Friday, September 20, 2024
ಸುದ್ದಿ

ಸಂಸ್ಕೃತ ಮರಣವಿಲ್ಲದ ಭಾಷೆ ಸಂಸ್ಕೃತೋತ್ಸವದಲ್ಲಿ ರಾಘವೇಶ್ವರ ಶ್ರೀ ಅಭಿಮತ – ಕಹಳೆ ನ್ಯೂಸ್

* ಸಂಸ್ಕೃತದಲ್ಲಿ ಆಶೀರ್ವಚನವನ್ನು ಅನುಗ್ರಹಿಸಿದ ಪೂಜ್ಯ ಶ್ರೀಗಳು
* ಸಂಸ್ಕೃತ ಭವನ” ನಿರ್ಮಾಣಕ್ಕೆ ಶ್ರೀಮಠದಿಂದ ಆಶೀರ್ವಾದ ಪೂರ್ವಕ ಮೂಲಧನ.
* ಶಾಸಕ ರವಿ ಸುಬ್ರಹ್ಮಣ್ಯ ಅವರಿಂದ ಕಾರ್ಯಕ್ರಮವನ್ನು ಉದ್ಘಾಟನೆ.

ಸಂಸ್ಕೃತ ಭಾಷೆ ಅಮರ ಭಾಷೆಯಾಗಿದ್ದು, ಅಮರವಾದ ಈ ಭಾಷೆಗೆ ಮರಣವಿರಲು ಸಾಧ್ಯವೇ ಇಲ್ಲ. ಸಂಸ್ಕೃತದ ಅಭಿವೃದ್ಧಿಗೆ ತೊಡಗಿಸಿಕೊಂಡಿರುವ ಈ ಸಂಘಟನೆಯನ್ನು ನೋಡಿದಾಗ ಅದು ಮತ್ತಷ್ಟು ದೃಢವಾಗಿದೆ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು

ಬೆಂಗಳೂರಿನ ಎನ್ ಆರ್ ಕಾಲೋನಿಯ ರಾಮಮಂದಿರ ಸಭಾಂಗಣದಲ್ಲಿ ‘ಸಮ್ಯಕ್’ ಸಂಸ್ಥೆ ಆಯೋಜಿಸಿದ್ದ “ಸಂಸ್ಕೃತೋತ್ಸವ ಹಾಗೂ ಪ್ರತಿಭಾ ಪುರಸ್ಕಾರ” ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯವಹಿಸಿ ಸಂಸ್ಕೃತದಲ್ಲಿ ಆಶೀರ್ವಚನವನ್ನು ಅನುಗ್ರಹಿಸಿದ ಪೂಜ್ಯ ಶ್ರೀಗಳು, ನಾಡಿನ ಎಲ್ಲೆಡೆ ಸಂಸ್ಕೃತ ಕಣ್ಮರೆಯಾಗುತ್ತಿದೆ, ಆದರೆ ಇಲ್ಲಿ ಸಂಸ್ಕೃತದ ವಿರಾಟ್ ದರ್ಶನವಾಗುತ್ತಿರುವುದು ಸಂತಸದ ವಿಚಾರ. ಸಂಸ್ಕೃತ ಭಾಷೆ ಎಲ್ಲಾ ಭಾಷೆಗಳ ಮೂಲ ಭಾಷೆಯಾಗಿದ್ದು, ಉದಾಹರಣೆಗೆ ಕನ್ನಡದಲ್ಲಿ ಬಳಸುವ ಬಹುತೇಕ ಶಬ್ದ ಸಂಸ್ಕೃದವೇ ಆಗಿವೆ ಎಂದು ಅಭಿಪ್ರಾಯಪಟ್ಟರು.

ಸಂಸ್ಕೃತದ ಉಳಿವಿಗೆ ಶ್ರೀಮಠ ಬದ್ಧವಾಗಿದೆ: ‘ಸಮ್ಯಕ್’ ಸಂಸ್ಥೆಯ ಕಾರ್ಯಯೋಜನೆಗಳಿಗೆ ಶುಭಾಶೀರ್ವಾದ ಮಾಡಿದ ಪೂಜ್ಯ ಶ್ರೀಗಳು ; ಬೆಂಗಳೂರಿನಲ್ಲಿ ನಿರ್ಮಾಣವಾಗಲಿರುವ “ಸಂಸ್ಕೃತ ಭವನ” ಕಟ್ಟಡದ ನಿರ್ಮಾಣಕ್ಕೆ ಒಂದು ಲಕ್ಷ ರೂಪಾಯಿಗಳನ್ನು ಮೂಲಧನವಾಗಿ ಹಾಗೂ ಪ್ರತಿವರ್ಷ ನಡೆಯುವ ಸಂಸ್ಕೃತ ಪ್ರತಿಭಾ ಪುರಸ್ಕಾರದ 10 ಪುರಸ್ಕಾರಗಳನ್ನು ಶ್ರೀಮಠ ಆಶೀರ್ವಾದ ಪೂರ್ವಕವಾಗಿ ಪ್ರಾಯೋಜನೆ ಮಾಡಲಿದೆ ಎಂದು ಉದ್ಗೋಷಿಸಿದರು. ಸಂಸ್ಕೃತಾಸಕ್ತರ ಕೋರಿಕೆಯಂತೆ, ಸಂಸ್ಕೃತದ ಅಭಿವೃದ್ಧಿಗೆ ತೊಡಗಿಸಿಕೊಂಡಿರುವ ‘ಸಮ್ಯಕ್’ ಸಂಸ್ಥೆಯ ಜೊತೆಗೆ ಶ್ರೀಸಂಸ್ಥಾನ ಸದಾ ಇದ್ದು, ಎಲ್ಲ ರೀತಿಯಲ್ಲಿ ಸಹಕಾರ ಹಾಗೂ ಮಾರ್ಗದರ್ಶನವನ್ನು ಮಾಡಲಿದೆ ಎಂದರು.

ಇದಕ್ಕು ಮೊದಲು ಪ್ರಧಾನ ಕಾರ್ಯದರ್ಶಿಗಳಾದ ಮನೋಜ್ ಅವರು ಪ್ರಾಸ್ತಾವಿಕ ಮಾತನಾಡಿ, ‘ಸಮ್ಯಕ್’ ಸಂಸ್ಥೆ ಸಂಸ್ಕೃತ ಕ್ಷೇತ್ರದಲ್ಲಿ ಸಂಘಟನೆಗಾಗಿ 6 ವರ್ಷಗಳ ಹಿಂದೆ ಆರಂಭವಾಗಿದ್ದು, ಸಂಸ್ಕೃತ ತಜ್ಞರು ಹಾಗೂ ಸಂಸ್ಕೃತ ವಿದ್ಯಾರ್ಥಿಗಳ ಸಂಘಟನೆ ಈ ಸಂಸ್ಥೆಯ ಉದ್ದೇಶವಾಗಿದೆ. ಸಮಾಜದಲ್ಲಿ ಸಂಸ್ಕೃತವನ್ನು ಕಲಿಸುವುದು ಈ ಸಂಸ್ಥೆಯ ಕಾರ್ಯ, 3 ಜನರಿಂದ ಆರಂಭವಾದ ಈ ಸಂಸ್ಥೆ ಈಗ ಬೆಂಗಳೂರಿನ 20ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಸಂಸ್ಕೃತದ ಬೋಧನೆ ನಡೆಯುತ್ತಿದೆ, ಮೈಸೂರು, ಚಾಮರಾಜನಗರಗಳಲ್ಲೂ ಕಾರ್ಯಾರಂಭ ಮಾಡುತ್ತಿದೆ ಎಂದರು.

ಮಾರುತಿ ಮೆಡಿಕಲ್ಸ್ ಮಾಲಿಕರಾದ ಮಹೇಂದ್ರ ಮುನ್ನೋಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಶ್ರೀಗಳಿಂದ ಆಶೀರ್ವಾದ ಪಡೆದರು. ‘ಸಮ್ಯಕ್’ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸತೀಶ್ ಎಂ ಆರ್ ದಂಪತಿಗಳು ಹಾಗೂ ಟಿ ಕೃಷ್ಣಮೂರ್ತಿ ಮುಂತಾದವರು ಶ್ರೀಗಳನ್ನು ಸ್ವಾಗತಿಸಿ, ಫಲಸಮರ್ಪಣೆ ಮಾಡಿದರು. ಕಾರ್ಯದರ್ಶಿಗಳಾದ ವೀರಭದ್ರ ಸಂಸ್ಥೆಯ ಮುಂದಿನ ಯೋಜನೆಗಳ ಪರಿಚಯವನ್ನು ಮಾಡಿದರು.

ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಬೆಳಗ್ಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರೆ, ಚಿಂತಕರಾದ ಚಕ್ರವರ್ತಿ ಸೂಲಿಬೆಲೆ ಸಂಸ್ಕೃತದ ಕುರಿತಾಗಿ ಮಾತನಾಡಿದರು. ನೂರಾರು ಸಂಸ್ಕೃತಾಭಿಮಾನಿಗಳು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.