ಇಸ್ಲಾಮಿಕ್ ಸ್ಟೇಟ್ನ ಭಯೋತ್ಪಾದಕ ಚಟುವಟಿಕೆಯಲ್ಲಿ ನಂಟು ಹೊಂದಿದ್ದ ಐಸಿಸ್ ನ ಶಂಕಿತ ಉಗ್ರ ಮಂಗಳೂರು ಹೊರವಲಯದ ಬಬ್ಬುಕಟ್ಟೆಯ ಮಝೀನ್ ಅಬ್ದುಲ್ ರೆಹಮಾನ್ ನನ್ನು ಹೆಡೆಮುರಿಕಟ್ಟಿದ ಎನ್ಐಎ – ಕಹಳೆ ನ್ಯೂಸ್
ಮಂಗಳೂರು: ಭಯೋತ್ಪಾದಕ ಸಂಘಟನೆಯಾಗಿರುವ ಐಸಿಸ್ ಜತೆ ನಂಟು ಹೊಂದಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳದವರು ಮುಂದುವರಿಸಿರುವ ಕಾರ್ಯಾಚರಣೆಯಲ್ಲಿ ಇನ್ನಿಬ್ಬರು ಶಂಕಿತರು ಸಿಕ್ಕಿ ಹಾಕಿಕೊಂಡಿದ್ದಾರೆ. ಭಯೋತ್ಪಾದಕ ಹಿನ್ನೆಲೆಯಲ್ಲಿ ಇಬ್ಬರು ಶಂಕಿತರನ್ನು ಎನ್ಐಎ ಬಂಧಿಸಿದೆ.
ಶಿವಮೊಗ್ಗದ ಐಸಿಸ್ ನಂಟಿನ ಭಯೋತ್ಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಒಬ್ಬ ಶಂಕಿತ ಉಗ್ರ ಹಾಗೂ ದಾವಣಗೆರೆಯ ಹೊನ್ನಾಳಿಯಲ್ಲಿ ಇನ್ನೊಬ್ಬ ಶಂಕಿತ ಉಗ್ರನನ್ನು ಪತ್ತೆ ಮಾಡಿ ಬಂಧಿಸಲಾಗಿದೆ. ಮಂಗಳೂರು ಹೊರವಲಯದ ಬಬ್ಬುಕಟ್ಟೆಯ ಮಝೀನ್ ಅಬ್ದುಲ್ ರೆಹಮಾನ್, ದಾವಣಗೆರೆಯ ಹೊನ್ನಾಳಿಯಲ್ಲಿ ನದೀಮ್ ಅಹ್ಮದ್ ಬಂಧಿತ ಆರೋಪಿಗಳು.
ಶಿವಮೊಗ್ಗದ ಆರೋಪಿ ಮಾಜ್ ಮುನೀರ್ ಜೊತೆ ಮಝಿನ್ ಅಬ್ದುಲ್ ರಹಮಾನ್ಗೆ ನಂಟು ಇರುವುದು ಕಂಡುಬಂದಿದ್ದು, ಮಾಜ್ನ ಉಗ್ರ ಚಟುವಟಿಕೆಗಳಿಗೆ ಈತ ಸಹಕರಿಸುತ್ತಿದ್ದ ಎನ್ನಲಾಗಿದೆ. ಇನ್ನೊಬ್ಬ ಆರೋಪಿ ಸೈಯದ್ ಯಾಸಿನ್ ಜತೆ ದಾವಣಗೆರೆಯ ನದೀಮ್ ನಂಟು ಹೊಂದಿದ್ದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ನ ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸಲು ನದೀಮ್ ನೇಮಕಗೊಂಡಿದ್ದ ಎನ್ನಲಾಗಿದೆ.