ಕನ್ನಡದ ಹಿರಿಯ ಸಾಹಿತಿ ಸಾರಾ ಅಬೂಬಕ್ಕರ್ ನಿಧನ ; ಮಂಗಳೂರಿನ ಲೇಡಿಹಿಲ್ನ ಮನೆಯಲ್ಲಿ ಸಾರಾ ಅಬೂಬಕ್ಕರ್ ಅವರ ಅಂತಿಮ ದರ್ಶನ – ಇಂದೇ ಅಂತ್ಯಕ್ರಿಯೆ – ಕಹಳೆ ನ್ಯೂಸ್
ಮಂಗಳೂರು: ಕನ್ನಡದ ಹಿರಿಯ ಸಾಹಿತಿ ಸಾರಾ ಅಬೂಬಕ್ಕರ್(86) ಅವರು ಮಂಗಳವಾರ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮಂಗಳೂರಿನ ಲೇಡಿಹಿಲ್ನ ಮನೆಯಲ್ಲಿ ಸಾರಾ ಅಬೂಬಕ್ಕರ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇಂದು ರಾತ್ರಿ 8 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ.
1936ರ ಜೂನ್ 30ರಂದು ಕಾಸರಗೋಡಿನ ಚಂದ್ರಗಿರಿ ತೀರದ ಗ್ರಾಮವೊಂದರಲ್ಲಿ ಪಿ. ಅಹಮದ್ ಮತ್ತು ಚೈನಾಬಿ ದಂಪತಿಯ ಪುತ್ರಿಯಾಗಿ ಸಾರಾ ಜನಿಸಿದರು. ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರು ಕಾಸರಗೋಡಿನಲ್ಲಿ ಪ್ರೌಢಶಿಕ್ಷಣ ಪಡೆದರು. ಇಂಜಿನಿಯರ್ ಅಬೂಬಕ್ಕರ್ ಅವರ ಜತೆ ಸಾರಾ ದಾಂಪತ್ಯಕ್ಕೆ ಕಾಲಿಟ್ಟರು. ಮದ್ವೆ ಹಿನ್ನೆಲೆ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಓದಿನಲ್ಲಿ ಅತೀವ ಆಸಕ್ತಿ ಹೊಂದಿದ್ದ ಸಾರಾ ಅವರು ಶಿವರಾಮ ಕಾರಂತ, ಇನಾಂದಾರ್, ಭೈರಪ್ಪ, ಅನಂತಮೂರ್ತಿ, ತ್ರಿವೇಣಿ, ವೈಕಂ ಮಹಮದ್ ಬಷೀರ್ ಅವರ ಪುಸ್ತಕಗಳನ್ನು ಮನೆಯಲ್ಲೇ ನಿರಂತರವಾಗಿ ಓದುತ್ತಿದ್ದರು.
ಓದಿನ ಪ್ರಭಾವದಿಂದ ಸಾರಾ ಅವರಲ್ಲೂ ಬರವಣಿಗೆ ಸೆಳೆಯುತ್ತಿತ್ತು. ತಾನೂ ಬರೆಯಬೇಕೆಂಬ ಕೂಗೆ ಲೇಖನಿಯನ್ನ ಹಿಡಿದ ಅವರು ಬರುಯುತ್ತಲೇ ಸಾಗಿದರು. ಮುಸ್ಲಿಂ ಹೆಣ್ಣುಮಕ್ಕಳಿಗೆ ಶಿಕ್ಷಣ ವಿಚಾರದಲ್ಲಿ ಸೌದಿಯ ‘ವಹಾಬಿಸಂ’ ವಿರುದ್ಧ ಮಾತನಾಡಿ ಗಮನ ಸೆಳೆದಿದ್ದ ಸಾರಾ ಅಬೂಬಕ್ಕರ್ ಅವರು, 10ಕ್ಕೂ ಹೆಚ್ಚು ಕಾದಂಬರಿ, 6 ಕಥಾ ಸಂಕಲನ, 5 ಬಾನುಲಿ ನಾಟಕ, 4 ಲೇಖನ, ಒಂದು ಪ್ರವಾಸ ಕಥನ ಬರೆದಿದಿದ್ದಾರೆ. ಅವರ ಮೊದಲ ಕಾದಂಬರಿ ‘ಚಂದ್ರಗಿರಿಯ ತೀರದಲ್ಲಿ’ ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಸಹನಾ, ವಜ್ರಗಳು, ಕದನವಿರಾಮ, ಸುಳಿಯಲ್ಲಿ ಸಿಕ್ಕವರು, ಪ್ರವಾಹ-ಸುಳಿ (ಸುಳಿಯಲ್ಲಿ ಸಿಕ್ಕವರು ಕೃತಿಯ ಭಾಗ-೨), ತಳ ಒಡೆದ ದೋಣಿ, ಪಂಜರ, ಚಪ್ಪಲಿಗಳು, ಪಯಣ ಮತ್ತು ಇತರ ಕಥೆಗಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಖೆಡ್ಡ, ನಾನಿನ್ನು ನಿದ್ರಿಸುವೆ… ಹೀಗೆ ಹಲವು ಕಾದಂಬರಿ, ಕಥಾ ಸಂಕಲನಗಳನ್ನ ಬರೆದರು.
ಸಾರಾ ಅಬೂಬಕ್ಕರ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜಾದೇವಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ… ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.