಭಕ್ತಿಯನ್ನು ಸಮರ್ಪಿಸಿದರು.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದು ಮುಂಜಾನೆಯಿಂದಲೇ ಭಾರೀ ಸಂಖ್ಯೆಯಲ್ಲಿ ಭಕ್ತಾಧಿಗಳು ನೆರೆದಿದ್ದು, ನಾಗನ ವಿಗ್ರಹಕ್ಕೆ ಹಾಲೆರೆಯಲು ಸರತಿ ಸಾಲಿನಲ್ಲಿ ನಿಂತಿರುವುದು ಎಲ್ಲೆಡೆ ಕಂಡು ಬರುತ್ತಿತ್ತು. ದೇವಸ್ಥಾನಗಳಲ್ಲಿ ಮಾತ್ರವಲ್ಲದೆ ಪ್ರತಿಯೊಂದು ಕುಟುಂಬದ ಮೂಲ ಮನೆಗಳಲ್ಲಿಯೂ ನಾಗನಿಗೆ ಹಾಲಿನಭಿಷೇಕವನ್ನು ಮಾಡುವ ಸಂಪ್ರದಾಯ ತುಳುನಾಡಿನಲ್ಲಿ ಅನಾದಿ ಕಾಲದಿಂದಲೂ ಬೆಳೆದುಕೊಂಡು ಬಂದಿದೆ.

ನಾಗಗಳ ಆರೈಕೆ ಆಚರಣೆಯಾಯಿತು :

ಪರಶುರಾಮ ದೇವರು ಸಮುದ್ರ ರಾಜನಿಂದ ತುಳುನಾಡನ್ನು ಪಡೆದುಕೊಂಡಾಗ ಅದು ಉಪಯೋಗಕ್ಕೆ ಬಾರದ ಬರಡು ಭೂಮಿಯಾಗಿತ್ತು. ಉಪ್ಪಿನ ಕೋಟೆಯಂತೆ ಇದ್ದ ಭೂಮಿಯನ್ನು ಸಮೃದ್ಧ ಭೂಮಿಯನ್ನಾಗಿಸಿ ಕೊಡಲು ಪರಶುರಾಮ ನಾಗ ರಾಜನನ್ನು ಬೇಡಿಕೊಳ್ಳುತ್ತಾನೆ. ಪರಶುರಾಮನ ಮೊರೆಯನ್ನು ಕೇಳಿದ ನಾಗಗಳು ತಮ್ಮ ದೇಹವನ್ನು ಪಣಕ್ಕೆ ಇಟ್ಟು ಉಪ್ಪಿನ ಕೋಟೆಯನ್ನು ಮೆಟ್ಟಿ ಪಾತಾಳದಿಂದ ಸಿಹಿನೀರು ತರುತ್ತವೆ. ಅಡಿಯಲ್ಲಿದ್ದ ಮೆಕ್ಕಲು ಮಣ್ಣನ್ನು ಬುಡಮೇಲು ಮಾಡುತ್ತವೆ. ತುಳುನಾಡನ್ನು ಕಟ್ಟುವ ಕಾಯಕವನ್ನು ತಪಸ್ಸಾಗಿ ಸ್ವೀಕರಿಸಿದ ನಾಗಗಳು ಉಪ್ಪಿನ ಮೇಲೆ ಹರಿದಾಡಿದಾಗ ದೇಹಕ್ಕೆ ಗಾಯವಾಗುತ್ತದೆ. ಹೀಗೆ ಗಾಯವಾದ ಹಾವುಗಳಿಗೆ ತುಳುವರು ಉರಿಯ ಉಪಶಮನಕ್ಕೆ ಗೆಂದಾಲಿ ಎಲೆನೀರಲ್ಲಿ ಅಭಿಷೇಕ ಮಾಡುತ್ತಾರೆ. ಗಾಯಕ್ಕೆ ಅರಿಶಿನ ಹಚ್ಚಿ, ತಿಲಕವಿಟ್ಟು ಭಕ್ತಿಯಿಂದ ಆರತಿ ಮಾಡುತ್ತಾರೆ. ನಾಗನನ್ನು ತಮ್ಮ ಕುಲದೆವರಾಗಿ ಸ್ವೀಕರಿಸುತ್ತಾರೆ. ನಾಗನಿಗೆ ತುಳುವರು ಮಾಡಿದ ಆರೈಕೆ ಮುಂದೆ ಆಚರಣೆಯಾಗುತ್ತದೆ.

ಹೀಗಿರಲಿ ನಾಗಬನ :

ಮರದ ಬುಡದಲ್ಲಿ ಹಾಡಿ(ಕಾಡಿನಲ್ಲಿ)ಯಲ್ಲಿ ನಾಗಬನವಿದ್ರೆ ಅಲ್ಲಿ ನಾಗರ ಹಾವುಗಳು ಮರಿ ಮೊಟ್ಟೆಯೊಡನೆ ಜೀವಿಸುತ್ತವೆ. ಎಲ್ಲಾ ಕಡೆ ಮರ ಕಡಿದು ಪ್ರಕೃತಿ ನಾಶ ಮಾಡುವುದರಿಂದ ನಾಗನಿಗೆ ಮನೆಯಿಲ್ಲದಂತಾಗಿದೆ. ಇಡೀ ಭೂಮಿಯನ್ನು ಹೊತ್ತು ನಿಧಿ ಸಂರಕ್ಷಣೆ ಮಾಡಿ ಮನುಕುಲವನ್ನು ರಕ್ಷಿಸುತ್ತಿರುವ ನಾಗನಿಗೆ ವಾಸಿಸಲು ಯೋಗ್ಯವಾದ ಪರಿಸರಯುಕ್ತ ನಾಗಬನವಾಗಲಿ. ಕಾಂಕ್ರಿಟ್ ನಾಗಬನ ನಾಗ ದೇವರಿಗೆ ಅಪ್ರಿಯವಾದುದೆಂಬ ನಂಬಿಕೆಯಿಂದಾದರೂ ಪರಿಸರ ಉಳಿಸುವ ಕೆಲಸವಾಗಬೇಕಾಗಿದೆ. ಇನ್ನು ಮುಂದೆ ನಾಗಬನ ಮಾಡುವವರು ಗಿಡ ಮರಗಳ ನಡುವೆ ಪ್ರಕೃತಿ ಮಡಿಲಿನ ಸ್ವಚ್ಚ ಹಸಿರಿನ ಸುಂದರ ನಾಗಬನ ನಿರ್ಮಾಣವಾಗಬೇಕಾಗಿದೆ.