ವಿಟ್ಲ ಜಾತ್ರೋತ್ಸವದಲ್ಲಿ ಫ್ಯಾನ್ಸಿ ಅಂಗಡಿ ವ್ಯಾಪಾರಿ ಮೇಲೆ ಹಲ್ಲೆ ; ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಪುಂಡರು –ಕಹಳೆ ನ್ಯೂಸ್
ಶ್ರೀಪಂಚಲಿಗೇಶ್ವರ ದೇವಸ್ಥಾನದ ಜಾತ್ರೆಯ ನಿಮಿತ್ತ ದೇವಸ್ಥಾನದ ಆವರಣದಲ್ಲಿ ಫ್ಯಾನ್ಸಿ ಮಳಿಗೆ ಇಟ್ಟು ವ್ಯಾಪಾರ ಮಾಡುತ್ತಿದ್ದ ಸುರೇಶ್ ದಾಸ್ ಎಂಬವರ ಮೇಲೆ ಯುವಕರ ತಂಡ ಹಲ್ಲೆ ನಡೆಸಿದ ಘಟನೆ ವಿಟ್ಲದಲ್ಲಿ ನಡೆದಿದೆ.
ವ್ಯಾಪಾರಿ ಸುರೇಶ್ ದೇವಸ್ಥಾನದ ಅನುಮತಿ ಪಡೆದು, ದೇವಸ್ಥಾನದ ಆವರಣದಲ್ಲಿ ವ್ಯಾಪಾರ ನಡೆಸುತ್ತಿದ್ದರು. ವ್ಯಾಪಾರ ಮುಗಿಸಿ ಮಳಿಗೆಯನ್ನು ಮುಚ್ಚುವ ಸಮಯದಲ್ಲಿ ಯುವಕರ ತಂಡವೊಂದು ಆಗಮಿಸಿ ‘ಅಂಗಡಿ ಯಾಕೆ ಬಂದ್ ಮಾಡ್ತಾ ಇದ್ದಿರಾ..?’ ಎಂದು ತಕರಾರು ಮಾಡಿದ್ದಾರೆ. ಅದಲ್ಲದೇ ‘ಬೇವರ್ಸೀ ,ರಂಡೆ ಮಗ’ ಎಂದು ಅವಾಚ್ಯ ಶಬ್ದಗಳಿಂದ ಬೈದುದ್ದಲ್ಲದೇ, ಮೈ ಮೇಲೆ ಕೈಹಾಕಿ ‘ನಾನು ಯಾರೂ ಗೊತ್ತಾ?’ ಎಂದು ಹಲ್ಲೆ ನಡೆಸಿದ್ದಾರೆ.
ಗಣೇಶ್ ಕಡಂಬು, ಮಂಜುನಾಥ್ ಮತ್ತು ಇನ್ನು ನಾಲ್ಕು ಯುವಕರು ಹಲ್ಲೆ ನಡೆಸಿದವರು ಎಂದು ತಿಳಿದು ಬಂದಿದೆ. ಹಲ್ಲೆ ನಡೆಸಿದವರ ಪೈಕಿ ಮಂಜುನಾಥ್ ಎಂಬಾತ ವ್ಯಾಪಾರಿ ಸುರೇಶ್‌ಗೆ ಹಿಗ್ಗಾಮುಗ್ಗಾ ಹೊಡೆದಿದ್ದು, ಇನ್ನಿಬ್ಬರು ಹೊಟ್ಟೆಗೆ ಬಲವಾಗಿ ಗುದ್ದಿದ್ದಾರೆ. ಅಂಗಡಿಯಲ್ಲಿದ್ದ ಸುರೇಶ್ ಅವರ ಹೆಂಡತಿ ಈ ಗಲಾಟೆಯನ್ನ ನಿಲ್ಲಿಸಲು ಯತ್ನಿಸಿದಾಗ, ಅವರ ಮೈ ಮೇಲೆ ಕೈ ಹಾಕಿ ಸೀರೆ ಎಳೆದು ಮಾನಭಂಗಕ್ಕೆ ಯತ್ನಿಸಿದ್ದಾರೆ. ಗಲಾಟೆಯ ಗದ್ದಲವನ್ನು ಕೇಳಿ ಸಾರ್ವಜನಿಕರು ಸ್ಧಳಕ್ಕೆ ಬಂದಾಗ ವ್ಯಾಪಾರಿ ಸುರೇಶ್‌ನನ್ನು ಕೊಲ್ಲುವುದಾಗಿ ಆರೋಪಿಗಳು ಜೀವ ಬೆದರಿಕೆ ಹಾಕಿದ್ದಾರೆ.
ಇದೀಗ ಹಲ್ಲೆಗೊಳಗಾದವರು ಪೋಲಿಸರಿಗೆ ದೂರು ನೀಡಿದ್ದು, ವಿಟ್ಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.