ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿದ್ಯಾರ್ಥಿನಿ- ಶಿಕ್ಷಕನ ‘ಖಾಸಗಿ’ ವಿಡಿಯೊಗಳು ; ಶಿಕ್ಷಕನ ವಿರುದ್ಧ ಕ್ರಮಕ್ಕೆ ಎಬಿವಿಪಿ ಆಗ್ರಹ – ಕಹಳೆ ನ್ಯೂಸ್
ಖಾನಾಪುರ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ನಂದಗಡ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರ ಪ್ರೌಢಶಾಲೆಯ ಶಿಕ್ಷಕ, ವಿದ್ಯಾರ್ಥಿನಿಯ ಜತೆಗೆ ಇರುವ ‘ಖಾಸಗಿ ವಿಡಿಯೊ’ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
‘ಖಾಸಗಿ ಪ್ರೌಢಶಾಲೆಯ ಶಿಕ್ಷಕ ಅದೇ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಜತೆಗೆ ಸಲುಗೆ ಬೆಳೆಸಿದ್ದ.
ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಪ್ರೀತಿಯಲ್ಲಿ ಬೀಳಿಸಿಕೊಂಡಿದ್ದ. ಕೆಲವು ತಿಂಗಳಿಂದ ಶಾಲಾ ಸಮಯದ ಬಳಿಕವೂ ವಿದ್ಯಾರ್ಥಿನಿಯನ್ನು ಶಾಲೆಯಲ್ಲೇ ಇರಿಸಿಕೊಳ್ಳುತ್ತಿದ್ದ. ಈಚೆಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿನಿಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದ. ಆ ಸಂದರ್ಭದಲ್ಲಿ ಇಬ್ಬರೂ ಏಕಾಂತದಲ್ಲಿ ಇದ್ದ ಕ್ಷಣಗಳನ್ನು ತನ್ನ ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸಿಕೊಂಡಿದ್ದ. ಈ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಆಗಿವೆ’ ಎಂದು ಮೂಲಗಳು ಮಾಹಿತಿ ನೀಡಿವೆ.
ವಾರದ ಹಿಂದೆಯೇ ಶಾಲಾ ಆಡಳಿತ ಮಂಡಳಿಗೆ ಈ ಪ್ರಕರಣ ಗೊತ್ತಾಗಿತ್ತು. ಆಡಳಿತ ಮಂಡಳಿಯವರು ಶಿಕ್ಷಕನನ್ನು ಅಮಾನತು ಮಾಡಿದ್ದಾರೆ.
‘ವಿಡಿಯೊಗಳು ಎಲ್ಲೆಡೆ ಹರಿದಾಡಿದ್ದರಿಂದ ವಿದ್ಯಾರ್ಥಿನಿ ನೊಂದಿದ್ದಾಳೆ. ಬಡ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಮೋಸ ಮಾಡಲಾಗಿದೆ. ಈಗ ಆಕೆ ಶಾಲೆಯಿಂದ ದೂರ ಉಳಿದಿದ್ದಾಳೆ. ಆಕೆಯ ಪಾಲಕರೂ ನೊಂದಿದ್ದಾರೆ. ವಿದ್ಯಾರ್ಥಿನಿಗೆ ನ್ಯಾಯ ಕೊಡಿಸಬೇಕು. ಆಕೆಯ ಮುಂದಿನ ಶಿಕ್ಷಣಕ್ಕೆ ತೊಂದರೆ ಆಗದಂತೆ ಕ್ರಮ ವಹಿಸಬೇಕು’ ಎಂದು ಎಬಿವಿಪಿ ತಾಲ್ಲೂಕು ಘಟಕದ ಸಂಚಾಲಕ ಮಂಜುನಾಥ ಹಂಚಿನಮನಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಶನಿವಾರ ರಾತ್ರಿಯವರೆಗೂ ಯಾವುದೇ ದೂರು ದಾಖಲಾಗಿಲ್ಲ.