Monday, November 25, 2024
ಸುದ್ದಿ

ಪುತ್ತೂರು : ವಿವೇಕಾನಂದ IAS ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆದ “ಯಶಸ್ 2023-24ನೇ ಸಾಲಿನ ನೇರ ಪ್ರಕ್ರಿಯೆ” ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : ಹಿರಿಯರು ಬಿತ್ತಿದ ಯಶಸ್ ಐ.ಎ. ಎಸ್. ಅಧ್ಯಯನ ಕೇಂದ್ರ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಎಂಟು ವರ್ಷಗಳ ಹಿಂದೆ ವಿದ್ಯಾರ್ಥಿಗಳಿಗೆ ಉಚಿತ ಐ. ಎ. ಎಸ್ ತರಬೇತಿ ನೀಡುವ ನಿಟ್ಟಿನಲ್ಲಿ ಪ್ರಾರಂಭವಾದ ಯಶಸ್ ಅಧ್ಯಯನ ಕೇಂದ್ರವು ಉತ್ತಮ ತರಬೇತಿ ನೀಡುವಲ್ಲಿ ಸಾಕ್ಷಿಯಾಗಿದೆ. ಇಲ್ಲಿ ತರಬೇತಿ ಪಡೆಯಲು ಆಯ್ಕೆಯಾದ ವಿದ್ಯಾರ್ಥಿಗಳು ನಿರ್ಲಕ್ಷ್ಯದಿಂದ ಇರಬಾರದು ಬದಲಾಗಿ ಅವಕಾಶವನ್ನು ಬಳಸಿಕೊಳ್ಳುವಲ್ಲಿ ನಿರತರಾಗಬೇಕು. ಐ. ಎ. ಎಸ್. ಎಂಬುವುದು ಹೂವಿನ ಹಾಸಿಗೆಯಲ್ಲ ಬದಲಾಗಿ ಕಲ್ಲುಮುಳ್ಳಿನ ದಾರಿಯಾಗಿರುತ್ತದೆ. ಇದನ್ನು ಮೆಟ್ಟಿ ನಿಂತವನಿಗೆ ಯಶಸ್ಸು ಖಂಡಿತ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಕಾರ್ಯದರ್ಶಿ ಡಾ. ಕೃಷ್ಣ ಭಟ್ ಕೆ. ಎಂ. ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಯಶಸ್ ವಿವೇಕಾನಂದ ಐ. ಎ. ಎಸ್. ಅಧ್ಯಯನ ಕೇಂದ್ರ ನೆಹರು ನಗರ, ಪುತ್ತೂರು ಇದರ ಆಶ್ರಯದಲ್ಲಿ ನಡೆದ ಯಶಸ್ 2023-24 ನೇ ಸಾಲಿನ ನೇರ ಪ್ರಕ್ರಿಯೆ ಉದ್ಘಾಟನಾ ಸಮಾರಂಭದ ಉದ್ಘಾಟಕರಾಗಿ ಮಾತನಾಡಿದರು.

ಐಎಎಸ್ ತರಬೇತಿ ಪಡೆಯಲಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ನಿರ್ದಿಷ್ಟ ಗುರಿ ಇರಬೇಕು. ಅದನ್ನು ಸದಾ ಜ್ಞಾಪಿಸುತ್ತಿರಬೇಕು. ಮನಸ್ಸಿನಲ್ಲಿ ಗುರಿಯನ್ನು ಯೋಚಿಸಿ, ಕೃತಿಯಲ್ಲಿ ಪ್ರಕಟಗೊಳಿಸಬೇಕು ಹಾಗೂ ಗುರಿಯನ್ನು ಸಾಧಿಸುವ ಮೂಲಕ ಯಶಸ್ಸನ್ನು ಹೊಂದಬೇಕು. ಹೀಗೆ ತರಬೇತಿ ಪಡೆಯುವ ಪ್ರತಿಯೊಬ್ಬರಿಗೂ ಜೀವನದಲ್ಲಿ ಯಶಸ್ಸಿನ ದರ್ಶನವಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಶಸ್ ಐಎಎಸ್ ಅಧ್ಯಯನ ಕೇಂದ್ರದ ಅಧ್ಯಕ್ಷ ಕೃಷ್ಣನಾರಾಯಣ ಮುಳಿಯ ಮಾತನಾಡಿ, ಸಮಾಜದಲ್ಲಿ ವಿಶೇಷವಾಗಿ ಗುರುತಿಸಲ್ಪಟ್ಟಿರುವ ಕ್ಷೇತ್ರ ನಾಗರಿಕ ಸೇವಾ ಕ್ಷೇತ್ರ. ದೇಶ ಕಟ್ಟುವ ಮೂಲಕ ದೇಶ ಸೇವೆಯನ್ನು ಮಾಡಬಹುದು. ಈ ಕೆಲಸ ನಾಗರಿಕ ಸೇವಾ ಕ್ಷೇತ್ರದಿಂದಲೇ ಸಾಧ್ಯ. ತರಬೇತಿ ಪಡೆಯಲು ಆಯ್ಕೆಯಾದ ವಿದ್ಯಾರ್ಥಿಗಳೆಲ್ಲ ನಿರ್ದಿಷ್ಟ ಗುರಿಯನ್ನು ಇರಿಸಿಕೊಂಡು ದೇಶ ಸೇವೆಗೆ ಮುಂದಾಗಬೇಕು ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಸ್ವಾಯತ್ತ ಕಾಲೇಜಿನ ಸಂಚಾಲಕ ಮುರಳಿ ಕೃಷ್ಣ ಕೆ ಎನ್ ಮಾತನಾಡಿ, ದೇಶಕ್ಕಾಗಿ ಕೆಲಸ ಮಾಡಬೇಕೆ ಹೊರತು ವೇತನಕ್ಕಾಗಿ ಕೆಲಸ ಮಾಡಬಾರದು. ದೇಶ ನಿಜವಾಗಿಯೂ ಅಭಿವೃದ್ಧಿ ಹೊಂದಲು, ಬಲಿಷ್ಠ ದೇಶ ಎನಿಸಿಕೊಳ್ಳಲು, ಐಎಎಸ್ ಅಧಿಕಾರಿಗಳ ತಂಡ ಅತ್ಯಗತ್ಯ. ಹಾಗಾಗಿ ಪ್ರತಿಯೊಬ್ಬರಿಗೂ ಐಎಎಸ್ ಆಗುವ ಗುರಿ ಇರಬೇಕು ಇದಕ್ಕೆ ಬೇಕಾದ ದಾರಿ ಯಶಸ್ ನೀಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಯಶಸ್ ಐಎಎಸ್ ಅಧ್ಯಯನ ಕೇಂದ್ರದ ಕಾರ್ಯದರ್ಶಿ, ಪುತ್ತೂರು ಉಮೇಶ್ ನಾಯಕ್ ಯಶಸ್ ಐಎಎಸ್ ಅಧ್ಯಯನ ಕೇಂದ್ರದ ಸಯೋಜಕ ಡಾ. ಪ್ರಮೋದ್ ಎಂಜಿ ಯಶಸ್ ಅಧ್ಯಯನ ಕೇಂದ್ರದ ತರಬೇತುಗಾರ ದರ್ಶನ್ ಜಿ. ಉಪಸ್ಥಿತರಿದ್ದರು. ಯಶಸ್ ಐಎಎಸ್ ಅಧ್ಯಯನ ಕೇಂದ್ರದ ಕಾರ್ಯದರ್ಶಿ ಉಮೇಶ್ ನಾಯಕ್ ಸ್ವಾಗತಿಸಿ, ಯಶಸ್ ಐಎಎಸ್ ಅಧ್ಯಯನ ಕೇಂದ್ರದ ಸಂಯೋಜಕ ಡಾಕ್ಟರ್ ಪ್ರಮೋದ್ ಎಂ.ಜಿ ವಂದಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ ಎಸ್ ಕಾರ್ಯಕ್ರಮ ನಿರೂಪಿಸಿದರು.