Sunday, January 19, 2025
ಕಾಸರಗೋಡುದಕ್ಷಿಣ ಕನ್ನಡಬೆಂಗಳೂರುಸುದ್ದಿ

ಕಾಸರಗೋಡು ಕನ್ನಡದ ಅಸ್ಮಿತೆಯ ಸಂಕೇತವಾಗಿರುವ ಎಡನೀರು ಮಠಕ್ಕೆ ರಾಜ್ಯ ಸರಕಾರದ ಪ್ರತಿಷ್ಠಿತ ಗಡಿನಾಡ ಚೇತನ ಪ್ರಶಸ್ತಿ ; ಬೆಂಗಳೂರಿನ ಗಾಂಧಿಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ – ಕಹಳೆ ನ್ಯೂಸ್

ಬೆಂಗಳೂರು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈ ಅವರ ಹೆಸರಲ್ಲಿ ಕೊಡಮಾಡುವ ಗಡಿನಾಡ ಚೇತನ ಪ್ರಶಸ್ತಿ ಈ ಬಾರಿ ಕಾಸರಗೋಡು ಎಡನೀರು ಮಠಕ್ಕೆ ಲಭಿಸಿದೆ. ಶ್ರೀ ಎಡನೀರು ಮಠವು ಧಾರ್ಮಿಕ ಪೀಠವಾದರೂ ಗಡಿನಾಡಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕನ್ನಡಪರ ಹೋರಾಟಗಳಲ್ಲಿ ನಿರತವಾಗಿರುವ ಸಾಂಸ್ಕೃತಿಕ ಪೀಠವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರವು ಗುರುವಾರ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ 2022-23ನೇ ಸಾಲಿನ ‘ಗಡಿನಾಡ ಚೇತನ’ ಪ್ರಶಸ್ತಿ ವಿತರಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರಾಜ್ಯದ ಮುಖ್ಯಮಂತ್ರಿಯಾಗಿ ಕನ್ನಡದ ರಕ್ಷಣೆ, ಪೋಷಣೆ ಮತ್ತು ಭವಿಷ್ಯವನ್ನು ಕಾಪಾಡುವುದು ನನ್ನ ಕರ್ತವ್ಯವಾಗಿದೆ. ಆದ್ದರಿಂದ ಗಡಿನಾಡ ಕನ್ನಡಿಗರು ಮತ್ತು ಅವರ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದರು.

ಹಿಂದಿನ ಸರ್ಕಾರಗಳು ಗಡಿ ಅಭಿವೃದ್ಧಿಗೆ 8ರಿಂದ 10 ಕೋಟಿ ರೂ.ಗಳನ್ನು ನೀಡುತ್ತಿದ್ದವು. ಆದರೆ, ನಮ್ಮ ಸರ್ಕಾರ 25 ಕೋಟಿ ರೂ.ಗಳನ್ನು ನೀಡಿದೆ. ಇದರ ಜತೆಗೆ ನಮ್ಮ ಗಡಿಯಲ್ಲಿರುವ ಜನರಿಗೆ ಸೌಕರ್ಯ, ಅವಕಾಶ ಮತ್ತು ಭವಿಷ್ಯ ರೂಪಿಸುವುದಕ್ಕಾಗಿ ಮಾ.31ರೊಳಗೆ 100 ಕೋಟಿ ರೂ. ನೀಡಲಾಗುವುದು. ಗಡಿ ಅಭಿವೃದ್ಧಿಗೆ ಸರಿಯಾದ ಕ್ರಿಯಾ ಯೋಜನೆ ರೂಪಿಸಿಕೊಟ್ಟರೆ ಮುಂದಿನ ವರ್ಷ ಮತ್ತೆ 100 ಕೋಟಿ ರೂ. ನೀಡುತ್ತೇವೆ ಎಂದು ಭರವಸೆ ನೀಡಿದರು.

ಗಡಿನಾಡ ಕನ್ನಡದ ಅಸ್ಮಿತೆಯ ಸಂಕೇತ

ಸುಮಾರು 60 ವರ್ಷಗಳ ಹಿಂದೆಯೇ ಶ್ರೀ ಈಶ್ವರಾನಂದ ಭಾರತೀ ಸ್ವಾಮೀಜಿ ಕನ್ನಡ ಪ್ರೌಢ ಶಾಲೆಯನ್ನು ಆರಂಭಿಸಿ ಆ ಮೂಲಕ ಕನ್ನಡದ ಅಸ್ಮಿತೆಯನ್ನು ಉಳಿಸುವಂತಹ ಕಾರ‍್ಯವನ್ನು ಬ್ರಹ್ಮೈಕ್ಯರಾದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಮಾಡಿದ್ದಾರೆ.

ಸ್ವತಹಃ ಯಕ್ಷಗಾನ ಭಾಗವತರಾಗಿದ್ದ ಕೇಶವಾನಂದ ಭಾರತೀ ಸ್ವಾಮೀಜಿಯವರು ಶ್ರೀ ಮಠದಲ್ಲಿ ನಿತ್ಯ ನಿರಂತರ ಸಂಗೀತ ಸಾಹಿತ್ಯ ಕಾರ‍್ಯಕ್ರಮಗಳು, ಯಕ್ಷಗಾನ ಶಿಬಿರ, ಗಮಕ, ಶಾಸ್ತ್ರೀಯ ಸಂಗೀತ, ಭರತನಾಟ್ಯ, ಸಂವಾದ, ಗೋಷ್ಠಿಗಳು, ಯಕ್ಷಗಾನ ಪ್ರದರ್ಶನಗಳು, ತಾಳಮದ್ದಳೆ ಕೂಟ, ಗಳನ್ನು ಏರ್ಪಡಿಸುತ್ತಿದ್ದರು.

ಯಕ್ಷಗಾನಕ್ಕ ಅನ್ಯನ್ಯ ಕೊಡುಗೆ

ಯಕ್ಷಗಾನ ಕ್ಷೇತ್ರಕ್ಕಂತೂ ಶ್ರೀಮಠದ ಕೊಡುಗೆ ಅನನ್ಯ. ಕೇಶವಾನಂದ ಶ್ರೀಗಳ ಅವಧಿಯಲ್ಲಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿ ಪ್ರಾರಂಭವಾಗಿತ್ತು. ದಶಕಗಳ ಕಾಲ ಕೇರಳ ಮತ್ತು ಕರ್ನಾಟಕಗಳಲ್ಲಿ ಸುತ್ತಾಡಿ ಕಲಾಸೇವೆ ಮಾಡಿತ್ತು. ಈಗಲೂ ಕನ್ನಡ ಯಕ್ಷಗಾನಕ್ಕೆ ಸಂಬಂಧಿಸಿ ಪ್ರತಿನಿತ್ಯ ಕಾರ್ಯಕ್ರಮಗಳು ಶ್ರೀಮಠದಲ್ಲಿ ನಡೆಯುತ್ತಿರುತ್ತದೆ. ಕಾಸರಗೋಡು ಜಿಲ್ಲೆಯ ಅನೇಕ ಕನ್ನಡ ಚಟುವಟಿಕೆಗಳು, ಕನ್ನಡಪರ ಹೋರಾಟಗಳಲ್ಲಿ ಸ್ವಾಮೀಜಿಯವರು ಭಾಗವಹಿಸಿದ್ದರು.

ಪ್ರಸ್ತುತ ಶ್ರೀ ಎಡನೀರು ಮಠಾಧೀಶರಾದ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಕೂಡ ಇದೇ ರೀತಿಯಲ್ಲಿ ಕನ್ನಡ ನಾಡು-ನುಡಿ ಸಂಸ್ಕೃತಿ ಬಗ್ಗೆ ಅಪಾರವಾದ ಅಭಿಮಾನ ಹೊಂದಿದ್ದು, ತಮ್ಮ ಹಿರಿಯ ಶ್ರೀಗಳು ಹಾಕಿಕೊಟ್ಟ ಕನ್ನಡದ ಸಂಸ್ಕೃತಿಯ ಪಥದಲ್ಲಿ ಮುಂದುವರಿಯುತ್ತಿದ್ದಾರೆ.

ಕಾಸರಗೋಡಿನಲ್ಲಿ ಕನ್ನಡದ ಅಸ್ಮಿತೆಯ ಸಂಕೇತವಾದ ಶ್ರೀ ಎಡನೀರು ಮಠವು ಸಾಂಸ್ಕೃತಿಕ ಕ್ಷೇತ್ರ ಮತ್ತು ಕನ್ನಡಿಗರ ಹಿತಾಸಕ್ತಿ ಕಾಪಾಡುವ ದಿಸೆಯಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಕಾಸರಗೋಡಿನ ಕನ್ನಡದ ಕಣ್ಮಣಿ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಅವರ ಹೆಸರಿನಲ್ಲಿ ಸ್ಥಾಪಿಸಿರುವ 2022-23ನೇ ಸಾಲಿನ ಗಡಿನಾಡ ಚೇತನ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.

ಜನರಿಗಿಲ್ಲದ ಸಮಸ್ಯೆ ಬೆಳೆಸುವುದು ಸರಿಯಲ್ಲ:
ಭಾಷಾವಾರು ಪ್ರಾದೇಶಿಕ ರಾಜ್ಯಗಳು ವಿಂಗಡಣೆಯಾದ ಸಂದರ್ಭದಲ್ಲಿ ಗಡಿ ಪ್ರದೇಶದಲ್ಲಿ ನೇರವಾಗಿ ರೇಖೆ ಎಳೆಯಲು ಸಾಧ್ಯವಿಲ್ಲ. ಸಹಜವಾಗಿ ಕೆಲವೊಂದು ವ್ಯತ್ಯಾಸಗಳು ಸಂಭವಿಸುತ್ತವೆ. ಆದರೆ, ಕಾಲ ಉರುಳಿದಂತೆ ಆಗಿರುವ ವ್ಯತ್ಯಾಸಗಳು ಮತ್ತು ಗಾಯಗಳನ್ನು ಮರೆತು ಸಾಮರಸ್ಯದಿಂದ ಒಂದಾಗಿರಬೇಕು. ಅದು ಸಾಧ್ಯವಾಗುಲಿಲ್ಲ ಎಂಬ ಕೊರಗು ಕನ್ನಡಿಗರಿಗೆ ಇದೆ ಎಂದರು.

ಗಡಿಯಲ್ಲಿ ವಾಸಿಸುವ ಯಾವುದೇ ಭಾಷೆ ಜನರು ನೆಮ್ಮದಿಯಿಂದ ಬಾಳುತ್ತಿದ್ದಾರೆ. ಜನರ ಮಧ್ಯೆ ಇಲ್ಲದ ಸಮಸ್ಯೆಯನ್ನು ಬೆಳೆಸಿಕೊಂಡು ಹೋಗುವುದು ಯಾವುದೇ ರಾಜ್ಯಕ್ಕಾಗಲಿ ಅಥವಾ ದೇಶಕ್ಕಾಗಲಿ ಸರಿಯಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಕನ್ನಡಕ್ಕೆ ಆತಂಕವಿಲ್ಲ, ಇಂಗ್ಲಿಷ್ ಅಡ್ಡಗೋಡೆ ಮೇಲಿನ ದೀಪ:
ಕೆಲವರು ಹಲವು ಸಂದರ್ಭದಲ್ಲಿ ಕನ್ನಡಕ್ಕೆ ಆತಂಕವಿದೆ ಎಂದು ಹೇಳುತ್ತಾರೆ. ಆದರೆ, ಕನ್ನಡಕ್ಕೆ ಯಾವುದೇ ಆತಂಕವಿಲ್ಲ. ಏಕೆಂದರೆ, ಕನ್ನಡ ಅಕ್ಷರ, ಭಾವಾರ್ಥದಲ್ಲಿರುವ ಶಕ್ತಿ ಯಾವುದೇ ಭಾಷೆಯಲ್ಲಿ ಇಲ್ಲ. ಸಾಹಿತ್ಯ ರಚನೆ ಪೈಪೋಟಿ, ಪ್ರಶಸ್ತಿ ರಾಜಕೀಯ ಮತ್ತು ಪ್ರಭಾವಗಳ ನಡುವೆಯೂ ಅತಿ ಹೆಚ್ಚು ಜ್ಞಾನಪೀಠ ಬಂದಿದೆ. ಕನ್ನಡದಲ್ಲಿ ಸ್ಪಷ್ಟತೆ ಮತ್ತು ನಿಖರತೆ ಇದೆ. ಇಂಗ್ಲಿಷ್ ಅಡ್ಡಗೋಡೆ ಮೇಲೆ ದೀಪ ಇಟ್ಟ ಭಾಷೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್, ಹಿರಿಯ ಸಾಹಿತಿ ಡಾ, ಚಂದ್ರಶೇಖರ ಕಂಬಾರ, ಮಾಜಿ ಸಚಿವರಾದ ಲೀಲಾದೇವಿ ಆರ್. ಪ್ರಸಾದ್, ರಾಣಿ ಸತೀಶ್ ಉಪಸ್ಥಿತರಿದ್ದರು.

ಸಿಂಧೂರ, ಚಂದರಗಿ, ಎಡನೀರು ಮಠಕ್ಕೆ ಪ್ರಶಸ್ತಿ
ಗಡಿನಾಡಿನ ಕನ್ನಡ ಹೋರಾಟಗಾರ ಮಹಾರಾಷ್ಟ್ರದ ಜತ್ತ ಗ್ರಾಮದ ಎಂ.ಎನ್. ಸಿಂಧೂರ ಅವರಿಗೆ ಡಾ. ಚನ್ನಬಸವ ಪಟ್ಟದೇವರು ಪ್ರಶಸ್ತಿ, ಬೆಳಗಾವಿಯ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಅವರಿಗೆ ಕನ್ನಡದ ಏಕೀಕರಣದ ಹೋರಾಟದ ವೀರಾಗ್ರಣಿ ಡಾ. ಜಯದೇವಿತಾಯಿ ಲಿಗಾಡೆ ಪ್ರಶಸ್ತಿ ಮತ್ತು ಕಾಸರಗೋಡಿನ ಎಡನೀರು ಸಾಂಸ್ಕೃತಿಕ ಮಠಕ್ಕೆ ನಾಡೋಪ ಡಾ. ಕಯ್ಯಾರ ಕಿಞ್ಞಣ್ಣ ರೈ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಬಹುಮಾನ ಮತ್ತು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ವಚನ ಸಾಹಿತ್ಯವನ್ನು ಜಗತ್ತಿನ ವಿವಿಧ 120 ದೇಶಗಳಲ್ಲಿ ಅಧ್ಗಯನ ನಡೆಸಲಾಗುತ್ತಿದೆ. ಹೊರ ರಾಜ್ಯ ಮತ್ತು ದೇಶಗಳಲ್ಲಿ ವಚನ ಸಾಹಿತ್ಯವು ತುಂಬಾ ಪ್ರಚಾರದಲ್ಲಿದೆ. ಜನಸಾಮಾನ್ಯರ ಭಾಷೆಯಲ್ಲಿರುವ ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯವು ಶ್ರೇಷ್ಠ ಸಾಹಿತ್ಯವಾಗಿದೆ.
– ಡಾ. ಚಂದ್ರಶೇಖರ ಕಂಬಾರ, ಹಿರಿಯ ಸಾಹಿತಿ