Monday, November 25, 2024
ದಕ್ಷಿಣ ಕನ್ನಡರಾಷ್ಟ್ರೀಯಸುದ್ದಿ

ಗಣರಾಜ್ಯೋತ್ಸವ ಪರೇಡ್‌ನಲ್ಲಿ ನೌಕಾಪಡೆ ತಂಡಕ್ಕೆ ಮಂಗಳೂರಿನ ಕುವರಿ, ಲೆಫ್ಟಿನೆಂಟ್ ಕಮಾಂಡರ್ ದಿಶಾ ಅಮೃತ್ ನೇತೃತ್ವ..! – ಕಹಳೆ ನ್ಯೂಸ್

ಮಂಗಳೂರು, ಜ 21 : ಭಾರತವು ತನ್ನ 74 ನೇ ಗಣರಾಜ್ಯೋತ್ಸವವನ್ನು ಜನವರಿ 26 ರಂದು ಆಚರಿಸಲು ಸಜ್ಜಾಗಿದ್ದು, ವಿಶೇಷವೆಂದರೆ ಈ ವರ್ಷ, ಕರ್ತವ್ಯ ಪಥದಲ್ಲಿ ಭಾರತೀಯ ನೌಕಾಪಡೆಯಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿರುವ ಮಂಗಳೂರಿನ ಕುವರಿ ದಿಶಾ ಅಮೃತ್ ನೌಕಾಪಡೆ ತಂಡವನ್ನು ಮುನ್ನಡೆಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ತುಕಡಿಯು 144 ಯುವ ನಾವಿಕರನ್ನು ಒಳಗೊಂಡಿದ್ದು, ನಾರಿ ಶಕ್ತಿ ಸ್ತಬ್ದಚಿತ್ರ ಇರಲಿದೆ. ಇದರಲ್ಲಿ ಮೂವರು ಮಹಿಳಾ ಅಧಿಕಾರಿಗಳು ಮತ್ತು ಐವರು ಪುರುಷ ಅಗ್ನಿವೀರ್‌ಗಳು ಭಾಗವಹಿಸಲಿದ್ದಾರೆ. ಅಮೃತ್ ಜೊತೆಗೆ, ಮತ್ತೊಬ್ಬ ಮಹಿಳಾ ಅಧಿಕಾರಿ, ಸಬ್ ಲೆಫ್ಟಿನೆಂಟ್ ವಲ್ಲಿ ಮೀನಾ ಎಸ್ ಕೂಡಾ ಜೊತೆಯಲ್ಲಿರುವರು.

ದಿಶಾ ಅಮೃತ್ ಯಾರು..?

29 ವರ್ಷದ ಲೆಫ್ಟಿನೆಂಟ್ ಕಮಾಂಡರ್ ನೌಕಾ ವಾಯು ಕಾರ್ಯಾಚರಣೆಯ ಅಧಿಕಾರಿಯಾಗಿದ್ದು, ಅಂಡಮಾನ ಮತ್ತು ನಿಕೋಬಾರ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಮೃತ್ 2008 ರಲ್ಲಿ ನ್ಯಾಷನಲ್ ಕೆಡೆಟ್ ಕಾರ್ಪ್ಸ್ ನ ಗಣರಾಜ್ಯೋತ್ಸವ ತಂಡದ ಭಾಗವಾಗಿದ್ದರು. ದಿಶಾ ಅವರು ಮಂಗಳೂರಿನ ಬೋಳೂರು ಸಮೀಪದ ತಿಲಕ್‌ ನಗರದ ಅಮೃತ್‌ ಕುಮಾರ್‌ ಮತ್ತು ಲೀಲಾ ಅಮೃತ್‌ ದಂಪತಿಯ ಪುತ್ರಿ. ಅವರಿಗೆ ನೌಕಾ ಪಡೆಯ ಅಧಿಕಾರಿಯಾಗಬೇಕು ಎಂಬ ಆಸೆ ಬಾಲ್ಯದಲ್ಲೇ ಇತ್ತು. ದಿಶಾ ಅವರು ಪ್ರಾಥಮಿಕ ಶಿಕ್ಷಣದಿಂದ ಪಿಯುಸಿವರೆಗೆ ಕೆನರಾ ಶಿಕ್ಷಣ ಸಂಸ್ಥೆಯಲ್ಲಿ ಕಲಿತರು. ನೌಕಾಪಡೆ ಸೇರಬೇಕೆಂಬ ಹಂಬಲ ಈಡೇರಿಸಿಕೊಳ್ಳಲು ಹೈಸ್ಕೂಲ್‌ ನಲ್ಲಿದ್ದಾಗಲೇ ಎನ್‌ಸಿಸಿ ಗೆ ಸೇರಿದ್ದರು. ಆಗ ಕೆನರಾ ಕಾಲೇಜಿನಲ್ಲಿ ಎನ್‌ಸಿಸಿ ಇರಲಿಲ್ಲವಾದ ಕಾರಣ ಸೈಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿದ್ದರು. ಬಳಿಕ ಬೆಂಗಳೂರಿನ ಬಿಎಂಎಸ್‌ ಶಿಕ್ಷಣ ಸಂಸ್ಥೆಯಲ್ಲಿ ಬಿಇ ಕಂಪ್ಯೂಟರ್‌ ಸೈನ್ಸ್‌ ಕಲಿಯುವಾಗಲೇ ನೌಕಾಪಡೆಯ ವಿವಿಧ ಅರ್ಹತಾ ಪರೀಕ್ಷೆಗಳನ್ನು ಎದುರಿಸಿದ್ದರು. ಕೆಲವು ಬಾರಿ ಇದರಲ್ಲಿ ವಿಫಲರಾದರೂ ಛಲ ಬಿಡದೇ ಭಾರತೀಯ ನೌಕಾಪಡೆಯ ವಿಶೇಷ ಅಧಿಕಾರಿಯಾಗಿ ನೇಮಕಗೊಂಡರು.

2016 ರಲ್ಲಿ ನೌಕಾಪಡೆಗೆ ಸೇರಿದ್ದು, 2017 ರಲ್ಲಿ ತನ್ನ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಈ ವೇಳೆ ಡಾರ್ನಿಯರ್ ಏರ್ ಕ್ರಾಫ್ಟ್ ಅನ್ನು ಚಲಾಯಿಸುತ್ತಿದ್ದರು.”ನನ್ನ ತಂದೆ ಕೂಡ ಸೇನೆಯ ಭಾಗವಾಗಿರಲು ಬಯಸಿದ್ದರು ಆದರೆ ಅದು ಸಾಧ್ಯವಾಗಿರಲಿಲ್ಲ. ಆದರೆ ನಾನು ಇಂದು ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವುದಕ್ಕೆ ಹೆಮ್ಮೆಪಡುತ್ತೇನೆ ಮತ್ತು ನೌಕಾಪಡೆಗೆ ಪೂರ್ಣ ಉತ್ಸಾಹ ಮತ್ತು ಸಮರ್ಪಣೆಯೊಂದಿಗೆ ಸೇವೆ ಸಲ್ಲಿಸುತ್ತೇನೆ” ಎಂದು ದಿಶಾ ಹೇಳಿಕೊಂಡಿದ್ದಾರೆ.