Recent Posts

Sunday, January 19, 2025
ಸುದ್ದಿ

72ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ; ಯಾವ ಜಿಲ್ಲೆಗಳಲ್ಲಿ ಹೇಗಿತ್ತು ಆಚರಣೆ ? – ಕಹಳೆ ನ್ಯೂಸ್

ಆಗಸ್ಟ್, ಆಗಸ್ಟ್.15: ರಾಜ್ಯದ ವಿವಿಧೆಡೆ 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಕೆಲವು ಕಡೆ ಮಳೆಯ ನಡುವೆಯೂ ಅತಿ ಸರಳವಾಗಿ ಆಚರಣೆ ಮಾಡಿದರೆ, ಇನ್ನು ಕೆಲವೆಡೆ ಅದ್ದೂರಿಯಾಗಿ ಆಚರಿಸಲಾಗಿದೆ.

ವಿವಿಧ ಜಿಲ್ಲೆಗಳಲ್ಲಿ ತುಂತುರು ಮಳೆಯಲ್ಲಿ ನಡೆದ ಮಕ್ಕಳ ಆಕರ್ಷಕ ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನಸೂರೆಗೊಂಡಿದೆ. ವಿಶೇಷ ಚೇತನ ಮಕ್ಕಳು ಸೇರಿದಂತೆ ಪ್ರತಿಯೊಬ್ಬರೂ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿರುವುದು ವಿಶೇಷ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಯಾವ ಯಾವ ಜಿಲ್ಲೆಗಳಲ್ಲಿ ಸ್ವಾತ್ರಂತ್ರ್ಯ ದಿನಾಚರಣೆಯನ್ನು ಹೇಗೆ ಆಚರಿಸಲಾಯಿತು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ…

ಮಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಧ್ವಜಾರೋಹಣ :

72ನೇ ಸ್ವಾತಂತ್ರ್ಯೋತ್ಸವವನ್ನು ಮಂಗಳೂರಿನ ನೆಹರು ಮೈದಾನದಲ್ಲಿ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ, ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಧ್ವಜಾರೋಹಣ ಮಾಡಿದರು.ಪೊಲೀಸ್, ಗೃಹ ರಕ್ಷಕ ದಳ, ಎನ್ ಸಿಸಿ, ಸ್ಕೌಟ್ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ಮಳೆಯ ಕಾರಣ ಸಾಂಕೇತಿಕವಾಗಿ ಸ್ವಾತಂತ್ರ್ಯ ದಿನಾಚರಣೆ ನಡೆಸಿದ್ದು, ಜಿಲ್ಲಾಧಿಕಾರಿಗಳು ಸಾಂಸ್ಕೃತಿಕ ಕಾರ್ಯಕ್ರಮ ರದ್ದುಪಡಿಸಿದರು. ಸದ್ಯ ಮಂಗಳೂರಿನಲ್ಲಿ ಮಳೆ ಬೆಳಗ್ಗಿನಿಂದ ಬಿಡುವು ನೀಡಿದೆ.

ಉಡುಪಿಯಲ್ಲಿ ಧ್ವಜಾರೋಹಣ ಮಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ :

ಉಡುಪಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯೂ ಆದ ಜಿಲ್ಲಾ ಉಸ್ತುವಾರಿ ಮಂತ್ರಿ ಡಾ.ಜಯಮಾಲಾ ಧ್ವಜಾರೋಹಣ ಮಾಡಿದರು. ಇಲ್ಲಿನ ಬೀಡಿನಗುಡ್ಡೆಯ ರಂಗಮಂದಿರದಲ್ಲಿ 72ನೇ ಸ್ವಾತಂತ್ರೋತ್ಸವ ಸಮಾರಂಭ ಹಮ್ಮಿಕೊಂಡಿದ್ದು, ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ ಮಾಡಿದ ಸಚಿವರು ಬಳಿಕ ಸ್ವಾತಂತ್ರೋತ್ಸವ ಸಂದೇಶವುಳ್ಳ ಭಾಷಣ ಮಾಡಿದರು. ಇದಕ್ಕೂ ಮುನ್ನ ಸಚಿವರು ಜಿಲ್ಲಾಡಳಿತ ಮತ್ತು ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಗೌರವವಂದನೆ ಸ್ವೀಕರಿಸಿದರು. ಬಳಿಕ ಜಿಲ್ಲಾ ಪೊಲೀಸ್ ವತಿಯಿಂದ ಮತ್ತು ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚನ ನಡೆಯಿತು. ಕೊನೆಗೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಡಾ.ಜಯಮಾಲಾ ಉಡುಪಿ ಜಿಲ್ಲೆಯಲ್ಲಿ ಬ್ರಹ್ಮಾವರ ,ಕಾಪು ,ಬೈಂದೂರು ಮತ್ತು ಹೆಬ್ರಿ ಎಂಬ ನಾಲ್ಕು ಹೊಸ ತಾಲೂಕು ರಚನೆಯಾಗಿದೆ. ಎಲ್ಲ ಇಲಾಖೆಗಳೂ ಕಾರ್ಯಾರಂಭ ಮಾಡಿವೆ. ಉಳಿದ 14 ಇಲಾಖೆಗಳು ಶೀಘ್ರ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಎಲ್ಲ ನಾಲ್ಕು ಹೊಸ ತಾಲೂಕು ಕೇಂದ್ರಗಳಲ್ಲೂ ತಲಾ ಹತ್ತು ಕೋಟಿ ರೂ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಮಾಡಲಾಗುವುದು ಎಂದರು.

ಚಿಕ್ಕಮಗಳೂರಿನಲ್ಲಿ ಸರಳವಾಗಿ ಆಚರಣೆ : 

ಮಲೆನಾಡು ಚಿಕ್ಕಮಗಳೂರಿನಲ್ಲಿ 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಿರಂತರ ಮಳೆಯ ನಡುವೆ ಅತಿ ಸರಳವಾಗಿ ಆಚರಣೆ ಮಾಡಲಾಯಿತು. ನಗರದ ಸುಭಾಷ್ ಚಂದ್ರ ಭೋಸ್ ಆಟದ ಮೈದಾನದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ ಜೆ ಜಾರ್ಜ್ ಧ್ವಜಾರೋಹಣ ನೆರವೇರಿಸಿದರು. ನಂತರ ಸಚಿವರು ಪೇರೆಡ್ ನಲ್ಲಿ ಭಾಗಿಯಾಗಿದ್ದ ವಿವಿಧ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು.ಇನ್ನು ನಿರಂತರ ಮಳೆ ಇದ್ದ ಕಾರಣ ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ರದ್ದುಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಸಕರುಗಳಾದ ಸಿ ಟಿ ರವಿ, ಧರ್ಮೇಗೌಡ, ಭೋಜೇಗೌಡ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಮುಖಂಡರು ಸೇರಿದಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಇದಕ್ಕೂ ಮುನ್ನ ತಡವಾಗಿ ಎಚ್ಚೆತ್ತುಕೊಂಡ ಜಿಲ್ಲಾಡಳಿತ, ಕಾರ್ಯಕ್ರಮಕ್ಕೆ ಕೆಲವೇ ಹೊತ್ತು ಇರುವ ಮುನ್ನ ಮೈದಾನಕ್ಕೆ ಮಣ್ಣು ಹಾಕಿ ಕೆಸರನ್ನು ಮುಚ್ಚುವ ಯತ್ನ ಮಾಡಿದ್ದು ಸಾರ್ವಜನಿಕರಲ್ಲಿ ನಿರಾಸೆ ಮೂಡಿಸಿತು.

ರಾಯಚೂರಿನಲ್ಲಿ ಸಚಿವ ನಾಡಗೌಡರಿಂದ ಧ್ವಜಾರೋಹಣ :

ರಾಯಚೂರಿನಲ್ಲಿ 72ನೇ ಸ್ವಾತಂತ್ಸ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ನಗರದ ಪೊಲೀಸ್ ಮೈದಾನದಲ್ಲಿ ಜಿಲ್ಲಾಡಳಿತದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಧ್ವಜಾರೋಹಣ ಮಾಡಿದರು. ಬಳಿಕ ಸಚಿವ ನಾಡಗೌಡ ಪಥ ಸಂಚಲನ ನೆರವೇರಿಸಿದರು. ಜೊತೆಗೆ ವಿವಿಧ ವಿಭಾಗದಿಂದ ಗೌರವ ವಂದನೆ ಸ್ವೀಕರಿಸಿದರು. ಈ ವೇಳೆ ಡಿಸಿ ಡಾ.ಬಗಾದಿ ಗೌತಮ್, ಎಸ್ಪಿ ಡಿ.ಕಿಶೋರ್ ಬಾಬು, ಸಿಇಓ ನಳಿನ್ ಅತುಲ್, ಸಂಸದ ಬಿವಿ ನಾಯಕ, ಎಂಎಲ್ಸಿ ಎನ್.ಎಸ್.ಭೋಸರಾಜು, ಶಾಸಕರಾದ ಡಾ.ಶಿವರಾಜ ಪಾಟೀಲ್, ಬಸನಗೌಡ ದದ್ದಲ್ ಸೇರಿದಂತೆ ಹಲವು ಗಣ್ಯರು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗಿಯಾಗಿದ್ದರು.

ಕಾರವಾರದಲ್ಲಿ ಅದ್ದೂರಿಯಾಗಿ ನಡೆದ ಸ್ವಾತ್ರಂತ್ರ್ಯ ದಿನಾಚರಣೆ :

ಯುವಜನರಿಗೆ ಕೌಶಲ್ಯ ತರಬೇತಿ ನೀಡಲು ಕೌಶಲ್ಯ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಹೆಜ್ಜೆ ಹಾಕುತ್ತಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ‌.ದೇಶಪಾಂಡೆ ಹೇಳಿದರು. ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವದ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಕೌಶಲ್ಯಕ್ಕೆ ಇಂದಿನ ದಿನಗಳಲ್ಲಿ ಹೆಚ್ಚಿನ ಮಹತ್ವ ಇದೆ. ಕೃಷಿ, ವ್ಯಾಪಾರಕ್ಕೆ ಅಗತ್ಯ ಇರುವ ಕೌಶಲ್ಯವನ್ನು ಒದಗಿಸಲು ಸರ್ಕಾರ ಬದ್ಧವಿದೆ. 2.5 ಲಕ್ಷ ಯುವಜನತೆಗೆ ಕೌಶಲ್ಯ ತರಬೇತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಪರೇಡ್ ಕಮಾಂಡರ್ ಸಚಿನ್ ಲಾರೆನ್ಸ್ ನೇತೃತ್ವದಲ್ಲಿ ಸೇವಾದಳ, ಎನ್ಸಿಸಿ, ಪೊಲೀಸ್, ನೇವಲ್ ಸೇರಿದಂತೆ ಒಟ್ಟು ಹದಿನೈದು ತಂಡಗಳು ಸ್ವಾತಂತ್ರ್ಯೋತ್ಸವದ ಪರೇಡ್ ನಲ್ಲಿ ಭಾಗವಹಿಸಿದವು. ಹುತಾತ್ಮ ಯೋಧ ವಿಜಯಾನಂದ ನಾಯ್ಕ, ಆಪರೇಶನ್ ರಕ್ಷಕ್ ನಲ್ಲಿ ಭಾಗವಹಿಸಿ ಶೌರ್ಯ ಮೆರೆದಿದ್ದ ರಮಾಕಾಂತ ಸಾವಂತ ಹಾಗೂ ರಾಜೇಶ್ ನಾಯ್ಕ ನಂದನಗದ್ದಾ ಅವರ ಕುಟುಂಬಕ್ಕೆ ಒಂದು ಎಕರೆ ಭೂಮಿಯ ಹಕ್ಕು ಪತ್ರವನ್ನು ಸಚಿವರು ಹಸ್ತಾಂತರಿಸಿದರು. ಬಳಿಕ ನಗರದ ವಿವಿಧ ಶಾಲಾ- ಕಾಲೇಜು ವಿದ್ಯಾರ್ಥಿಗಳಿಂದ ದೇಶ ಭಕ್ತಿ ಮೆರೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು‌. ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಉಪಾಧ್ಯಕ್ಷ ಸಂತೋಷ್ ರೇಣಕೆ, ಸಿಇಒ ಮೊಹಮ್ಮದ್ ರೋಶನ್, ಎಸ್.ಪಿ ವಿನಾಯಕ ಪಾಟೀಲ್, ಶಾಸಕಿ ರೂಪಾಲಿ ನಾಯ್ಕ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಇದ್ದರು‌.

ಬಾಗಲಕೋಟೆಯಲ್ಲಿ ಶಾಲಾ‌ ಮಕ್ಕಳಿಂದ ಆಕರ್ಷಕ ಪಥಸಂಚಲನ :

ಬಾಗಲಕೋಟೆಯ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 72 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆದ ಧ್ವಜಾರೋಹಣ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ‌ ಪಾಟೀಲ ನೆರವೇರಿಸಿದರು. ಪ್ರತಿ ವರ್ಷ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಾಹಿತ್ಯ,ವೈದ್ಯಕೀಯ, ಕ್ರೀಡೆ, ಪತ್ರಿಕಾರಂಗ ಹೀಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿತ್ತು. ಆದರೆ ಈ ಬಾರಿ ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ಯಾರಿಗೂ ಪ್ರಶಸ್ತಿ ನೀಡಲಿಲ್ಲ. ಪೊಲೀಸ್ ಪಡೆ, ಸ್ಕೌಟ್ಸ್ ಮತ್ತು ಗೈಡ್ಸ್ , ಭಾರತ ಸೇವಾದಳ ಹಾಗೂ ಶಾಲಾ‌ ಮಕ್ಕಳಿಂದ ಆಕರ್ಷಕ ಪಥಸಂಚಲನ ಜರುಗಿತು. ನಂತರ ವಿವಿಧ ಶಾಲಾ‌ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಂಸದ ಪಿ.ಸಿ.ಗದ್ದಿಗೌಡರ, ಜಿಲ್ಲಾ ಪಂಚಾಯತ ಅಧ್ಯಕ್ಷೆ ವೀಣಾ ಕಾಶಪ್ಪನವರ, ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ ಇತರರು ಇದ್ದರು.

ಹಿರಿಯೂರಿನಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ :

ಹಿರಿಯೂರು ನಗರದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಅದ್ದೂರಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕಿ ಕೆ. ಪೂರ್ಣಿಮಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಿ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದರು. ತಾಲ್ಲೂಕು ದಂಡಾಧಿಕಾರಿಗಳಾದ ಜೆ.ಸಿ. ವೆಂಕಟೇಶಯ್ಯ ಧ್ವಜಾರೋಹಣ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯಿಂದ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ಎಲ್ಲ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು. ಸಂಘ ಸಂಸ್ಥೆಯ ಮುಖಂಡರು ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬಳ್ಳಾರಿಯಲ್ಲಿ 1000 ಮೀ. ಉದ್ದದ ರಾಷ್ಟ್ರಧ್ವಜ ಪ್ರದರ್ಶನಕ್ಕೆ ಚಾಲನೆ :

ಬಿಸಿಲು -ಮೋಡಗಳ ಆಟಗಳ ಮಧ್ಯೆ ಬಳ್ಳಾರಿ ಜಿಲ್ಲೆಯಾದ್ಯಂತ ದೇಶದ 72ನೇ ಸ್ವಾತಂತ್ರ್ಯ ದಿನಾಚರಣೆ ಅದ್ದೂರಿಯಾಗಿಯೇ ಆಚರಣೆಗೊಂಡಿದೆ. ಜಿಲ್ಲಾಡಳಿತವು ಇಂದಿರಾಗಾಂಧಿ ವೃತ್ತದಲ್ಲಿ ಏರ್ಪಡಿಸಿದ್ದ 1000 ಮೀಟರ್ ಉದ್ದದ ರಾಷ್ಟ್ರಧ್ವಜ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಅವರು ಚಾಲನೆ ನೀಡಿ, ಧ್ವಜವನ್ನು ಹೊತ್ತು ಹರ್ಷೋದ್ಘಾರ ಸೂಚಿಸುತ್ತಿದ್ದ ರಾಷ್ಟ್ರಪ್ರೇಮಿಗಳಿಗೆ ಶುಭ ಹಾರೈಸಿದರು. ಆ ನಂತರ, ಎಚ್‍ಆರ್ ಜಿ ವೃತ್ತದಲ್ಲಿ ದೇಶದ ಅತಿ ಎತ್ತರದ ಧ್ವಜಾರೋಹಣ ನೆರವೇರಿಸಿದರು. ಈ ಧ್ವಜವನ್ನು ಜಿಲ್ಲಾ ಕ್ರೀಡಾಂಗಣದವರೆಗೆ ರಾಷ್ಟ್ರಪ್ರೇಮಿಗಳು ಜನಪದ ಮೆರವಣಿಗೆಯಲ್ಲಿ ತಂದಿದ್ದು, ವಿಶೇಷವಾಗಿತ್ತು.

ಮೈಸೂರಿನಲ್ಲಿ ಧ್ವಜಾರೋಹಣ ನೆರವೇರಿಸಿದ ಜಿಟಿಡಿ :

ಮೈಸೂರು ಜಿಲ್ಲಾಡಳಿತದಿಂದ ಪಂಜಿನ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಧ್ವಜಾರೋಹಣ ನೆರವೇರಿಸಿದರು. ನಂತರ ತೆರದ ವಾಹನದ ಮೂಲಕ ಅಶ್ವದಳದ ಜೊತೆ ತುಕಡಿ ಪರಿವೀಕ್ಷಣೆ ನಡೆಸಲಾಯಿತು. ಡಿಎಆರ್, ಸಿಆರ್, ಸಿಆರ್ ಪಿ ಎಫ್, ಕೆ.ಎಸ್.ಆರ್.ಪಿ. ಅಶ್ವರೋಹಿಪಡೆ ಸೇರಿದಂತೆ 29 ತುಕಡಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ವಿವಿಧ ಶಾಲೆಗಳ ಮಕ್ಕಳಿಂದ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾವಾಯತು ಮೈದಾನದಲ್ಲಿ ಮಂಜು ಮುಸುಕಿನ ವಾತಾವರಣವಿದ್ದು, ತುಂತುರು ಮಳೆಯಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು. ಕರುಣ ಮಯಿ ಶಾಲೆಯ ವಿಶೇಷ ಮಕ್ಕಳಿಂದ ಪಥ ಸಂಚಲನ ನಡೆದಿದ್ದು, ವಿಶೇಷ ಚೇತನ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು.