ಫೆ.11ರಂದು ಪುತ್ತೂರಿಗೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ, ಸಹಕಾರಿ ಸಮಾವೇಶ ಯಶಸ್ಸಿಗೆ ಸಂಸದ ನಳಿನ್ ಸೂಚನೆ – ಈಶ್ವರಮಂಗಲ ಹನುಮಗಿರಿ ಭಾರತ ಮಾತಾ ಮಂದಿರ ಉದ್ಘಾಟನೆ ; ಎಂ.ಟಿ. ರಸ್ತೆಯಲ್ಲಿ ಕ್ಯಾಂಪ್ಕೋ ಅಗ್ರಿ ಮಾಲ್‌ಗೆ ಶಿಲಾನ್ಯಾಸ – ಕಹಳೆ ನ್ಯೂಸ್
ಪುತ್ತೂರು : ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಫೆ. 11ರಂದು ಹಮ್ಮಿಕೊಳ್ಳಲಾಗಿರುವ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಹಾಗೂ ಸಹಕಾರ ಸಮಾವೇಶದಲ್ಲಿ ಕೇಂದ್ರ ಗೃಹ ಮತ್ತು ಸಹಕಾರಿ ಸಚಿವರಾದ ಅಮಿತ್ ಶಾ ಭಾಗವಹಿಸಲಿದ್ದಾರೆ.
ಜಿಲ್ಲಾಡಳಿತ ತತ್‌ಕ್ಷಣದಿಂದಲೇ ಎಲ್ಲ ತಯಾರಿ, ಸಿದ್ಧತೆ ನಡೆಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ನಿರ್ದೇಶನ ನೀಡಿದ್ದಾರೆ.
ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
3 ಹೆಲಿಪ್ಯಾಡ್
ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಮಾತನಾಡಿ, ಸಚಿವರು ಕಣ್ಣೂರಿನಿಂದ ಹೆಲಿಕಾಪ್ಟರ್ ಮೂಲಕ ನೇರವಾಗಿ ಈಶ್ವರ ಮಂಗಲಕ್ಕೆ ಬರುವುದರಿಂದ ಸ್ಥಳೀಯ ಗಜಾನನ ಆಂಗ್ಲ ಮಾಧ್ಯಮ ಶಾಲೆಯ ಮೈದಾನದಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗುವುದು. ಹೆಲಿಪ್ಯಾಡ್‌ನಿಂದ 100 ಮೀ. ದೂರದಲ್ಲಿರುವ ಹನುಮಗಿರಿ ದೇವಸ್ಥಾನಕ್ಕೆ ಸಚಿವರು ಕಾರಿನಲ್ಲಿ ಭೇಟಿ ನೀಡಲಿದ್ದಾರೆ. ಬಳಿಕ ಭಾರತ್ ಮಾತಾ ಮಂದಿರದಲ್ಲಿ ಕಾರ್ಯಕ್ರಮ ಮುಗಿಸಿ ಮತ್ತೆ ಹೆಲಿಪ್ಯಾಡ್‌ಗೆ ಬಂದು ಅಲ್ಲಿಂದ ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿನ ಮೈದಾನದ ಹೆಲಿಪ್ಯಾಡ್‌ನಲ್ಲಿ ಇಳಿಯಲಿದ್ದಾರೆ. ಇಲ್ಲಿ ಎರಡು ಹೆಲಿಪ್ಯಾಡ್‌ಗಳು ನಿರ್ಮಾಣವಾಗಲಿವೆ. ಒಂದನ್ನು ಗೃಹ ಸಚಿವರಿಗೆ ನಿಗದಿಪಡಿಸಲಾಗಿದೆ. ಇನ್ನೊಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮೀಸಲು ಎಂದರು.
ಪರ್ಯಾಯವಾಗಿ ರಸ್ತೆಯ ಮೂಲಕ ಸಂಚರಿಸಲೂ ಅನುಕೂಲವಾಗುವಂತೆ ರಸ್ತೆ ಸುರಕ್ಷೆ, ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಎಸ್‌ಪಿಜಿ ಅಧಿಕಾರಿಗಳು ಮತ್ತು ಜಿಲ್ಲಾ ಎಸ್‌ಪಿಯವರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಹೆಲಿಪ್ಯಾಡ್‌ನ ಸುರಕ್ಷತೆ ಉಸ್ತುವಾರಿ ಇದೇ ತಂಡ ವಹಿಸಿಕೊಳ್ಳಲಿದೆ ಎಂದರು.
ಕಾರ್ಯಕ್ರಮ ವಿವರ: ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮಾತನಾಡಿ, ಫೆ. 10ರಿಂದ 12ರ ವರೆಗೆ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಕ್ಯಾಂಪ್ಕೋ ಯಂತ್ರಮೇಳ ನಡೆಯಲಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಲಿದ್ದಾರೆ. ಕ್ಯಾಂಪ್ಕೋ 50ನೇ ವರ್ಷಾಚರಣೆಗೆ ಈ ವೇಳೆ ಚಾಲನೆ ನೀಡಲಾಗುವುದು. ಫೆ. 11ರಂದು ಅಮಿತ್ ಶಾ ಅವರು ಪುತ್ತೂರಿನ ಎಂ.ಟಿ. ರಸ್ತೆಯಲ್ಲಿ ಕ್ಯಾಂಪ್ಕೋ ಅಗ್ರಿ ಮಾಲ್‌ಗೆ ಶಿಲಾನ್ಯಾಸ ನೆರವೇರಿಸುವರು ಎಂದರು.
ಸಚಿವರ ದಂಡು ನಿರೀಕ್ಷೆ
ಜಿಲ್ಲೆಯಲ್ಲಿ ಸಹಕಾರಿ ಇಲಾಖೆಗೆ ಸಂಬಂಧಿಸಿದಂತೆ 66 ಸಾವಿರ ಫಲಾನುಭವಿಗಳಿದ್ದು, 1218 ಕೋ.ರೂ. ಅನುದಾನ ಪಡೆದುಕೊಂಡಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 1.12 ಲಕ್ಷ ಫಲಾನುಭವಿಗಳಿದ್ದು, 28-30 ಕೋಟಿ ರೂ. ಒದಗಿಸಲಾಗಿದೆ. ರಾಜ್ಯದಿಂದ ಮುಖ್ಯಮಂತ್ರಿ, ಗೃಹಸಚಿವರು, ಸಹಕಾರ ಸಚಿವರು ಸೇರಿದಂತೆ ಸುಮಾರು 12-13 ಮಂದಿ ಸಚಿವರು ಭಾಗವಹಿಸುವ ನಿರೀಕ್ಷೆಯಿದೆ.
ಪುತ್ತೂರು ಶಾಸಕ ಸಂಜೀವ ಮಠಂದೂರು, ಜಿ.ಪಂ. ಸಿಇಒ ಡಾ| ಕುಮಾರ್, ನಗರ ಪೊಲೀಸ್ ಎನ್. ಶಶಿಕುಮಾರ್, ಎಸ್.ಪಿ. ಡಾ| ಅಮಟೆ ವಿಕ್ರಮ್, ಅಪರ ಜಿಲ್ಲಾಧಿಕಾರಿ ಎಚ್. ಕೃಷ್ಣಮೂರ್ತಿ, ಡಿಸಿಪಿ ಅಂಶು ಕುಮಾರ್ ಉಪಸ್ಥಿತರಿದ್ದರು.
ಅಮಿತ್ ಶಾ ಪ್ರವಾಸ ವಿವರ
ಅಮಿತ್ ಶಾ ಹೈದರಾಬಾದ್‌ನಿಂದ ಮಧ್ಯಾಹ್ನ 12ಕ್ಕೆ ಗಂಟೆಗೆ ಹೊರಡಲಿದ್ದು, 1.10ಕ್ಕೆ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಜಇಳಿಯಲಿದ್ದಾರೆ. 1.25ಕ್ಕೆ ಹೊರಟು 1.50ಕ್ಕೆ ಈಶ್ವರಮಂಗಲ ತಲುಪಲಿದ್ದು, ಅಲ್ಲಿ ಭಾರತ ಮಾತಾ ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 2.35ಕ್ಕೆ ಹೊರಟು 2.45ಕ್ಕೆ ಪುತ್ತೂರು ತಲುಪಲಿದ್ದಾರೆ. 3ರಿಂದ 4.45ರ ವರೆಗೆ ಕೃಷಿಕ ಸಹಕಾರಿಗಳ ಸಾರ್ವಜನಿಕ ಸಭೆ ನಡೆಯಲಿದೆ. 4.50ಕ್ಕೆ ಅಲ್ಲಿಂದ ಹೊರಟು 5ಕ್ಕೆ ಕ್ಯಾಂಪ್ಕೋ ಕಚೇರಿಗೆ ಭೇಟಿ ನೀಡಲಿದ್ದಾರೆ. 5.30ಕ್ಕೆ ಹೊರಟು ಮಂಗಳೂರಿಗೆ ಭೇಟಿ ನೀಡಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ ವಿಮಾನದಲ್ಲಿ ಮಂಗಳೂರಿನಿಂದ ತೆರಳಲಿದ್ದಾರೆ.