ಪುತ್ತೂರು: ಬಾಡಿಗೆ ಮನೆಯಿಂದ 14 ಅಂಗಿ, 4 ಜೀನ್ಸ್ ಪ್ಯಾಂಟ್ ಸೇರಿದಂತೆ 75 ಸಾವಿರ ಮೌಲ್ಯದ ಸೊತ್ತು ಕಳವು ; ಮಹಮ್ಮದ್ ಮುಸ್ತಫ್ಪ, ಚಾಪಳ್ಳ ಶಮೀರ್ ಅಂದರ್..! – ಕಹಳೆ ನ್ಯೂಸ್
ಪುತ್ತೂರು, ಜ 11 : ಎ.ಪಿ.ಎಂ.ಸಿ ರಸ್ತೆಯ ಸೂತ್ರಬೆಟ್ಟುವಿನ ಬಾಡಿಗೆ ಮನೆಯಲ್ಲಿ ವಾಸವಿರುವ ವಿವೇಕಾನಂದ ಯಾನೆ ಸತ್ಯನಾರಾಯಣ ಅವರ ಮನೆಯಿಂದ ಸುಮಾರು 75 ಸಾವಿರ ಮೌಲ್ಯದ ವಿವಿಧ ಸೊತ್ತುಗಳನ್ನು ಕಳವು ಗೈದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೂರ್ನಡ್ಕ ನಿವಾಸಿಗಳಾದ ಮಹಮ್ಮದ್ ಮುಸ್ತಫ್ಪ(28) ಹಾಗೂ ಸವಣೂರು ಚಾಪಳ್ಳ ಶಮೀರ್(24) ಬಂಧಿತ ಆರೋಪಿಗಳಾಗಿದ್ದಾರೆ.ಮನೆಯಲ್ಲಿ ಸತ್ಯನಾರಾಯಣ ಹಾಗೂ ಅವರ ಅಣ್ಣ ಗೋಪಿನಾಥ ವಾಸವಿದ್ದು, ಜನವರಿ 4 ರಂದು ಸತ್ಯ ನಾರಾಯಣ ಅವರು ತಾಯಿಯ ಅಸೌಖ್ಯತೆ ಹಿನ್ನಲೆ ತಮ್ಮ ಸ್ವಂತ ಊರಾದ ಮಧುರೈಗೆ ಹೋಗಿದ್ದರು. ಮನೆಯಲ್ಲಿದ್ದ ಗೋಪಿನಾಥ ಅವರು ಬೀಗ ಹಾಕಿ ಅವರಲ್ಲಿದ್ದ ಒಂದು ಜೊತೆ ಬೀಗದ ಕೀಯನ್ನು ಮನೆಯ ಹೊರಗಡೆ ನಿಲ್ಲಿಸಿದ್ದ ಮೋಟಾರು ಸೈಕಲ್ ನ ಬಾಕ್ಸ್ ನಲ್ಲಿಟ್ಟು, ಇನ್ನೊಂದು ಜೊತೆ ಕೀಯನ್ನು ತಮ್ಮ ಜೊತೆಗೆ ತೆಗೆದುಕೊಂಡು ಹೋಗಿದ್ದರು.
ಇನ್ನು ಜನವರಿ 8 ರಂದು ಬಾಡಿಗೆ ಮನೆಗೆ ವಾಪಾಸು ಬಂದು ನೋಡಿದಾಗ ಮನೆಯ ಬೀಗ ಯಥಾ ಸ್ಥಿತಿಯಲ್ಲಿದ್ದು, ಒಳಗಡೆ ನೋಡಿದಾಗ ಚಾವಡಿ ಮತ್ತು ಬೆಡ್ ರೂಮ್ ನ ಬಟ್ಟೆ ಬರೆಗಳು ಚೆಲ್ಲಾ ಪಿಲ್ಲಿಯಾಗಿದ್ದುದಲ್ಲದೇ ಮನೆಯಲ್ಲಿದ್ದ 18 ಸಾವಿರ ನಗದು, ಟಿವಿ, ಯುಪಿಎಸ್ ಬ್ಯಾಟರಿ, ಇಸ್ತ್ರಿಪೆಟ್ಟಿಗೆ, 5 ಮೊಬೈಲ್, ಲೈಟ್, ಬ್ಲೂಟೂತ್ ಸ್ಪೀಕರ್, 14 ಅಂಗಿ, 4 ಜೀನ್ಸ್ ಪ್ಯಾಂಟ್, ವಾಚು ಕಾಣೆಯಾಗಿದ್ದು, ಹೊರಗಡೆ ನಿಲ್ಲಿಸಿದ್ದ ಮೋಟಾರು ಸೈಕಲ್ ನ ಬಾಕ್ಸ್ ತೆರೆದುಕೊಂಡಿದ್ದು, ಅದರಲ್ಲಿದ್ದ ಮನೆಯ ಕೀ ಅದರಲ್ಲೆ ಇತ್ತಾದರೂ, ಬೈಕ್ ಪೆಟ್ರೋಲ್ ಟ್ಯಾಂಕ್ ಮುಚ್ಚಳ ತೆರೆದುಕೊಂಡಿತ್ತು ಎಂದು ತಿಳಿಸಿದ್ದಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.