Friday, September 20, 2024
ಸುದ್ದಿ

ಭಾರತವು ತನ್ನ ಅಪ್ರತಿಮ ಸಾಧನೆಯ ಮೂಲಕ ವಿಶ್ವದಲ್ಲಿಯೇ ಸೂಪರ್ ಪವರ್ ಆಗಿ ಕಂಗೊಳಿಸುತ್ತಿರುವುದು ನಮಗೆಲ್ಲರಿಗೂ ಅತ್ಯಂತ ಹೆಮ್ಮೆಯ ಸಂಗತಿ ; ಫಿಲೋಮಿನಾ ಕಾಲೇಜಿನಲ್ಲಿ 72ನೇ ಸ್ವಾತಂತ್ರ್ಯೋತ್ಸವದಲ್ಲಿ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ – ಕಹಳೆ ನ್ಯೂಸ್

ಪುತ್ತೂರು: ಭಾವನೆಗಳನ್ನು ಸ್ವಯಂ ನಿಯಂತ್ರಣದ ಮೂಲಕ ರಚನಾತ್ಮಕ ಚಟುವಟಿಕೆಗಳಿಗೆ ಬಳಸಿಕೊಂಡಾಗ ನಮಗಿರುವ ಸ್ವಾತಂತ್ರ್ಯಕ್ಕೆ ಉತ್ತಮ ಮೌಲ್ಯವು ಪ್ರಾಪ್ತಿಯಾಗುತ್ತದೆ ಎಂದು ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ವಂ. ಸುನಿಲ್ ಜಾರ್ಜ್ ಡಿ’ಸೋಜ ಹೇಳಿದರು.
ಸಂತ ಫಿಲೋಮಿನಾ ಕಾಲೇಜಿನಲ್ಲಿ ಜರಗಿದ 72ನೇ ಸ್ವಾತಂತ್ರ್ಯೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಸಂದೇಶ ನೀಡಿ, ಜೀವನದ ಸರ್ವಸ್ವವನ್ನೂ ದೇಶದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟು ಹೋರಾಡಿದ ರಾಷ್ಟ್ರ ನಾಯಕರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಜೀವನದಲ್ಲಿ ಶಿಸ್ತು, ಸೃಜನಶೀಲತೆ, ನಿಷ್ಕಲ್ಮಶ ಹೃದಯವಂತಿಕೆ, ದೃಢವಿಶ್ವಾಸ, ಕರ್ತವ್ಯ ಪ್ರಜ್ಞೆ, ಸಾಮಾಜಿಕ ಬದ್ಧತೆ ಮುಂತಾದವುಗಳ ಮೂಲಕ ದೇಶದ ಜವಾಬ್ದಾರಿಯುತ ನಾಗರಿಕನಾಗುವುದು ಅತಿ ಅವಶ್ಯ ಎಂದು ಹೇಳಿದರು.


ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಇವರು ದೇಶದ ತ್ರಿವರ್ಣ ಧ್ಯಜಾರೋಹಣಗೊಳಿಸಿ, ಎನ್‍ಸಿಸಿ ಕೆಡೆಟ್‍ಗಳು, ರೋವರ್ಸ್-ರೇಂಜರ್ಸ್ ಘಟಕದ ಸದಸ್ಯರು ಮತ್ತು ಎನ್‍ಎಸ್‍ಎಸ್ ಸ್ವಯಂಸೇವಕರಿಂದ ಗೌರವ ವಂದನೆಯನ್ನು ಸ್ವೀಕರಿಸಿದರು, ನಂತರ ಮಾತನಾಡಿ, ಭಾರತವು ತನ್ನ ಅಪ್ರತಿಮ ಸಾಧನೆಯ ಮೂಲಕ ವಿಶ್ವದಲ್ಲಿಯೇ ಸೂಪರ್ ಪವರ್ ಆಗಿ ಕಂಗೊಳಿಸುತ್ತಿರುವುದು ನಮಗೆಲ್ಲರಿಗೂ ಅತ್ಯಂತ ಹೆಮ್ಮೆಯ ಸಂಗತಿ ಎಂದು ಹೇಳಿದರು.
ಕ್ಯಾಂಪಸ್ ನಿರ್ದೇಶಕರಾದ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ದೇಶ ರಕ್ಷಣೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಶಿಸ್ತಿನ ಸಿಪಾಯಿಗಳನ್ನು ಗೌರವದಿಂದ ಕಾಣುವುದೇ ನಾವು ರಾಷ್ಟ್ರಕ್ಕೆ ನೀಡಬಹುದಾದ ಮಹೋನ್ನತ ಕೊಡುಗೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಂ. ವಿಜಯ್ ಲೋಬೊ ಉಪಸ್ಥಿತರಿದ್ದರು.
ಎನ್‍ಸಿಸಿ ಅಧಿಕಾರಿ ಲೆಫ್ಟಿನೆಂಟ್ ಜೋನ್ಸನ್ ಡೇವಿಡ್ ಸಿಕ್ವೇರಾ ಮಾರ್ಗದರ್ಶನದಲ್ಲಿ ಎನ್‍ಸಿಸಿ ಕೆಡೆಟ್‍ಗಳು, ರೋವರ್ಸ್-ರೇಂಜರ್ಸ್ ಹಾಗೂ ಎನ್‍ಎಸ್‍ಎಸ್ ಸ್ವಯಂಸೇವಕರು ಕವಾಯತು ಮತ್ತು ಪಥ ಸಂಚಲನವನ್ನು ನಡೆಸಿದರು. ಪೆರೇಡ್ ಕಮಾಂಡರ್ ಆಗಿ ಸೀನಿಯರ್ ಅಂಡರ್ ಆಫೀಸರ್ ಜೊವಿನ್ ಜೋಸೆಫ್ ಕಾರ್ಯನಿರ್ವಹಿಸಿದರೆ, ತುಕಡಿಗಳ ನೇತೃತ್ವವನ್ನು ಭವಿತ್ ಕುಮಾರ್, ಮನ್‍ದೀಪ್ ವೈ, ನಂದನ್ ಕುಮಾರ್ ಜಿ, ಜಯಶ್ರೀ, ಜಸ್ವಿಟಾ ಆನ್ಸ್ ಗೊನ್ಸಾಲ್ವಿಸ್, ಆಶೀಕ್ ಮತ್ತು ರಕ್ಷಿತಾ ವಹಿಸಿದರು. ಪೈಲೆಟ್‍ಗಳಾಗಿ ವಿಭಾ ಬಿದ್ದಪ್ಪ ಎಮ್ ಬಿ ಮತ್ತು ಶ್ರೀದೇವಿ ಕೆ ನಿರ್ವಹಿಸಿದರು. ಆರ್‍ಡಿ ಪೆರೇಡ್‍ನಲ್ಲಿ ಭಾಗವಹಿಸಿರುವ ಬ್ರ್ಯಾಂಡನ್ ಆ್ಯಂಟನಿ ರೋಚ್, ರಚನಾ ಎನ್ ಆರ್ ಹಾಗೂ ಕೆಡೆಟ್ ವಿಕೇಶ್ ಸಹಕರಿಸಿದರು. ಬ್ಯಾಂಡ್ ತಂಡದ ನಾಯಕತ್ವವನ್ನು ಕ್ಯಾರಲ್ ಫೆರ್ನಾಂಡಿಸ್ ವಹಿಸಿದರು.

ಜಾಹೀರಾತು


ರೋವರ್ಸ್-ರೇಂಜರ್ಸ್ ಘಟಕದ ನಿರ್ದೇಶಕರಾದ ಮೀನಾಕ್ಷಿ ಕೆ, ಕಲಂದರ್ ಶರೀಫ್ ಮತ್ತು ಹರ್ಷದ್ ಇಸ್ಮಾಯಿಲ್, ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿಗಳಾದ ಮಧುಸೂದನ್ ಎನ್ ಮತ್ತು ಶಶಿಪ್ರಭಾ ಬಿ ಸಹಕರಿಸಿದರು.
ಕಾಲೇಜಿನ ರಂಗ ಕಲಾ ಸಂಘದ ಸಂಯೋಜಕ ಪ್ರಶಾಂತ್ ರೈ ಹಾಗೂ ಪದವಿ ಪೂರ್ವ ಕಾಲೇಜಿನ ಲಲಿತ ಕಲಾ ಸಂಘದ ಸಂಯೋಜಕಿ ಡಾ. ಆಶಾ ಸಾವಿತ್ರಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ ದೇಶ ಭಕ್ತಿ ಗೀತೆಗಳ ಗಾಯನ ಮತ್ತು ನೃತ್ಯ ಕಾರ್ಯಕ್ರಮಗಳು ಜರಗಿತು. ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ನ್ಯಾನ್ಸಿ ಲವೀನಾ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.