Thursday, January 23, 2025
ಬೆಂಗಳೂರುಸುದ್ದಿ

ಬೆಂಗಳೂರಲ್ಲಿ ವೃದ್ಧನನ್ನು 1 ಕಿ.ಮೀ. ದೂರ ಎಳೆದೊಯ್ದ ಬೈಕ್​ ಸವಾರ : ಪೊಲೀಸರ ಮುಂದೆ ಕ್ರೂರಿ ಆರೋಪಿ ಸಾಹಿಲ್​ ಹೇಳಿದ ಮಾತು ಕೇಳಿದ್ರೆ ಮತ್ತಷ್ಟು ಸಿಟ್ಟಾಗ್ತೀರಿ – ಕಹಳೆ ನ್ಯೂಸ್

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಇಂದು ಸಂಭವಿಸಿದ ಭೀಕರ ಘಟನೆಯ ದೃಶ್ಯ ವೈರಲ್​ ಆಗಿದ್ದು, ಈ ದೃಶ್ಯ ನೋಡಿದ್ರೆ ಎದೆ ಝಲ್​ ಅನ್ನುತ್ತೆ. ಥೂ, ಇವನೆಂಥಾ ಕ್ರೂರಿ, ಮನುಷ್ಯತ್ವ ಇಲ್ವಾ? ಎಂದು ಶಪಿಸುತ್ತಾ ಆರೋಪಿಗೆ ತಕ್ಕಶಿಕ್ಷೆ ಆಗಬೇಕು ಎಂದು ಮನದಲ್ಲೇ ಆಗ್ರಹಿಸುತ್ತೀರಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಏನಿದು ಘಟನೆ?: ಮಾಗಡಿ ಮುಖ್ಯರಸ್ತೆಯ ಟೋಲ್​ಗೇಟ್​ ಬಳಿ ಮಂಗಳವಾರ ಮಧ್ಯಾಹ್ನ ಟಾಟಾ ಸುಮೋ ಕಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ. ಕಾರು ಚಾಲಕ ಮುತ್ತಪ್ಪ(71) ಇದನ್ನು ಪ್ರಶ್ನಿಸುತ್ತಿದ್ದಂತೆ ದ್ವಿಚಕ್ರ ವಾಹನ ಸವಾರ ಸಾಹಿಲ್​(25) ಎಸ್ಕೇಪ್​ ಆಗಲು ಮುಂದಾಗಿದ್ದಾನೆ. ಈ ವೇಳೆ ದ್ವಿಚಕ್ರ ವಾಹನದ ಹಿಂಬದಿಯನ್ನ ಗಟ್ಟಯಾಗಿ ಹಿಡಿದ ಕಾರು ಚಾಲಕ, ಸಾಹಿಲ್​ಗೆ ನಿಲ್ಲುವಂತೆ ಕೂಗಿದ್ದಾರೆ. ಮಾನವೀಯತೆ ಮರೆತು ಸ್ಕೂಟರ್​ ಅನ್ನು ಸ್ಪೀಡಾಗಿ ಚಲಾಯಿಸಿಕೊಂಡು ಸವಾರ ಹೋಗಿದ್ದು, ವೃದ್ಧ ಮುತ್ತಪ್ಪರನ್ನು ಸ್ಕೂಟರ್​ನಲ್ಲಿ ಕಿಲೋ ಮೀಟರ್​ ದೂರದವರೆಗೂ ಎಳೆದೊಯ್ದಿದ್ದಾನೆ. ರಸ್ತೆಯಲ್ಲಿ ತೆರಳುತ್ತಿದ್ದ ಸಾರ್ವಜನಿಕರು ಇದನ್ನು ನೋಡಿ ಭಯಗೊಂಡಿದ್ದಾರೆ. ಹೊಸಳ್ಳಿ ಮೆಟ್ರೋ ನಿಲ್ದಾಣದ ಬಳಿ ಸಾರ್ವಜನಿಕರು ಸ್ಕೂಟರ್​ ಅನ್ನು ತಡೆದು ಕಾರು ಚಾಲಕನ ಪ್ರಾಣ ಉಳಿಸಿದ್ದಾರೆ. ಸ್ಕೂಟರ್​ನಲ್ಲಿ ಒಂದು ಕಿ.ಮೀ. ದೂರ ಎಳೆದೊಯ್ಯಲ್ಪಟ್ಟ ವೃದ್ಧ ಮುತ್ತಪ್ಪರನ್ನು ಗಾಯತ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಹಿಲ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಹೇಳಿದ್ದೇನು?: ಮನುಷ್ಯತ್ವವೇ ಇಲ್ಲದಂತೆ ಕ್ರೂರವಾಗಿ ನಡೆದುಕೊಂಡ ಸ್ಕೂಟರ್​ ಚಾಲಕ ಸಾಹಿಲ್ ನಾಯಂಡಹಳ್ಳಿ ನಿವಾಸಿ. ವಿಚಾರಣೆ ವೇಳೆ ಪೊಲೀಸರ ಬಳಿ ಈತ ಹೇಳಿದ್ದೇನು ಗೊತ್ತಾ? ‘ನಾನು ಯಾವುದೇ ರಾಂಗ್ ರೂಟ್​ನಲ್ಲಿ ಬರ್ಲಿಲ್ಲ. ಕಾರಿಗೆ ಡಿಕ್ಕಿ ಹೊಡೆದಿದ್ದು ನಿಜ, ನನ್ನ ಗಾಡಿಗೂ ಡ್ಯಾಮೇಜ್ ಆಗಿದೆ. ನನಗೆ ಹೊಡೆಯುತ್ತಾರೆ ಎಂಬ ಭೀತಿಯಿಂದ ನಾನು ಸ್ಕೂಟರ್ ಸಮೇತ ತಪ್ಪಿಸಿಕೊಳ್ಳುತ್ತಿದ್ದೆ. ಅವ್ರು ನನ್ನ ಗಾಡಿಯನ್ನ ಹಿಡಿದುಕೊಂಡುಬಿಟ್ರು, ಅಲ್ಲಿರೋರು ನನಗೆ ಹೊಡೆಯೋಕೆ ಬಂದ್ರು. ನಾನು ಗಾಡಿ ಮೂವ್​ ಮಾಡಿದೆ. ಅವ್ರು ಕೈ ಬಿಡ್ತಾರೆ ಅನ್ಕೊಂಡೆ ಬಿಟ್ಟಿಲ್ಲ. ಅದ್ಕೆ ಸ್ವಲ್ಪ ಸ್ಪೀಡಾಗಿ ಹೋದೆ. ಆದ್ರೂ ಅವ್ರು ಬಿಟ್ಟಿಲ್ಲ, ಗಾಡಿಯನ್ನ ಗಟ್ಟಿಯಾಗಿ ಹಿಡಿದುಕೊಂಡು ಬಂದ್ಬಿಟ್ರು. ನಾನು ಭಯದಿಂದ ಆ ರೀತಿ ಮಾಡಿದ್ದೇನೆ’ ಎಂದಿದ್ದಾನೆ.

ಅಬ್ಬಾ, ಜನ ಹೊಡೀತಾರೆ ಅಂತ ಇನ್ನೊಬ್ಬರ ಪ್ರಾಣವನ್ನ ಬಲಿ ಕೊಡ್ತಾರಾ? ಅದೂ ಒಂದೂವರೆ ಕಿ.ಮಿ.ದೂರದವರೆಗೂ ನಡುರಸ್ತೆಯಲ್ಲಿ ಅಮಾನವೀಯವಾಗಿ ವೃದ್ಧರೊಬ್ಬರ ಪ್ರಾಣವನ್ನೂ ಲೆಕ್ಕಿಸದೆ ಕ್ರೂರತ್ವದಿಂದ ವರ್ತಿಸ್ತಾರಾ? ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಆರೋಪಿ ಸಾಹಿಲ್​ ವಿರುದ್ಧ ವಿಜಯನಗರ ಠಾಣೆ ಮತ್ತು ಗೋವಿಂದರಾಜನಗರ ಪೊಲೀಸ್​ ಠಾಣೆಯಲ್ಲಿ ಪ್ರತ್ಯೇಕ ಕೇಸ್​ ದಾಖಲಾಗಿದೆ.

ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ವಿ.ಸೋಮಣ್ಣ, ಮುತ್ತಪ್ಪರ ಯೋಗಕ್ಷೇಮ ವಿಚಾರಿಸಿದರು. ಆತನಿಗೆ ಮಾನವೀಯತೆ ಇದ್ದಿದ್ದರೆ ಈ ರೀತಿ ಮಾಡುತ್ತಿರಲಿಲ್ಲ. ಕಿಲೋ ಮೀಟರ್ ದೂರ ಎಳೆದೊಯ್ಯುತ್ತಿರಲಿಲ್ಲ. ಆರೋಪಿ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ತೀವಿ. ಮುತ್ತಪ್ಪರ ಚಿಕಿತ್ಸಾ ವೆಚ್ಚವನ್ನ ಸರ್ಕಾರವೇ ಭರಿಸಲಿದೆ ಎಂದು ಸಚಿವರು ಹೇಳಿದರು.