ಮೂಡುಬಿದಿರೆ : ಭಾರತ ಸರಕಾರ ಕ್ರೀಡಾ ಮತ್ತು ಯುವಜನ ಇಲಾಖೆ, ನೆಹರು ಯುವ ಕೇಂದ್ರ ಮಂಗಳೂರು, ನೇತಾಜಿ ಯುವ ಬ್ರಿಗೇಡ್ ಮೂಡುಬಿದಿರೆ ಮತ್ತು ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ನೇತಾಜಿ ಸುಭಾಶ್ ಚ0ದ್ರ ಬೋಸರ ಜನ್ಮ ದಿನಾಚರಣೆಯ ಅಂಗವಾಗಿ ಪರಾಕ್ರಮ ದಿವಸ ಆಚರಿಸಲಾಯಿತು.
ಕಾರ್ಯಕ್ರಮವನ್ನು ದೀಪವನ್ನು ಬೆಳಗಿಸುವುದರ ಮೂಲದ ಉದ್ಘಾಟಿಸಿದ ಮಂಗಳೂರಿನ ಖ್ಯಾತ ನ್ಯಾಯವಾದಿಗಳಾದ ಎಸ್ ಪಿ ಚೆಂಗಪ್ಪ ಮಾತನಾಡುತ್ತಾ ಸುಭಾಷ್ ಚಂದ್ರಬೋಸ್‍ರ ಬಾಲ್ಯ ಹಾಗೂ ಯೌವನದ ದಿನಗಳನ್ನು ವಿವರಿಸುತ್ತಾ, ಬಾಲ್ಯದಲ್ಲಿ ಅವರನ್ನು ಬ್ರಿಟೀಷ್ ಸಂಸ್ಕೃತಿಯ ಪ್ರಭಾವವಿರುವ ವಿದ್ಯಾ ಸಂಸ್ಥೆಗೆ ಕಳುಹಿಸಲಾಗಿತ್ತು. ತದನಂತರ ಕಾಲೇಜು ದಿನಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಆಚರಿಸುವ ವಿದ್ಯಾ ಸಂಸ್ಥೆಗೆ ತೆರಳಿದರು. ಸಾಧಾರಣ ವಿದ್ಯಾರ್ಥಿಯಾಗಿರುವ ಬೋಸರು ತಂದೆಯ ಒತ್ತಾಯದ ಮೇರೆಗೆ ಇಂಗ್ಲೆಂಡಿಗೆ ಹೋಗಿ ಐಸಿಎಸ್ ಪರೀಕ್ಷೆಯನ್ನು ಬರೆದು ಆ ಕಾಲದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದ್ದರು.
ಭಾರತಕ್ಕಾಗಿ ಕೆಚ್ಚೆದೆಯಿಂದ ಹೋರಾಟ ಮಾಡಿ ಲಕ್ಷಾಂತರ ಭಾರತೀಯರಿಗೆ ಪ್ರೇರಣೆಯಾಗಿದ್ದ ಅವರು ಸ್ವಾಮಿ ವಿವೇಕಾನಂದರ ಬದುಕಿನಿಂದ ಸ್ಫೂರ್ತಿ ಪಡೆದಿದ್ದರು. ದೈಹಿಕ ಬಲಕ್ಕೆ ಮನೋದಾರ್ಢ್ಯದ ಬದುಕು ಅತ್ಯವಶ್ಯ. ತನ್ಮೂಲಕ ಸ್ವತಂತ್ರ ಭಾರತ ನಿರ್ಮಾಣದ ಕನಸನ್ನು ಕಂಡವರು ನೇತಾಜಿಯವರುಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಡುತ್ತಾ, ನಮ್ಮ ಸಂಸ್ಕೃತಿ ನಮ್ಮ ಪರಂಪರೆಯನ್ನು ನಾವು ಮರೆಯಬಾರದು. ಅನಾದಿ ಕಾಲದಿಂದಲೂ ತಮ್ಮ ಜ್ಞಾನ ದಾಹವನ್ನು ತಣಿಸಲು ಭಾರತೀಯ ವಿಶ್ವವಿದ್ಯಾನಿಲಯಗಳಿಗೆ ವಿದೇಶಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಈ ವೈಭವದ ಹಿನ್ನೆಲೆಯನ್ನು ಮನಗಂಡು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಹೊಂದಬೇಕು ಎಂದರು.
ಮೂಡುಬಿದಿರೆಯ ನೇತಾಜಿ ಯುವ ಬ್ರಿಗೇಡ್ ನ ಸಂಚಾಲಕ ರಾಹುಲ್ ಕುಲಾಲ್, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಶಿವಪ್ರಸಾದ ಭಟ್ ಉಪಸ್ಥಿತರಿದ್ದರು. ರಾಷ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ತೇಜಸ್ವೀ ಭಟ್ ಸ್ವಾಗತಿಸಿದರು.
ಪದವಿಪೂರ್ವ ಕಾಲೇಜಿನ ಪ್ರಾ0ಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು. ವಿದ್ಯಾರ್ಥಿನಿ ರೋಚನಾ ಮಲ್ಯ ಸುಭಾಷ್ ಚಂದ್ರ ಬೋಸರ ಬಗ್ಗೆ ಮಾತನಾಡಿದರು. ಡಾ. ವಾದಿರಾಜ ಕಲ್ಲೂರಾಯ ನಿರೂಪಿಸಿದರು.