Wednesday, January 22, 2025
ದಕ್ಷಿಣ ಕನ್ನಡಪುತ್ತೂರುರಾಜಕೀಯರಾಜ್ಯಸುದ್ದಿ

” ಆತ್ಮೀಯರು, ಹಿತೈಷಿಗಳು ಮತ್ತು ಅಸಂಖ್ಯಾತ ಅಭಿಮಾನಿಗಳ ಜೊತೆಗೆ ನಾನು ಕಾಂಗ್ರೆಸ್ ಸೇರುತ್ತಿದ್ದೇನೆ.. ” ಫೇಸ್‌ಬುಕ್ ಪೋಸ್ಟ್‌..! ; ಉದ್ಯಮಿ ಅಶೋಕ್ ಕುಮಾರ್ ರೈ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನೇತೃತ್ವದಲ್ಲಿ ಇಂದು ಕಾಂಗ್ರೆಸ್ ಸೇರ್ಪಡೆ  – ಕಹಳೆ ನ್ಯೂಸ್

ಮಂಗಳೂರು, ಜನವರಿ 22; ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ, ಉದ್ಯಮಿ ಅಶೋಕ್ ಕುಮಾರ್ ರೈ ಭಾನುವಾರ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಪುತ್ತೂರಿನ ಇವರು ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ ಆಪ್ತರಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರಿನಲ್ಲಿ ಭಾನುವಾರ ಮಧ್ಯಾಹ್ನ ನಡೆಯುವ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಅಶೋಕ್ ಕುಮಾರ್ ರೈ ಪಕ್ಷ ಸೇರಲಿದ್ದಾರೆ. ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಅವರು, ಆತ್ಮೀಯರು, ಹಿತೈಷಿಗಳು ಮತ್ತು ಅಸಂಖ್ಯಾತ ಅಭಿಮಾನಿಗಳ ಜೊತೆಗೆ ನಾನು ಕಾಂಗ್ರೆಸ್ ಸೇರುತ್ತಿದ್ದೇನೆ ಎಂದು ಪೋಸ್ಟ್ ಹಾಕಿದ್ದಾರೆ.

ಹಲವು ದಿನಗಳಿಂದ ಅಶೋಕ್ ಕುಮಾರ್ ರೈ ಪಕ್ಷ ಬದಲಾವಣೆ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈಗ ಅಧಿಕೃತವಾಗಿ ಅವರು ಕಾಂಗ್ರೆಸ್ ಸೇರುತ್ತಿದ್ದಾರೆ. ಅಶೋಕ್ ಕುಮಾರ್ ರೈ ಜೊತೆಗೆ ಪುತ್ತೂರಿನಿಂದ ಹಲವು ಬೆಂಬಲಿಗರು ಕಾರಿನಲ್ಲಿ ಮಂಗಳೂರಿಗೆ ತೆರಳುತ್ತಿದ್ದು, ಅಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ.

ಉದ್ಯಮಿಯಾಗಿರುವ ಅಶೋಕ್ ಕುಮಾರ್ ರೈ ರೈ ಎಸ್ಟೇಟ್‌ ಎಜ್ಯುಕೇಷನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ಆರಂಭಿಸಿದ್ದಾರೆ. ಗ್ರಾಮೀಣ ಭಾಗದ ಅರ್ಹರನ್ನು ಆಯ್ಕೆ ಮಾಡಿಕೊಂಡು ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಹಲವು ದೇವಾಲಯಗಳಿಗೆ ಸಹ ಸಹಾಯ ಮಾಡಿದ್ದಾರೆ. ಈಗ ಸಕ್ರಿಯ ರಾಜಕಾರಣಕ್ಕೆ ಬರುತ್ತಿದ್ದಾರೆ.

ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆ

ಮಂಗಳೂರಿನಲ್ಲಿ ಭಾನುವಾರ ಮಧ್ಯಾಹ್ನ ಕರ್ನಾಟಕ ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಯು. ಟಿ. ಖಾದರ್ ಸೇರಿದಂತೆ ಹಲವು ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಶೋಕ್ ಕುಮಾರ್ ರೈ ಈ ಸಮಾವೇಶದಲ್ಲಿ ಬೆಂಬಲಿಗರು, ಹಿತೈಷಿಗಳ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಲಿದ್ದಾರೆ. ಈ ಕುರಿತು ಈಗಾಗಲೇ ಫೇಸ್‌ಬುಕ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ಪುತ್ತೂರು ಕ್ಷೇತ್ರದ ಹಾಲಿ ಬಿಜೆಪಿಯ ವಶದಲ್ಲಿದೆ. 2023ರ ಚುನಾವಣೆಯಲ್ಲಿ ಅಶೋಕ್ ಕುಮಾರ್ ರೈಗೆ ಟಿಕೆಟ್ ಸಿಗಲಿದೆಯೇ? ಕಾದು ನೋಡಬೇಕಿದೆ.

ಏಕಾಗಿ ರಾಜಕೀಯ ಬೇಕು ಎಂದು ವಿವರಣೆ

ಅಶೋಕ್ ಕುಮಾರ್ ರೈ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ರಾಜಕೀಯ ಏಕೆ ಬೇಕು? ಎಂದು ಭಾನುವಾರ ಬೆಳಗ್ಗೆ ಪೋಸ್ಟ್‌ ಹಾಕಿದ್ದಾರೆ. “ನಾನು ಉದ್ಯಮಿ ಅಶೋಕ್ ರೈ ಆಗಿ ಒಂದಷ್ಟು ಆರ್ಥಿಕ ಸಹಾಯ ಮಾಡಬಹುದು. ಅವರವರ ವೈಯುಕ್ತಿಕ ಕಷ್ಟಗಳಿಗೆ ನೆರವಾಗಬಹುದು. ಆದರೆ ಸಾಮುದಾಯಿಕವಾಗಿ ಒಂದು ಗ್ರಾಮದ ಜನರ ಸಮಸ್ಯೆಗಳಿಗೆ ಸ್ಪಂದಿಸಲು ನನಗೆ ಸಾಧ್ಯವಿಲ್ಲ. ನಾನು ಸಮಾಜಸೇವೆಗೆಂದೇ ಮುಡಿಪಾಗಿಟ್ಟಿರುವ ಹಣದಿಂದ ಅವರ ಕಷ್ಟ, ಸಮಸ್ಯೆ ಬಗೆಹರಿಯುವುದಿಲ್ಲ ಎಂಬುದು ಸ್ಪಷ್ಟವಾಗಿ ಅರ್ಥವಾಯಿತು. ಅದಕ್ಕಾಗಿ ರಾಜಕೀಯ ಶಕ್ತಿ ಬೇಕೇ ಬೇಕು ಅನ್ನೋ ಸತ್ಯದ ಅರಿವೂ ಕೂಡಾ ಆಯಿತು. ರಾಜಕಾರಣ ಅಂದರೇನು? ಎಂಬುದು ಆಗ ನನ್ನ ಮನಸ್ಸಿಗೆ ಕಾಡಿದ ಪ್ರಶ್ನೆ. ನನಗೆ ಆವತ್ತಿನ ದಿನ ಎಲ್ಲಾ ಪಕ್ಷಗಳಲ್ಲೂ ಸ್ನೇಹಿತರಿದ್ದರು. ದೊಡ್ಡ ದೊಡ್ಡ ರಾಜಕಾರಣಿಗಳ ಸ್ನೇಹವೇನೋ ನನಗಿತ್ತು, ಆದರೆ ನನ್ನ ಮತ್ತು ಅವರ ಸಂಬಂಧ ರಾಜಕೀಯವಾದುದಲ್ಲವಲ್ಲ” ಎಂದು ಹೇಳಿದ್ದಾರೆ.

ರಾಜಕೀಯ ಕೆಲಸಗಳನ್ನು ಮಾಡಿಸಿಕೊಳ್ಳುವುದು

ಅಶೋಕ್ ಕುಮಾರ್ ರೈ ಅವರು ತಮ್ಮ ಪೋಸ್ಟ್‌ನಲ್ಲಿ, “ಇದಕ್ಕೇನು ಪರಿಹಾರ ಅಂದರೆ ನಾನೂ ಕೂಡಾ ಸಕ್ರಿಯ ರಾಜಕಾರಣಕ್ಕೆ ಬರುವುದು. ಆದರೆ ಆ ನಿರ್ಧಾರ ಏಕಾಏಕಿ ತೆಗೆದುಕೊಳ್ಳಲು ನನಗಾಗಲೇ ಇಲ್ಲ. ನಾನು ಸಕ್ರಿಯ ರಾಜಕಾರಣಕ್ಕೆ ಬರುವುದು ಸಾಧ್ಯವೇ ಎಂಬ ತೊಳಲಾಟದಲ್ಲೇ ಸುಮಾರು ಐದಾರು ವರ್ಷಗಳು ಕಳೆದವು. ಆದರೆ ಪ್ರತಿವಾರವೂ ನಮ್ಮ ಟ್ರಸ್ಟ್‌ಗೆ ಬರುತ್ತಿದ್ದ ಜನರ ಅಹವಾಲುಗಳನ್ನು ನೋಡಿದಾಗ ನಾನು ರಾಜಕಾರಣಕ್ಕೆ ಬರಲೇ ಬೇಕು ಅಂತ ಬಲವಾಗಿ ಅನ್ನಿಸುತ್ತಿತ್ತು. ಯಾವುದೋ ಗ್ರಾಮದ ಒಬ್ಬ ಬಡ ಕೂಲಿಕಾರನ ಮನೆಯ ದುರಸ್ತಿಗೆ ನಾನು ಕಿಂಚಿತ್ ಹಣದ ಸಹಾಯ ಮಾಡಬಹುದೇ ಹೊರತು ಅವನ ಜಾಗಕ್ಕೆ ಹಕ್ಕುಪತ್ರ ದೊರಕಿಸಿಕೊಡಲು, ಸರಕಾರದಿಂದ ಬರುವ ಯಾವುದಾದರೂ ಸವಲತ್ತುಗಳನ್ನು ತೆಗೆಸಿಕೊಡಲು ನನಗೆ ಕಷ್ಟವಿತ್ತು” ಎಂದು ಹೇಳಿದ್ದಾರೆ.

ಹಲವಾರು ವರ್ಷದ ದ್ವಂದ್ವಕ್ಕೆ ತೆರೆ ಬಿದ್ದಿದೆ

ಅಶೋಕ್ ಕುಮಾರ್ ರೈ ತಮ್ಮ ಪೋಸ್ಟ್‌ನಲ್ಲಿ, “ಈಗ ನನ್ನ ಹಲವಾರು ವರ್ಷಗಳ ಈ ದ್ವಂದ್ವಕ್ಕೆ ತೆರೆ ಬಿದ್ದಿದೆ. ನಾನು ಕೊನೆಗೂ ಸಕ್ರಿಯ ರಾಜಕಾರಣಕ್ಕೆ ಸೇರಲು ನಿರ್ಧರಿಸಿ ಬಿಟ್ಟಿದ್ದೇನೆ. ಆದರೆ ಈ ತೀರ್ಮಾನ ತೆಗೆದುಕೊಳ್ಳಲಿಕ್ಕೂ ಮುಂಚೆ ಹತ್ತಾರು ವರ್ಷಗಳಿಂದಲೂ ನನಗೆ ಆತ್ಮೀಯರಾಗಿದ್ದವರ, ನನ್ನ ನೈಜ ಹಿತೈಷಿಗಳಾಗಿದ್ದವರ ಅಭಿಪ್ರಾಯ ಪಡೆಯಲು ಮರೆಯಲಿಲ್ಲ. ಇವರ ಜೊತೆಗೆ ನನಗೆ ಪುತ್ತೂರಿನ ಗ್ರಾಮೀಣ ಪ್ರದೇಶದಲ್ಲಿರುವ ಅಸಂಖ್ಯಾತ ಅಭಿಮಾನಿಗಳ ಅಭಿಪ್ರಾಯವನ್ನೂ ಸಾಧ್ಯವಾದಷ್ಟು ಪಡೆಯಲು ಶ್ರಮಿಸಿದ್ದೇನೆ. ಎಲ್ಲರ ಒಕ್ಕೊರಲ ಅಭಿಪ್ರಾಯದಂತೆ ನಾನು ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಲು ನಿರ್ಧರಿಸಿದ್ದೇನೆ. ಹಾಗಾಗಿ ನನ್ನ ಎಲ್ಲಾ ಆತ್ಮೀಯರ, ಹಿತೈಷಿಗಳ, ಅಭಿಮಾನಿಗಳ ಒತ್ತಾಸೆಯೊಂದಿಗೆ ನಾನು ಕಾಂಗ್ರೆಸ್ ಪಕ್ಷಕ್ಕೆ ವಿದ್ಯುಕ್ತವಾಗಿ ಸೇರ್ಪಡೆಯಾಗುತ್ತಿದ್ದೇನೆ. ಅಂದು ನನ್ನೊಂದಿಗೆ ನನ್ನ ಎಲ್ಲಾ ಆತ್ಮೀಯರೂ, ಹಿತೈಷಿಗಳೂ, ಅಭಿಮಾನಿಗಳೂ ಕೂಡಾ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ. ಈ ಹಿಂದೆ ನನಗೆ ನೀವೆಲ್ಲರೂ ತೋರಿಸಿದ ಪ್ರೀತಿ, ಅಭಿಮಾನಗಳನ್ನೇ ಇನ್ನು ಮುಂದೆಯೂ ತೋರಿಸುತ್ತೀರಿ ಅನ್ನುವ ಧೃಢ ಭರವಸೆ, ವಿಶ್ವಾಸ ನನಗಿದೆ” ಎಂದು ಹೇಳಿದ್ದಾರೆ.